KRGRV
Friday, November 14, 2025
Homeರಾಜ್ಯದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅನನ್ಯ: ಈಶ್ವರ ಖಂಡ್ರೆ

ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅನನ್ಯ: ಈಶ್ವರ ಖಂಡ್ರೆ


ಬೆಂಗಳೂರು, ಡಿ 28 : ಸುದೀರ್ಘ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯಾನಂತರ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅನುಪಮವಾದ್ದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಅನಕ್ಷರತೆ, ಅಸಮಾನತೆ, ಅಸ್ಪೃಶ್ಯತೆ, ಬಡತನ ಕಾಡುತ್ತಿತ್ತು. ಆ ಸಂದರ್ಭದಲ್ಲಿ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ, ಪ್ರಗತಿಗೆ ಭದ್ರ ಬುನಾದಿ ಹಾಕಿತು ಎಂದರು.
ಎಲ್ಲರಿಗೂ ಶಿಕ್ಷಣ ನೀಡಲು ನೂರಾರು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದು ಅಂದಿನ ಕಾಂಗ್ರೆಸ್ ಸರ್ಕಾರ.
ಸಮುದಾಯದ ಆರೋಗ್ಯ ರಕ್ಷಣೆಗಾಗಿ ಆಸ್ಪತ್ರೆಗಳನ್ನು, ವೈದ್ಯಕೀಯ, ತಾಂತ್ರಿಕ ಸಂಸ್ಥೆಗಳನ್ನು ಕಟ್ಟಿದ್ದು ಕಾಂಗ್ರೆಸ್ ಸರ್ಕಾರ. ದೇಶದ ಭದ್ರತೆಗಾಗಿ 1974ರಲ್ಲೇ ಅಣ್ವಸ್ತ್ರ ಪರೀಕ್ಷೆ ನಡೆಸಿ, ಸೇನೆಗೆ ಆಧುನಿಕ ಶಕ್ತಿ ತುಂಬಿದ್ದು ಕಾಂಗ್ರೆಸ್ ಸರ್ಕಾರ.
ರೈತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿ, ಹಸಿರು ಕ್ರಾಂತಿ ಮಾಡಿ ನೂರಾರು ಜಲಾಶಯಗಳನ್ನು ನಿರ್ಮಿಸಿ ನೀರಾವರಿ ಸೌಲಭ್ಯ ಕಲ್ಪಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ತಿಳಿಸಿದರು.
ಇಂದು ನಾವು ಬಳಸುತ್ತಿರುವ ಮೊಬೈಲ್ ಇಂಟರ್ನೆಟ್ ಗೆ ಸಂಪರ್ಕ ಕ್ರಾಂತಿಯ ಮೂಲಕ ಭದ್ರ ಬುನಾದಿ ಹಾಕಿದ್ದು ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸ್ಯಾಮ್ ಪಿಟ್ರಾಡೋ ಎಂದು ವಿವರಿಸಿದರು.
ಇಂದು ದೇಶ ಕವಲು ದಾರಿಯಲಿದೆ, ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮತ್ತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ದಿವ್ಯ ಮಾರ್ಗದರ್ಶನದಲ್ಲಿ ಹಾಗೂ ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು, ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಜ್ಜಾಗಬೇಕು ಎಂದು ಕರೆ ನೀಡಿದರು

ಹೆಚ್ಚಿನ ಸುದ್ದಿ