ಸಿಸಿಬಿ ಪೊಲೀಸರ ಕಾರ್ಯಾಚರಣೆ
ಬೆಂಗಳೂರು,ಆ.೩೦-ಜಲಸಂಪನ್ಮೂಲ ಇಲಾಖೆಗೆ ’ಸಿ’ ವೃಂದದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನಕಲಿ ದಾಖಲಾತಿಗಳನ್ನು ಸಲ್ಲಿಸಿದ್ದ ೩೭ ಅನರ್ಹ ಅಭ್ಯರ್ಥಿಗಳು,ಮೂವರು ಸರ್ಕಾರಿ ನೌಕರರು ಸೇರಿ ೧೧ ಮಂದಿ ಮಧ್ಯವರ್ತಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಧ್ಯವರ್ತಿ ಗಳಾದ ಹಾಸನದ ರವಿ,ಗಂಗೂರ್ ಪ್ರದೀಪ್,ಮಂಡ್ಯದ ಮಳವಳ್ಳಿ ಪ್ರದೀಪ್,ಜೇವರ್ಗಿಯ ನಿಂಗಪ್ಪ ನಡುವಿನಮನಿ,ಸಿಂದಗಿಯ ಮಲ್ಲಿಕಾರ್ಜುನ ಸೋಂಪುರ್,ಕಲಬುರಗಿಯ ಆನಂದ್, ಮುಸ್ತಫಾ,ಕೆಜಿಎಫ್ ನ ಸುರೇಶ್ ಕುಮಾರ್,ಬೆಂಗಳೂರಿನ ಶರತ್,ತುಮಕೂರಿನ ಮುತ್ತುರಾಜ್ ಹಾಗೂ ಕೃಷ್ಣ ಗುರುನಾಥ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಲ್ಲಿ ೩ ಆರೋಪಿತರು ವಿವಿಧ ಇಲಾಖೆಯಲ್ಲಿ ಸರ್ಕಾರಿ ನೌಕರರಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು,ಬಂಧಿತರಿಂದ ೨ ಕಿಯಾ ಕಾರುಗಳು, ೧೭ ಮೊಬೈಲ್ ಗಳು, ಹಾರ್ಡ್ ಡಿಸ್ಕ್ ಸೇರಿ ೪೦ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಲಸಂಪನ್ಮೂಲ ಇಲಾಖೆಯಿಂದ ೨೦೨೨ನೇ ಸಾಲಿನ ಅಕ್ಟೋಬರ್ ತಿಂಗಳಿನಲ್ಲಿ ’ಸಿ’ ವೃಂದದ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ಲಾಗ್ ಹುದ್ದೆಗಳಿಗೆ ನೇರ ನೇಮಕಾತಿಯಡಿಯಲ್ಲಿ ಆನ್ಲೈನ್ ಮೂಲಕ ೧೮೨ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿಲಾಗಿತ್ತು.
ಈ ನೇಮಕಾತಿಗೆ ೬೨ ಅಭ್ಯರ್ಥಿಗಳು ಇಲಾಖೆಯು ಸೂಚಿಸಿದ ಮಾನದಂಡ ಬಿಟ್ಟು, ಅಕ್ರಮವಾಗಿ ಉದ್ಯೋಗವನ್ನು ಪಡೆಯಲು ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಜಾಲದೊಂದಿಗೆ ಸಂಪರ್ಕವನ್ನು ಹೊಂದಿ, ಪ್ರತಿ ವಿಷಯದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವಂತೆ ಕಂಡುಬರುವ ಅನಧಿಕೃತವಾಗಿ ಸೃಷ್ಟಿಸಿದ ದ್ವಿತೀಯ ಪಿಯುಸಿ.೧೨ನೇ ತರಗತಿಯ ಸಿಬಿಎಸ್ಸಿ ಮತ್ತು ದ್ವಿತೀಯ ಪಿಯುಸಿಗೆ ತತ್ಸಮಾನವಾದ ಎನ್ಐಓಎಸ್ ಅಂಕಪಟ್ಟಿಗಳನ್ನು ಪಡೆದುಕೊಂಡಿದ್ದರು.
ನಕಲಿ ಅಂಕಪಟ್ಟಿಯನ್ನು ಜಲಸಂಪನ್ಮೂಲ ಇಲಾಖೆಗೆ ಆನ್ಲೈನ್ ಮೂಲಕ ಸಲ್ಲಿಸಿ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ವಂಚನೆಯನ್ನು ಮಾಡಿ ಉದ್ಯೋಗವನ್ನು ಪಡೆಯಲು ಪ್ರಯತ್ನಿಸಿದ್ದಾರೆ. ದಾಖಲಾತಿಗಳ ಪರಿಶೀಲನೆಯನ್ನು ನಡೆಸಿದ ಇಲಾಖೆಯವರು ಅಂಕಪಟ್ಟಿಗಳಲ್ಲಿ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು, ಅಲ್ಲಿನ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು
ವಿವಿಧ ಜಿಲ್ಲೆಗಳ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅನಧಿಕೃತವಾಗಿ ಸೃಷ್ಟಿಸಿದ್ದ ಅಂಕಪಟ್ಟಿಯನ್ನು ಸಲ್ಲಿಸಿದ್ದ ಒಟ್ಟು ೧೨ ಜಿಲ್ಲೆಗಳಿಂದ ೬೨ ಅಭ್ಯರ್ಥಿಗಳ ಪೈಕಿ ಕಲ್ಬುರ್ಗಿಯಿಂದ-೨೫,ಹಾಸನ ೧೨, ವಿಜಯಪುರ ೮, ಬೀದರ್ ೬, ಬೆಳಗಾವಿ ೩, ಯಾದಗಿರಿಯಿಂದ ಇಬ್ಬರು, ಚಿತ್ರದುರ್ಗ ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ವಿಜಯನಗರ ಜಿಲ್ಲೆಯ ತಲಾ ಓರ್ವ ಅಭ್ಯರ್ಥಿ, ನಕಲಿ ದ್ವಿತೀಯ ಪಿಯುಸಿ/ತತ್ಸಮಾನವಾದ ಅಂಕಪಟ್ಟಿಗಳನ್ನು ಸಲ್ಲಿಸಿರುವುದನ್ನು ಪತ್ತೆ ಮಾಡಿ ೩೭ ಮಂದಿ ಅಭ್ಯರ್ಥಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಅಭ್ಯರ್ಥಿಗಳಿಗೆ ನಕಲಿ ಅಂಕಪಟ್ಟಿಗಳನ್ನು ಒದಗಿಸಿದ್ದ ೧೧ ಮಂದಿ ಮಧ್ಯವರ್ತಿಗಳನ್ನು ಬಂಧಿಸಲಾಗಿದ್ದು, ಮಧ್ಯವರ್ತಿಗಳ ಪೈಕಿ ೩ ಆರೋಪಿತರು ವಿವಿಧ ಇಲಾಖೆಯಲ್ಲಿ ಸರ್ಕಾರಿ ನೌಕರರಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿಸಿದರು