ಬೆಂಗಳೂರು, ಫೆ. 28:
“ವಿಧಾನಸೌಧದಲ್ಲಿ ಯಾರೂ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಲ್ಲ. ಒಂದು ವೇಳೆ ಕೂಗಿದ್ದರೆ ಪೊಲೀಸರು ಅವರನ್ನು ಒದ್ದು ಒಳಗೆ ಹಾಕುತ್ತಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಹಿಮಾಚಲ ಪ್ರದೇಶಕ್ಕೆ ಪ್ರಯಾಣ ಬೆಳೆಸುವ ಮುನ್ನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯಿಸಿದರು.
ನಿನ್ನೆ ವಿಧಾನಸೌಧದಲ್ಲಿ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ ಅವರು ಹೇಳಿದ್ದಿಷ್ಟು;
“ಪೊಲೀಸರು ಕಾನೂನು ರೀತಿಯ ಕ್ರಮ ಕೈಗೊಳ್ಳಲಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿಯವರು ಇದನ್ನು ತಿರುಚುತ್ತಿದ್ದಾರೆ. ಚುನಾವಣೆಯಲ್ಲಿ ಸೋಲಿನ ಹತಾಶೆಯಿಂದ ಈ ರೀತಿ ಮಾಡುತ್ತಿದ್ದಾರೆ.
ಈ ವಿಚಾರವಾಗಿ ತನಿಖೆ ಮಾಡುವಂತೆ ನಾವು ಸೂಚಿಸಿದ್ದೇವೆ. ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಸುಳ್ಳು ಹಬ್ಬಿಸಿದ್ದರೆ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.”
ಹಿಮಾಚಲ ಪ್ರದೇಶಕ್ಕೆ ವೀಕ್ಷರಾಗಿ ತೆರಳುತ್ತಿರುವ ಬಗ್ಗೆ ಕೇಳಿದಾಗ, “ನಾನು ಅಲ್ಲಿಗೆ ಹೋಗುವ ಬಗ್ಗೆ ಕಾಂಗ್ರೆಸ್ ಪಕ್ಷ ನನಗೆ ಸೂಚನೆ ನೀಡಿದ್ದು, ಅದರಂತೆ ತೆರಳುತ್ತಿದ್ದೇನೆ. ಎರಡು ಮೂರು ರಾಜ್ಯಗಳಲ್ಲಿ ಸರ್ಕಾರ ಕೆಡವಲು ಬಿಜೆಪಿ ಆತುರದಲ್ಲಿದೆ. ಪ್ರಜಾಪ್ರಭುತ್ವದಲ್ಲಿ ಬಲಿಷ್ಠ ವಿರೋಧ ಪಕ್ಷ ಇರಬೇಕು. ಈ ದೇಶದಲ್ಲಿ ಕೆಟ್ಟ ಸಂಪ್ರದಾಯವನ್ನು ಬಿಜೆಪಿ ಪಾಲಿಸುತ್ತದೆ. ನಮ್ಮ ಪಕ್ಷದ ಎಲ್ಲಾ ಶಾಸಕರು ನಮ್ಮ ಜತೆಯೇ ಇರುತ್ತಾರೆ. ಪಕ್ಷಕ್ಕೆ ನಿಷ್ಠರಾಗಿ ಇರುತ್ತಾರೆ ಎಂಬ ನಂಬಿಕೆ ನನಗಿದೆ” ಎಂದು ತಿಳಿಸಿದರು.