ಬೆಂಗಳೂರು, ಸೆಪ್ಟೆಂಬರ್ 30:ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರ ಹೆಸರಿನಲ್ಲಿ ನಕಲಿ ಜಿಪಿಎಸ್ ಫೋಟೋಗಳನ್ನು ಬಳಸಿ ಅಕ್ರಮ ಹಾಜರಾತಿ ದಾಖಲಿಸಲಾಗುತ್ತಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಇಲಾಖಾ ಮಟ್ಟದ ತನಿಖೆಗೆ ಆದೇಶ ನೀಡಿದ್ದಾರೆ.
ಈ ಸಂಬಂಧ ಇಲಾಖೆಯ ಕಾರ್ಯದರ್ಶಿಗಳಿಗೆ ಲಿಖಿತ ಸೂಚನೆ ನೀಡಿರುವ ಸಚಿವರು, ಕೊಪ್ಪಳ ಜಿಲ್ಲೆಯಲ್ಲಿ ಮೇಟಿಗಳು ಕಾಮಗಾರಿ ನಡೆಯುವ ಸ್ಥಳಕ್ಕೆ ಕಾರ್ಮಿಕರು ತೆರಳದೇ, ಪೂರ್ವಭಾವಿಯಾಗಿ ಚಿತ್ರೀಕರಿಸಿದ ವಿಡಿಯೋವನ್ನು ಮತ್ತೊಂದು ಮೊಬೈಲ್ನಲ್ಲಿ ಪ್ರದರ್ಶಿಸಿ ಅದರ ಜಿಪಿಎಸ್ ಫೋಟೋ ತೆಗೆದು ಎನ್ಎಂಎಂಎಸ್ (NMMS) ಆ್ಯಪ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಅಕ್ರಮವಾಗಿ ಹಾಜರಾತಿ ದಾಖಲಿಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಪ್ರಕರಣದ ಕುರಿತು ಜಂಟಿ ನಿರ್ದೇಶಕರ ಹುದ್ದೆಯ ಅಧಿಕಾರಿಯಿಂದ ಸಮಗ್ರ ತನಿಖೆ ನಡೆಸಿ ನಾಲ್ಕು ದಿನಗಳೊಳಗೆ ವರದಿ ಸಲ್ಲಿಸುವಂತೆ ಸಚಿವರು ಸೂಚಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಈ ವಿಧಾನದಿಂದ ಪ್ರತಿದಿನ ಸುಮಾರು ₹20,000 ರಿಂದ ₹30,000 ವರೆಗೆ ವಂಚನೆ ನಡೆಯುತ್ತಿದ್ದು, ಕೆಲಸ ಮಾಡದವರ ಹೆಸರಿನಲ್ಲಿ ಹಾಜರಾತಿ ದಾಖಲಿಸಿ ಸರ್ಕಾರಿ ಹಣ ದುರುಪಯೋಗ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ವರದಿಯಲ್ಲಿರುವ ಆರೋಪಗಳು ಸತ್ಯವೆಂದು ದೃಢಪಟ್ಟಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಿಫಾರಸು ಸಲ್ಲಿಸುವುದರ ಜೊತೆಗೆ, ಇಂತಹ ತಂತ್ರಜ್ಞಾನ ದುರುಪಯೋಗವನ್ನು ತಡೆಯಲು ತಜ್ಞರ ಸಲಹೆ ಪಡೆದು ಅಗತ್ಯ ತಾಂತ್ರಿಕ ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ನಿರ್ದೇಶಿಸಿದ್ದಾರೆ.
ಕೂಲಿ ಕಾರ್ಮಿಕರ ಹೆಸರಿನಲ್ಲಿ ಯಂತ್ರಗಳನ್ನು ಬಳಸಿ ಕಾಮಗಾರಿ ನಡೆಸಿ ಅಕ್ರಮ ಹಾಜರಾತಿ ದಾಖಲಿಸುವುದನ್ನು ತಡೆಯುವ ಉದ್ದೇಶದಿಂದ ವಿಬಿಜಿ ರಾಮ್ ಜಿ ಯೋಜನೆಯಡಿ ಕಾಮಗಾರಿ ಸ್ಥಳದಲ್ಲೇ ಕೆಲಸ ಮಾಡುತ್ತಿರುವ ಕಾರ್ಮಿಕರ ಜಿಪಿಎಸ್ ಆಧಾರಿತ ಫೋಟೋವನ್ನು ತೆಗೆದು NMMS ಆ್ಯಪ್ ನಲ್ಲಿ ಅಪ್ಲೋಡ್ ಮಾಡುವ ವ್ಯವಸ್ಥೆಯನ್ನು ಸರ್ಕಾರ ಕಡ್ಡಾಯಗೊಳಿಸಿತ್ತು. ಆದರೆ, ಈ ವ್ಯವಸ್ಥೆಯನ್ನೇ ಕೆಲವರು ದುರುಪಯೋಗಪಡಿಸಿಕೊಂಡಿರುವ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ತನಿಖೆ ಆರಂಭಿಸಿದೆ.

