ವರದಿ: ಅಮರೇಶ ಗೋಸ್ಲೆ
ಲಿಂಗಸುಗೂರು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ದಕ್ಷಿಣ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾಲಯಗಳ ಗುಡ್ಡಗಾಡು ಓಟದ (ಕ್ರಾಸ್ ಕಂಟ್ರಿ) ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಕಾಲೇಜಿಗೆ ಹೆಮ್ಮೆ ತಂದಿದ್ದಾರೆ.
ಕಾಲೇಜಿನ ಬಿ.ಎ. ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿಯರಾದ ನಾಗರತ್ನ ಹಾಗೂ ಮೀನಾಕ್ಷಿ ಅವರು ಈ ಸಾಧನೆ ಮಾಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ವೆಂಕಟನಾರಾಯಣ ಎಂ. ತಿಳಿಸಿದ್ದಾರೆ.
ನವೆಂಬರ್ 7ರಿಂದ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ದಕ್ಷಿಣ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಈ ಇಬ್ಬರು ವಿದ್ಯಾರ್ಥಿನಿಯರು ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ತಂಡವನ್ನು ಪ್ರತಿನಿಧಿಸಲಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಇವರಿಗೆ ಕಾಲೇಜಿನ ಕ್ರೀಡಾ ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕರಾದ ಭೀಮಣ್ಣ ಹಾಗೂ ಕ್ರೀಡಾ ಸಂಯೋಜಕರಾದ ಬೀರಪ್ಪ ಅವರು ತರಬೇತಿ ನೀಡಿ ಮಾರ್ಗದರ್ಶನ ನೀಡಿದ್ದಾರೆ.