KRGRV
Friday, October 16, 2026
Homeಕ್ರೀಡೆದಸರಾ ಕುಸ್ತಿ ಅಖಾಡದಲ್ಲಿ ಹೆಣ್ಮಕ್ಕಳ ಧೀಮಂತ ಕಾದಾಟ: ರೀತು-ನಂದಿನಿ ಕಾದಾಟಕ್ಕೆ ಸಚಿವ ಚಲುವರಾಯಸ್ವಾಮಿ ಫಿದಾ!

ದಸರಾ ಕುಸ್ತಿ ಅಖಾಡದಲ್ಲಿ ಹೆಣ್ಮಕ್ಕಳ ಧೀಮಂತ ಕಾದಾಟ: ರೀತು-ನಂದಿನಿ ಕಾದಾಟಕ್ಕೆ ಸಚಿವ ಚಲುವರಾಯಸ್ವಾಮಿ ಫಿದಾ!

ಮೈಸೂರು (ಅಕ್ಟೋಬರ್ 15) :

ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಕುಸ್ತಿ ಪಂದ್ಯಾವಳಿಗೆ ವಸ್ತು ಪ್ರದರ್ಶನದ ಮೈದಾನದ ಆವರಣದಲ್ಲಿ ರಂಗುರಂಗಿನ ಚಾಲನೆ ದೊರೆತಿದೆ.

ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಖಾಡದಲ್ಲಿ ಕುಸ್ತಿಪಟುಗಳ ಕೈಕುಲುಕುವ ಮೂಲಕ ಪಂದ್ಯಾವಳಿಗಳಿಗೆ ಚಾಲನೆ ನೀಡಿದರು.

17 ವರ್ಷದೊಳಗಿನ ಬಾಲಕಿಯರ 61 ಕೆಜಿ ವಿಭಾಗದಲ್ಲಿ ನಡೆದ ಆರಂಭಿಕ ಹಣಾಹಣಿಯಲ್ಲಿ ರೀತು ಮತ್ತು ನಂದಿನಿ ಅವರು ತೋರಿದ ಶಕ್ತಿಪ್ರದರ್ಶನ ಪ್ರೇಕ್ಷಕರ ಕರತಾಡನಕ್ಕೆ ಪಾತ್ರವಾಯಿತು.

ಅಖಾಡದ ಬದಿಯಲ್ಲೇ ನಿಂತು ಇಬ್ಬರು ಬಾಲಕಿಯರ ಜಿದ್ದಾಜಿದ್ದಿನ ಪಟ್ಟುಗಳನ್ನು ವೀಕ್ಷಿಸಿದ ಸಚಿವರು, ಕ್ರೀಡಾಪಟುಗಳ ಚುರುಕುತನವನ್ನು ಶ್ಲಾಘಿಸಿದರು.

ಪಂದ್ಯ ವೀಕ್ಷಿಸಿದ ಬಳಿಕ ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು, “ಮಣ್ಣಿನ ಕುಸ್ತಿ ನಮ್ಮ ಮೈಸೂರಿನ ಹೆಮ್ಮೆಯ ಸಂಸ್ಕೃತಿ. ಒಂದು ಕಾಲದಲ್ಲಿ ಪುರುಷ ಪ್ರಧಾನವೆನಿಸಿದ್ದ ಗರಡಿ ಮನೆಗಳಲ್ಲಿ ಇಂದು ನಮ್ಮ ಹೆಣ್ಣುಮಕ್ಕಳು ಪ್ರವೇಶಿಸಿ ಕಠಿಣ ಅಭ್ಯಾಸ ಮಾಡುತ್ತಿರುವುದು ಸಮಾಜದ ಸಕಾರಾತ್ಮಕ ಬೆಳವಣಿಗೆಯ ಸಂಕೇತ. ರೀತು ಮತ್ತು ನಂದಿನಿ ಅವರ ಆಟವನ್ನು ನೋಡಿದಾಗ ಹೆಣ್ಣುಮಕ್ಕಳು ಯಾವ ಕ್ಷೇತ್ರದಲ್ಲೂ ಪುರುಷರಿಗಿಂತ ಕಡಿಮೆಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ” ಎಂದರು.

“ದಸರಾ ಕ್ರೀಡಾಕೂಟವು ಕೇವಲ ಉತ್ಸವಕ್ಕೆ ಸೀಮಿತವಾಗದೆ ಯುವ ಕ್ರೀಡಾಪಟುಗಳ ಕ್ರೀಡಾ ಬದುಕಿಗೆ ಭದ್ರ ಬುನಾದಿಯಾಗಬೇಕು. ತಾಲೂಕು ಮತ್ತು ಜಿಲ್ಲಾ ಮಟ್ಟದಿಂದ ಬರುವ ಬಡ ಪ್ರತಿಭಾವಂತ ಪೈಲ್ವಾನರಿಗೆ ಉತ್ತಮ ಪೌಷ್ಟಿಕ ಆಹಾರ ಹಾಗೂ ಅತ್ಯಾಧುನಿಕ ಮ್ಯಾಟ್ ಕುಸ್ತಿ ತರಬೇತಿ ಸಿಗುವಂತಾಗಲು ಇಲಾಖೆಯ ವತಿಯಿಂದ ಸೂಕ್ತ ಯೋಜನೆ ರೂಪಿಸಲಾಗುವುದು. ಪ್ರತಿಯೊಬ್ಬ ಕ್ರೀಡಾಪಟುವೂ ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಿ, ಕ್ರೀಡಾಸ್ಫೂರ್ತಿಯನ್ನು ಮೆರೆಯಬೇಕು” ಎಂದು ಕರೆ ನೀಡಿದರು.

ಅಖಾಡದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರು ಜೈಕಾರ ಕೂಗುವ ಮೂಲಕ ಕುಸ್ತಿಪಟುಗಳನ್ನು ಹುರಿದುಂಬಿಸಿದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹಿರಿಯ ಕುಸ್ತಿಪಟುಗಳು, ಶಾಸಕ ಹರೀಶ್ ಗೌಡ ಅಧಿಕಾರಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ