ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಬಂದ ಹಣವನ್ನು ಮೃತ ಅಂಜಲಿ ಕುಟುಂಬಸ್ಥರಿಗೆ ನೀಡಲು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮುಂದಾಗಿ1ದ್ದಾರೆ.
ಚಿಕ್ಕೋಡಿ: ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಕೊಲೆಯಾದ ಅಂಜಲಿ ಅಂಬಿಗೇರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮುಂದಾಗಿದ್ದಾರೆ. ಇಂದು ಸಂಪ್ರದಾಯದಂತೆ ಹಿರೇಮಠದ ವಟುಗಳಿಗೆ ವಿಶೇಷ ದೀಕ್ಷೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ದೀಕ್ಷೆ ಪಡೆದ ವಟುಗಳು ಜೋಳಿಗೆ ಹಾಕಿಕೊಂಡು ಭಿಕ್ಷಾಟನೆ ಮಾಡಿ ಅದರಿಂದ ಬಂದ ಹಣವನ್ನು ಮಠದ ಶ್ರೀಗಳಿಗೆ ನೀಡುವುದು ವಾಡಿಕೆ. ಅದರಂತೆ ಚಂದ್ರಶೇಖರ ಶ್ರೀಗಳು ಈ ಹಣಕ್ಕೆ ತಮ್ಮ ಕೈಯಿಂದ ಸ್ಪಲ್ಪ ಮೊತ್ತವನ್ನು ಸೇರಿಸಿ ಅಂಜಲಿ ಕುಟುಂಬಕ್ಕೆ ಐವತ್ತು ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ.
ಈ ಕುರಿತು ಹುಕ್ಕೇರಿ ಚಂದ್ರಶೇಖರ ಶ್ರೀ ಮಾತನಾಡಿ, ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಯುವತಿಯರ ಕೊಲೆಯಾಗಿದೆ. ಇಂತಹ ಹೀನ ಕೃತ್ಯ ಸಮಾಜದಲ್ಲಿ ನಡೆಯಬಾರದು. ಸರ್ಕಾರ ಇಂತಹ ಭಯಾನಕ ಕಾರ್ಯ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು. ತಪ್ಪಿತಸ್ಥರಿಗೆ ತಕ್ಷಣವೇ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಮೃತ ಅಂಜಲಿ ಅಂಬಿಗೇರ ಕುಟುಂಬ ತುಂಬಾ ಬಡತನದಲ್ಲಿ ಇರುವುದರಿಂದ ನಾವು ಇವತ್ತು ನಮ್ಮ ಮಠದ ವತಿಯಿಂದ ಸಹಾಯ ಕಾರ್ಯಕ್ಕೆ ಮುಂದಾಗಿದ್ದೇವೆ. ವಿರಶೈವ ಧರ್ಮದಲ್ಲಿ ಜಂಗಮ ದೀಕ್ಷೆ ಕೊಡುವುದು ವಾಡಿಕೆ ಇದೆ. ದೀಕ್ಷೆ ತೆಗೆದುಕೊಂಡ ಜಂಗಮರು ಗ್ರಾಮದಲ್ಲಿ ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡಿ ಬಂದ ಮೊದಲನೇ ಭಿಕ್ಷೆಯನ್ನು ಗುರುದಕ್ಷಿಣೆಯಾಗಿ ಗುರುಗಳಿಗೆ ಕೊಡುವುದು ಪ್ರತೀತಿ. ಆ ಹಣದಲ್ಲಿ ದವಸ – ಧಾನ್ಯಗಳನ್ನು ತೆಗೆದುಕೊಂಡು ಮಠ ನಡೆಸುವುದು ವಾಡಿಕೆ. ಆದರೆ ಈ ಬಾರಿ ಆರ್ಥಿಕ ಸಂಕಷ್ಟದಲ್ಲಿರುವ ಅಂಜಲಿ ಕುಟುಂಬಕ್ಕೆ ನಾವು ಈ ಹಣದ ಜೊತೆಗೆ ಮಠದಿಂದ ಸ್ವಲ್ಪ ಹಣವನ್ನು ಕೊಡಿಸಿ ನೆರವು ನೀಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು, ಸ್ವಾಮೀಜಿಗಳ ಕೈಯಲ್ಲಿ ಜೋಳಿಗೆ ಜೊತೆಗೆ ಬೆತ್ತವನ್ನು ನೀಡಲಾಗಿದೆ. ಜನರು ಆಕ್ರೋಶ ವ್ಯಕ್ತಪಡಿಸುವ ಮೊದಲು ಸರ್ಕಾರ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು. ಇದರಿಂದ ತಪ್ಪು ಮಾಡುವ ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದಂತಾಗುತ್ತದೆ ಎಂದು ಹೇಳಿದರು.

