KRGRV
Sunday, October 11, 2026
Homeಬೆಂಗಳೂರುದಲಿತರ ಸಮಸ್ಯೆಗಳತ್ತ ಸರ್ಕಾರ ಗಮನ ಹರಿಸಲಿ: ಗೃಹ ಸಚಿವರಿಗೆ ಛಲವಾದಿ ನಾರಾಯಣಸ್ವಾಮಿ ಕಿವಿಮಾತು

ದಲಿತರ ಸಮಸ್ಯೆಗಳತ್ತ ಸರ್ಕಾರ ಗಮನ ಹರಿಸಲಿ: ಗೃಹ ಸಚಿವರಿಗೆ ಛಲವಾದಿ ನಾರಾಯಣಸ್ವಾಮಿ ಕಿವಿಮಾತು

ಬೆಂಗಳೂರು, ಅಕ್ಟೋಬರ್ 10: ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ, ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೆಚ್ಚಿನ ಗಮನ ಹರಿಸಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರಿಯಾಂಕ್ ಖರ್ಗೆ ಅವರನ್ನು ನಾನು ಸಹೋದರನಂತೆ ಭಾವಿಸಿದ್ದೇನೆ. ಆದರೆ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿದ್ದು, ಹಲವು ಕೊಲೆ ಪ್ರಕರಣಗಳು ನಡೆದಿದ್ದರೂ ಈವರೆಗೆ ಸಮರ್ಪಕ ಗಮನ ಹರಿಸಿಲ್ಲ” ಎಂದು ಟೀಕಿಸಿದರು.

ಪ್ರಿಯಾಂಕ್ ಖರ್ಗೆ ಅವರಿಗೆ ಆಡಳಿತದ ಅನುಭವದ ಕೊರತೆ ಇದೆ ಎಂದು ಹೇಳಿದ ಅವರು, ಅಧಿಕಾರ ಎನ್ನುವುದು ಜನಸೇವೆಗಾಗಿ ಸಿಕ್ಕಿರುವ ಅವಕಾಶವಾಗಿದ್ದು, ಉತ್ತಮ ಆಡಳಿತ ನೀಡುವತ್ತ ಗಮನಹರಿಸಬೇಕೆಂದು ಸಲಹೆ ನೀಡಿದರು.

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ಕೇಂದ್ರ ಸರ್ಕಾರ ಯಾವುದೇ ಪ್ರತಿಭಟನೆಗೆ ಹೆದರಿಲ್ಲ ಎಂದು ಹೇಳಿದರು. ಕೆಲವು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದು, ಈ ಬೆಳವಣಿಗೆಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಗಮನಿಸಿದೆ ಎಂದು ಆರೋಪಿಸಿದರು.

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಒತ್ತಾಯದ ಬಗ್ಗೆ ಮಾತನಾಡಿದ ಅವರು, ಅದು ಸಂವಿಧಾನಾತ್ಮಕ ಹುದ್ದೆಯಾಗಿದ್ದು, ಯಾವುದೇ ಆಕ್ಷೇಪವಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕು ಹೊರತು ಬೀದಿಗಿಳಿದು ಪ್ರತಿಭಟನೆ ನಡೆಸುವುದು ಸರಿಯಾದ ಮಾರ್ಗವಲ್ಲ ಎಂದು ಹೇಳಿದರು.

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಆರೋಪಗಳನ್ನು ತಳ್ಳಿಹಾಕಿದ ಅವರು, ಚುನಾವಣಾ ಆಯೋಗವು ಯಾವುದೇ ವ್ಯಕ್ತಿಯ ಹೆಸರನ್ನು ಪರಿಶೀಲನೆ ಇಲ್ಲದೆ ತೆಗೆದುಹಾಕಿಲ್ಲ ಎಂದು ಸ್ಪಷ್ಟಪಡಿಸಿದರು. ಸತ್ತವರು ಹಾಗೂ ಅರ್ಹತೆಯಿಲ್ಲದವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು.

ಯಾವುದೇ ಅಧಿಕಾರಿಯ ರಾಜೀನಾಮೆ ಕೇಳುವ ಮುನ್ನ ಅವರು ಮಾಡಿದ ತಪ್ಪನ್ನು ಸ್ಪಷ್ಟವಾಗಿ ಸಾಬೀತುಪಡಿಸಬೇಕು ಎಂದು ಸವಾಲು ಹಾಕಿದ ನಾರಾಯಣಸ್ವಾಮಿ, ನ್ಯಾಯಾಲಯದ ಮಾರ್ಗ ಬಿಟ್ಟು ಬೀದಿ ಹೋರಾಟಗಳ ಮೂಲಕ ದೇಶದ ಪ್ರತಿಷ್ಠೆಗೆ ಧಕ್ಕೆ ತರಬಾರದು ಎಂದು ಎಚ್ಚರಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನಬದ್ಧ ಹಕ್ಕುಗಳಿಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಅವರು ಹೇಳಿದರು.

ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಿಂದಲೇ ಕಾಂಗ್ರೆಸ್ ರಾಜ್ಯದಲ್ಲಿ ಉಳಿದುಕೊಂಡಿದೆ. ಆದರೆ ಇತ್ತೀಚಿನ ಬೆಳವಣಿಗೆಗಳಿಂದ ಪಕ್ಷದ ಸ್ಥಿತಿ ದುರ್ಬಲವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇನ್ನಷ್ಟು ಸಂಕಷ್ಟ ಎದುರಿಸಲಿದೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರಿಣಾಮಕಾರಿ ನಾಯಕತ್ವದ ಕೊರತೆ ಇದೆ ಎಂದು ಟೀಕಿಸಿದ ಅವರು, ರಾಹುಲ್ ಗಾಂಧಿ ಅವರು ಬಿಜೆಪಿಗೆ ಅನುಕೂಲವಾಗುವ ರೀತಿಯ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸ್ಟಿಂಗ್ ಆಪರೇಷನ್ ಕುರಿತು ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ಗೃಹ ಸಚಿವರಿಗೆ ಕಾನೂನು ಹಾಗೂ ಆಡಳಿತದ ಅರಿವು ಇರಬೇಕು ಎಂದು ಹೇಳಿದರು. ಮಾಧ್ಯಮಗಳು ತಮ್ಮ ಕರ್ತವ್ಯದ ಭಾಗವಾಗಿ ಸ್ಟಿಂಗ್ ಆಪರೇಷನ್ ನಡೆಸುತ್ತವೆ. ಭ್ರಷ್ಟಾಚಾರ ಮಾಡದವರಿಗೆ ಅದರಿಂದ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ತಮ್ಮದೇ ಪಕ್ಷದ ಶಾಸಕರು ಹಾಗೂ ಸಚಿವರನ್ನು ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷದ ಹಳೆಯ ರಾಜಕೀಯ ಶೈಲಿಯೇ ಇದಾಗಿದೆ ಎಂದು ಟೀಕಿಸಿದರು.

ಮಹಿಷಿ ದಸರಾ ಆಚರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಕಾರ್ಯಕ್ರಮಗಳನ್ನು ಕೆಲವರು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರವು ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಹೆಚ್ಚಿನ ಸುದ್ದಿ