KRGRV
Monday, August 10, 2026
Homeರಾಜಕೀಯಭಯ ಹುಟ್ಟಿಸಿ ಸಭಾಪತಿ ರಾಜೀನಾಮೆ ಪಡೆದ ಸರ್ಕಾರ :: ಸಿಎಂ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರಿಗೆಮನವಿ:...

ಭಯ ಹುಟ್ಟಿಸಿ ಸಭಾಪತಿ ರಾಜೀನಾಮೆ ಪಡೆದ ಸರ್ಕಾರ :: ಸಿಎಂ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರಿಗೆಮನವಿ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದ್ದು, ಆಡಳಿತ ಪಕ್ಷದ ನಾಯಕರು ಗೂಂಡಾಗಳಂತೆ ವರ್ತಿಸಿದ್ದಾರೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ರಾಜೀನಾಮೆ ಪಡೆಯಲಾಗಿದ್ದು ಕಾನೂನು ಕ್ರಮ ಜರುಗಿಸಬೇಕು ಎಂದು ಮಾನ್ಯ ರಾಜ್ಯಪಾಲರಿಗೆ ದೂರು ಸಲ್ಲಿಸಿರುವುದಾಗಿ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಲೋಕಭವನದಲ್ಲಿ ನಿಯೋಗದ ಮೂಲಕ ದೂರು ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊರಟ್ಟಿ ಅವರ ರಾಜೀನಾಮೆಯನ್ನು ಒತ್ತಾಯವಾಗಿ ಪಡೆಯಲಾಗಿದೆ. ಅವರಿಗೆ ಭಯ ಹುಟ್ಟಿಸಿ ಸಹಿ ಹಾಕಿಸಿಕೊಂಡಿದ್ದಾರೆ ಎಂದು ದೂರಿದರು.
ಹೊರಟ್ಟಿ ಅವರು ಇದೇ 14 ರಂದು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರೂ ಅವಸರದಲ್ಲಿ ಅವರಿಂದ ರಾಜೀನಾಮೆ ಪಡೆದಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಇತರರ ವಿರುದ್ಧ ಸಂವಿಧಾನದ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿರುವುದಾಗಿ ಹೇಳಿದರು.
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹಾಗೂ ವಿಧಾನ ಪರಿಷತ್ ಸದಸ್ಯರೂ ಸೇರಿ ಒಟ್ಟು ಮೂವತ್ತು ಮುಖಂಡರು ಹೊರಟ್ಟಿ ಅವರ ಕೊಠಡಿಗೆ ಹೋಗಿ ತೀವ್ರವಾದ ರಾಜಕೀಯ ಒತ್ತಡ ಹೇರಿ ಗೂಂಡಾಗಳಂತೆ ವರ್ತಿಸಿ ಅಸಾಂವಿಧಾನಿಕವಾಗಿ ರಾಜೀನಾಮೆ ಪಡೆದಿದ್ದಾರೆ. ಆಪ್ತ ಸಹಾಯಕರನ್ನು ಕರೆದು ಲೆಟರ್ ಹೆಡ್ ತರಿಸಿ ಟೈಪ್ ಮಾಡಿಸಿ ದಿನಾಂಕವನ್ನು ಖಾಲಿ ಬಿಟ್ಟು ಸಹಿ ಹಾಕಿಸಿಕೊಂಡು ನಂತರ ದಿನಾಂಕವನ್ನು ಪೆನ್ನಿನಲ್ಲಿ ತಿದ್ದಿದ್ದಾರೆ ಎಂದು ತಿಳಿಸಿದರು.
ಭಯದ ವಾತಾವರಣ ಆಗಿದ್ದರಿಂದ ಅನಿವಾರ್ಯವಾಗಿ ರಾಜೀನಾಮೆ ನೀಡಿದೆ. ನನ್ನ ಛೇಂಬರ್ ಒಳಗೆ ನುಗ್ಗಿ ಹೊರಗೆ ಹೋಗಲು ಬಿಡದೇ ಬಾಗಿಲು ಹಾಕಿ ನನ್ನ ಮೇಲೆ ದಬಾವಣೆ ಮಾಡಿ ಭಯ ಹುಟ್ಟಿಸಿದರು ಎಂದು ಹೊರಟ್ಟಿ ಅವರು ಹೇಳಿರುವುದಾಗಿ ತಿಳಿಸಿದರು. ನೊಂದ ಹೊರಟ್ಟಿ ಅವರು ಊರಿಗೆ ಹೋಗಿದ್ದಾರೆ. ಅವರ ಫೆÇೀನ್ ಸ್ವಿಚ್ ಆಫ್ ಆಗಿದೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ರಾಜ್ಯಪಾಲರಿಗೆ ಏನಾಯಿತು ಎಂದು ವಿವರಿಸಿ ಹೊರಟ್ಟಿ ಅವರೂ ದೂರು ನೀಡಿದ್ದಾರೆ ಎಂದು ವಿವರಿಸಿದರು.
ಸಭಾಪತಿಗಳು ರಾಜೀನಾಮೆ ನೀಡಲು ಉಪಸಭಾಪತಿ ಇರಬೇಕು. ಆದರೆ ಉಪಸಭಾಪತಿಗಳು ಇಲ್ಲ. ಅವರು ಇಲ್ಲದಿದ್ದಾಗ ಯಾರು ಅಂಗೀಕಾರ ಮಾಡಬೇಕು? ರಾಜ್ಯಪಾಲರ ಕ್ರಮ ಏನು? ಸದನದಲ್ಲಿ ಏನು ಆಗಬೇಕು? ಎಂಬ ಬಗ್ಗೆ ಕಾನೂನು ಮಾಹಿತಿ ಕೇಳುತ್ತೇವೆ. ಮುಂದಿನ ನಡೆ ಏನು ಎಂದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ನಮ್ಮ ದೂರಿಗೆ ಸ್ಪಂದಿಸಿರುವ ರಾಜ್ಯಪಾಲರು ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ತಾವು ಮಧ್ಯಪ್ರವೇಶಿಸಿ ಸಂವಿಧಾನದ ಅಡಿಯಲ್ಲಿ ವಿಶೇಷ ಅಧಿಕಾರ ಬಳಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವುದಾಗಿ ಹೇಳಿದರು.

ಕಾಂಗ್ರೆಸ್ ಲೆಟರ್ ಹೆಡ್‍ನಲ್ಲಿ ಸಭಾಪತಿ ಹೆಸರು….
ಎಐಸಿಸಿ ಲೆಟರ್‍ಹೆಡ್‍ನಲ್ಲಿ ಎಐಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ಸಭಾಪತಿ ಸ್ಥಾನಕ್ಕೆ ಇಂತಹವರನ್ನು ನೇಮಿಸಲಾಗಿದೆ ಎಂದು ಬಿಡುಗಡೆ ಮಾಡಲಾಗಿದೆ. ಸಭಾಪತಿ ಸ್ಥಾನ ಖಾಲಿ ಇಲ್ಲದೇ ಇರುವಾಗ ಹೀಗೆ ನೂತನ ಸಭಾಪತಿ ಹೆಸರು ಘೋಷಣೆ ಮಾಡುವುದು ಸರಿಯಲ್ಲ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಸಂವಿಧಾನಕ್ಕೆ ವಿರುದ್ಧವಾಗಿ ಕಾಂಗ್ರೆಸ್ ನಡೆದುಕೊಂಡಿದೆ. ಇದರ ಬಗ್ಗೆಯೂ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಇಂತಹ ಕಾಂಗ್ರೆಸ್‍ಗೆ ರಾಜ್ಯದ ಜನರು ತಕ್ಕ ಉತ್ತರ ನೀಡಲಿದ್ದಾರೆ. ಬಿಜೆಪಿಯೂ ಹೋರಾಟ ಮಾಡಲಿದೆ ಎಂದರು.
ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ ರೆಡ್ಡಿ ಮತ್ತು ಟಿ.ಎ.ಶರವಣ ಇದ್ದರು.

ಹೆಚ್ಚಿನ ಸುದ್ದಿ