KRGRV
Monday, October 12, 2026
Homeಜಿಲ್ಲಾ ಸುದ್ದಿಗಳುಮುಷ್ಟೂರು ರಸ್ತೆಯಲ್ಲಿ ಅಕ್ರಮ ಕಲಬೆರಕೆ ಶೇಂದಿ ಸಾಗಾಟ ಪತ್ತೆ: 80 ಲೀಟರ್ ಜಪ್ತಿ; ಮೂವರ ವಿರುದ್ಧ...

ಮುಷ್ಟೂರು ರಸ್ತೆಯಲ್ಲಿ ಅಕ್ರಮ ಕಲಬೆರಕೆ ಶೇಂದಿ ಸಾಗಾಟ ಪತ್ತೆ: 80 ಲೀಟರ್ ಜಪ್ತಿ; ಮೂವರ ವಿರುದ್ಧ FIR

ಯಾದಗಿರಿ: ಅಕ್ರಮವಾಗಿ ಕಲಬೆರಕೆ ಶೇಂದಿಯನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 80 ಲೀಟರ್ ಕಲಬೆರಕೆ ಶೇಂದಿ ಹಾಗೂ ಸಾಗಾಟಕ್ಕೆ ಬಳಸಿದ್ದ ಬಜಾಜ್ ಆಟೋವನ್ನು ವಶಪಡಿಸಿಕೊಂಡಿರುವ ಘಟನೆ ಯಾದಗಿರಿ ತಾಲೂಕು ಮುಷ್ಟೂರು ಗ್ರಾಮದ ರಸ್ತೆಯಲ್ಲಿ ನಡೆದಿದೆ.

ಸೆ.30ರಂದು ಸಂಜೆ 7:30ರ ಸುಮಾರಿಗೆ ಶೆಟ್ಟಿಗೇರಾದಿಂದ ಮುಷ್ಟೂರು ಮಾರ್ಗದಲ್ಲಿ ಅಬಕಾರಿ ಅಧಿಕಾರಿಗಳು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ, ಕಲಬೆರಕೆ ಶೇಂದಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಬಜಾಜ್ ಆಟೋ (KA-33 A-1291) ಅನ್ನು ತಡೆದು ತಪಾಸಣೆ ನಡೆಸಲಾಗಿದೆ.

ತಪಾಸಣೆ ವೇಳೆ ಆಟೋದ ಹಿಂಭಾಗದ ಸೀಟಿನ ಕೆಳಗೆ ಎರಡು ಗೊಬ್ಬರದ ಚೀಲಗಳಲ್ಲಿ ಅಕ್ರಮವಾಗಿ ಶೇಂದಿಯನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಪ್ರತಿ ಚೀಲದಲ್ಲಿ ತಲಾ 1 ಲೀಟರ್ ಸಾಮರ್ಥ್ಯದ 40 ಪ್ಲಾಸ್ಟಿಕ್ ಬಾಟಲಿಗಳಂತೆ, ಒಟ್ಟು ಎರಡು ಚೀಲಗಳಲ್ಲಿ 80 ಲೀಟರ್ ಕಲಬೆರಕೆ ಶೇಂದಿ ಪತ್ತೆಯಾಗಿದೆ.

ಅಧಿಕಾರಿಗಳು ರಾಸಾಯನಿಕ ಪರೀಕ್ಷೆಗಾಗಿ ಜಪ್ತಿ ಮಾಡಲಾದ ಶೇಂದಿಯಿಂದ ಒಟ್ಟು 2 ಲೀಟರ್ ಮಾದರಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಿದ್ದಾರೆ. ಅಲ್ಲದೆ, ಅಕ್ರಮ ಸಾಗಾಟಕ್ಕೆ ಬಳಸಲಾಗಿದೆ ಎನ್ನಲಾದ ತ್ರಿಚಕ್ರ ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯನ್ನು ಅಬಕಾರಿ ಉಪ ಆಯುಕ್ತರ ಆದೇಶ ಹಾಗೂ ಉಪ ಅಧೀಕ್ಷಕರ ಮಾರ್ಗದರ್ಶನದಂತೆ ಕೈಗೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಚಾಲಕ ಸೇರಿದಂತೆ ಮೂವರನ್ನು ಆರೋಪಿಗಳನ್ನಾಗಿ ಗುರುತಿಸಲಾಗಿದೆ. ಎ-1 ದೇವೆಂದ್ರಪ್ಪ ತಂದೆ ಭೀಮಣ್ಣ (49), ಬಸವೇಶ್ವರನಗರ, ಯಾದಗಿರಿ, ಎ-2 ಯಮನಮ್ಮ ಗಂಡ ದಿವಂಗತ ನಾಗಪ್ಪ (50), ಹೆಂಡಗಾರ ಅಗಸಿ ಹನುಮಂತ ದೇವರ ಗುಡಿ ಹತ್ತಿರ, ಯಾದಗಿರಿ, ಹಾಗೂ ಎ-3 ಶರಣಮ್ಮ ಗಂಡ ದಿವಂಗತ ಭೀಮರಾಯ (ಅಂದಾಜು 50), ಹೆಂಡಗಾರ ಅಗಸಿ ಹನುಮಂತ ದೇವರ ಗುಡಿ ಹತ್ತಿರ, ಯಾದಗಿರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಶೇಂದಿ ಸಾಗಾಟಕ್ಕೆ ಸಂಬಂಧಿಸಿದ ಈ ಕೃತ್ಯವು ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ 10, 11, 12, 13 ಮತ್ತು 15ರ ಉಲ್ಲಂಘನೆಯಾಗಿದ್ದು, ಕಲಂ 32(1), 38(ಎ) ಮತ್ತು 43ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಪ್ರಥಮ ವರ್ತಮಾನ ವರದಿ (FIR)ಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಪ್ರಕರಣದ ಮುಂದಿನ ಕಾನೂನು ಕ್ರಮವನ್ನು ಅಬಕಾರಿ ಇಲಾಖೆ ಕೈಗೊಂಡಿದೆ.

ಅಕ್ರಮ ಮದ್ಯ ಹಾಗೂ ಕಲಬೆರಕೆ ಶೇಂದಿ ಸಾಗಾಟದ ವಿರುದ್ಧ ಅಬಕಾರಿ ಇಲಾಖೆ ಕೈಗೊಂಡಿರುವ ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ.

ಹೆಚ್ಚಿನ ಸುದ್ದಿ