ಬೆಂಗಳೂರು, ಅಕ್ಟೋಬರ್ 22: ಸಾಮಾಜಿಕ ಜಾಲತಾಣದಲ್ಲಿ ವಿಧಾನಸೌಧ ಸ್ಫೋಟಗೊಂಡಂತೆ ತೋರಿಸುವ ಎಡಿಟ್ ಮಾಡಿದ ರೀಲ್ಸ್ ಅನ್ನು ಅಪ್ಲೋಡ್ ಮಾಡಿದ ಆರೋಪದಡಿ ಬಿಹಾರ ಮೂಲದ ಅಜರತ್ ಅಲಿ ಎಂಬ ಯುವಕನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಪೈಪ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಅಜರತ್ ಅಲಿ, ವಿಧಾನಸೌಧದ ಮುಂಭಾಗದಲ್ಲಿ ಫೋಟೊ ತೆಗೆಸಿಕೊಂಡಿದ್ದ. ಬಳಿಕ ಆ ಫೋಟೊವನ್ನು ಡಿಜಿಟಲ್ ಎಡಿಟಿಂಗ್ ಮೂಲಕ ವಿಧಾನಸೌಧದಲ್ಲಿ ಸ್ಫೋಟ ಸಂಭವಿಸಿದಂತೆ ತೋರಿಸಿ ರೀಲ್ಸ್ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ ಎನ್ನಲಾಗಿದೆ.
ವೈರಲ್ ಆದ ರೀಲ್ಸ್ ಗಮನಿಸಿದ ಪೊಲೀಸರು ತನಿಖೆ ನಡೆಸಿ ಯುವಕನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಫೋಟೊವನ್ನು ತಾನೇ ಎಡಿಟ್ ಮಾಡಿರುವುದಾಗಿ ಯುವಕ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೀಲ್ಸ್ ಸೃಷ್ಟಿಸಿದ ಉದ್ದೇಶ, ಬಳಸಿದ ತಂತ್ರಾಂಶ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಡಿದ ರೀತಿಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಸೂಚನೆ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಅಥವಾ ಆತಂಕ ಸೃಷ್ಟಿಸುವ ರೀತಿಯ ಎಡಿಟ್ ಮಾಡಿದ ಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವುದು ಕಾನೂನು ಕ್ರಮಕ್ಕೆ ಕಾರಣವಾಗಬಹುದು.

