ಬೆಂಗಳೂರು: ರಾಹುಲ್ ಗಾಂಧಿಯವರು ನಮ್ಮ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವತ್ಥÀನಾರಾಯಣ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ಕರ್ನಾಟಕಕ್ಕೇ ಅವಮಾನ ಮಾಡಿದ್ದಾರೆ. ಜುಬ್ಬಾ ಹಿಡಿದು ಎಳೆದಿದ್ದು, ಒಬ್ಬ ಹಿರಿಯ ನಾಯಕನಿಗೆ ಹೀಗೆ ನಡೆಸಿಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.
ಬಾಕ್ಸಿಂಗ್ ಮೂಲಕ ಹೊಡೆಯುವಂತೆ ಹೊಡೆದಿದ್ದಾರೆ. ಕುಂಗ್ಫು, ಮೊಣಕೈ ಗಂಟಿನಿಂದ ಹೊಡೆದಿದ್ದಾರೆ. ಯಾರಪ್ಪ ಇವರನ್ನು ಬೀದಿಗೆ ಬಾ ಎಂದು ಕರೆದವರು ಎಂದು ಕೇಳಿದರು. ಜನರ ಜೊತೆ ಹೇಗೆ ಬೆರೆಯಬೇಕೆಂದೇ ಇವರಿಗೆ ಗೊತ್ತಿಲ್ಲ ಎಂದು ರಾಹುಲ್ ಗಾಂಧಿಯವರ ವರ್ತನೆಯ ಕುರಿತು ಟೀಕಿಸಿದರು.
ನಿಮಗೆ ರಕ್ಷಣೆ ಬೇಕೆಂದರೆ ಜನರ ಜೊತೆ ಬೀದಿಗೆ ಯಾಕೆ ಬರುತ್ತೀರಿ? ಸುರಕ್ಷಿತವಾಗಿ ಇರಬೇಕೆಂದರೆ ಕಾರಿನಲ್ಲಿ ಹೋಗಿ. ಮನೆಯಲ್ಲಿ ಕುಳಿತುಕೊಳ್ಳಿ. ಜನನಾಯಕನಾಗಿ ಬೀದಿಗೆ ಇಳಿಯುವುದಾದರೆ ಎಲ್ಲರಿಗೂ ಮೊಣಕೈ ಗಂಟಿನಿಂದ ಗುದ್ದಬಾರದು ಎಂದು ಕಿವಿಮಾತು ಹೇಳಿದರು.
ಮನುಷ್ಯತ್ವ ಇಲ್ಲದ ಮನುಷ್ಯ..
ಸದ್ಯ ಇದನ್ನು ಯಾರೋ ಚೆನ್ನಾಗಿ ವಿಡಿಯೋ ತೆಗೆದಿದ್ದಾರೆ ಎಂದು ತಿಳಿಸಿದರು. ಇದು ಪ್ರಾಣಾಪಾಯ ತರುವ ಜಾಗ. ಅಂಥಲ್ಲಿಗೆ ಹೊಡೆಯುತ್ತಾರೆ. ಅವರು ಮನುಷ್ಯತ್ವ ಇಲ್ಲದ ಮನುಷ್ಯ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅವರ ನಡವಳಿಕೆ, ಅವರ ವ್ಯಕ್ತಿತ್ವ ಸಂಪೂರ್ಣವಾಗಿ ಬಯಲಾಗಿದೆ ಎಂದು ವಿಶ್ಲೇಷಿಸಿದರು.
ರಾಕ್ಷಸರ ಗುಣದ ಪ್ರದರ್ಶನ..
ಈ ದೇಶದ ಜನರು ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇವರು ಜನನಾಯಕರಲ್ಲ; ನವರಾತ್ರಿ ಅವಧಿಯಲ್ಲಿ ಇವರು ರಾಕ್ಷಸ ಗುÀಣವನ್ನು ತೋರಿಸಿದ್ದಾರೆ ಎಂದು ನುಡಿದರು. ಇನ್ನೊಂದು ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿಯ ಜುಬ್ಬಾ ಹಿಡಿದೆಳೆದು ಹಿಂದೆ ತಳ್ಳಿದ್ದು, ರಾಜ್ಯಕ್ಕೆ ಅವಮಾನ ಮಾಡಿದಂತೆ ಎಂದು ಟೀಕಿಸಿದರು.
ರಾಹುಲ್ ಗಾಂಧಿಯವರಿಗೆ ಪ್ರಚಾರದ ಗೀಳು..
ಸಂಸತ್ತಿನಲ್ಲಿ ವಿಪಕ್ಷ ನಾಯಕರಾದವರ ನಡವಳಿಕೆ ನೋಡಿ ಎಂದು ಗಮನ ಸೆಳೆದರು. ರಾಹುಲ್ ಗಾಂಧಿಯವರಿಗೆ ಎಷ್ಟು ಪ್ರಚಾರದ ಗೀಳಿದೆ ಎಂಬುದು ಗೊತ್ತಾಗಿದೆ. ನಾನು ಬಿಟ್ಟರೆ ಇನ್ಯಾರೂ ಕಾಣಬಾರದು ಎಂಬಂತಿದೆ ಅವರ ವರ್ತನೆ ಎಂದು ಆರೋಪಿಸಿದರು. ಜನರು ಇದನ್ನು ಗಮನಿಸಿದ್ದಾರೆ. ಕೆಲವು ಸಂಘಟನೆಗಳು ಇದರ ವಿರುದ್ಧ ಪ್ರತಿಭಟನೆ ಮಾಡಬಹುದು ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಈ ಘಟನೆಯನ್ನು ರಾಜ್ಯದ ಜನತೆ ಒಪ್ಪುವುದಿಲ್ಲ ಎಂದು ನುಡಿದರು.
ಎಸ್ಐಆರ್ ಬಗ್ಗೆ ಇಲ್ಲಸಲ್ಲದ ಆಪಾದನೆ..
ಎಸ್ಐಆರ್ ಪ್ರಕ್ರಿಯೆ ಕುರಿತು ಇಲ್ಲಸಲ್ಲದ ಆಪಾದನೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಇಂಡಿ ಒಕ್ಕೂಟ, ರಾತ್ರೋರಾತ್ರಿ ಹುಟ್ಟಿಕೊಂಡ ಸಂಘಟನೆಗಳು ಸೇರಿ ದೇಶದ ಸಂವಿಧಾನದ ವಿರುದ್ಧವಾಗಿ, ಸಾಂವಿಧಾನಿಕ ಸಂಸ್ಥೆಯ ವಿರುದ್ಧವಾಗಿ ಅಪಪ್ರಚಾರ ಮಾಡುತ್ತಿದ್ದು, ಅವು ಸತ್ಯಕ್ಕೆ ದೂರ ಎಂದು ತಿಳಿಸಿದರು.
ಕಾನೂನಾತ್ಮಕವಾಗಿ, ಪಾರದರ್ಶಕ ರೀತಿಯಲ್ಲಿ ಪ್ರಕ್ರಿಯೆ..
ಎಸ್ಐಆರ್ ಪ್ರಕ್ರಿಯೆ ಬಿಹಾರದಿಂದ ಪ್ರಾರಂಭಗೊಂಡಿದೆ. ನಾನಾ ರಾಜ್ಯಗಳಲ್ಲಿ ಉತ್ತಮವಾಗಿ, ಕಾನೂನಾತ್ಮಕವಾಗಿ, ಪಾರದರ್ಶಕ ರೀತಿಯಲ್ಲಿ ಪ್ರಕ್ರಿಯೆ ನಡೆಯುತ್ತಿದೆ. 21 ವರ್ಷಗಳ ನಂತರ ಇದು ನಡೆದಿದೆ. ಮತದಾರರ ಪಟ್ಟಿ ಪರಿಷ್ಕರಣೆ ಆಗಿ ಒಬ್ಬ ವ್ಯಕ್ತಿಗೆ ಒಂದೇ ಮತ ಇರಬೇಕು. ಒಬ್ಬನೇ ಹಲವು ಕಡೆ ಮತ ಹಾಕಬಾರದೆಂಬ ದೃಷ್ಟಿಯಿಂದ ವ್ಯವಸ್ಥಿತವಾಗಿ ಇದು ನಡೆಯುತ್ತಿದೆ. ಆದರೂ, ಜ್ಞಾನ, ತಿಳುವಳಿಕೆ ಇಲ್ಲದೇ ತಲೆಗೆ ಬಂದಂತೆ, ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ಇದು ನಿಜಕ್ಕೂ ಶೋಚನೀಯ. ಸಮಾಜದಲ್ಲಿ ಗೊಂದಲ ನಿರ್ಮಿಸಲು, ದೇಶದ ಸ್ಥಿರತೆ, ದೇಶದ ಕುರಿತು ಕಾಳಜಿ ಇಲ್ಲದೇ ಸುಳ್ಳು ಆಪಾದನೆ ಮಾಡಲಾಗುತ್ತಿದೆ ಎಂದು ದೂರಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವೇ ಇದೆ..
ರಾಹುಲ್ ಗಾಂಧಿಯವರು ಮತದಾರರ ಎರಡೆರಡು ಹೆಸರಿದೆ; ಆಟಂ ಬಾಂಬ್ ಎನ್ನುತ್ತಾ ಓಡಾಡುತ್ತಿದ್ದರು. ಮೃತರ ಹೆಸರಿದೆ. ನಕಲಿ ಹೆಸರಿದೆ ಎನ್ನುತ್ತಿದ್ದಾರೆ. ಈಗ ಪರಿಷ್ಕರಣೆ ವೇಳೆ ಹೆಸರು ರದ್ದು ಮಾಡುತ್ತಿದ್ದಾರೆ ಎಂದು ತಿಳಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವೇ ಇದೆ. ಅವರ ಅಧೀನ ಇರುವ ಅಧಿಕಾರಿಗಳು ಮನೆ ಮನೆಗೆ ಹೋಗಿ ಸಂಪರ್ಕ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಸುಳ್ಳು ದಾಖಲೆ ಸೃಷ್ಟಿಸಿದ್ದಾರಾ..
ಚುನಾವಣಾ ಆಯೋಗದಿಂದ ಇವರು ದಾಖಲೆ ಕದ್ದರೇ? ಸುಳ್ಳು ದಾಖಲೆ ಸೃಷ್ಟಿಸಿದ್ದಾರಾ ಎಂದು ಕೇಳಿದರು. ಇವರು ಜವಾಬ್ದಾರಿ ಇಲ್ಲದವರು. ಸಾಮಾಜಿಕ ಶಾಂತಿ ಇರಬಾರದೆಂಬ ಉದ್ದೇಶ ಇವರದು ಇದ್ದಂತಿದೆ ಎಂದು ಟೀಕಿಸಿದರು. ಅಲ್ಪಸಂಖ್ಯಾತರು, ಬಾಂಗ್ಲಾ ದೇಶೀಯರು, ರೋಹಿಂಗ್ಯಾಗಳ ಪರವಾಗಿ ಇವರು ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ 25ರಿಂದ 30 ಲಕ್ಷ ಬಾಂಗ್ಲಾ ದೇಶೀಯರು ಇಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದರು. ಅವರಿಗೆ ಖಾಯಂ ನಿವಾಸಿ ಪತ್ರವನ್ನು ನೀಡಿ ಮತದಾರರನ್ನಾಗಿ ಮಾಡಿದ್ದಾರೆ ಎಂದು ಟೀಕಿಸಿದರು. ರಾಷ್ಟ್ರರಕ್ಷಣೆ ನಮ್ಮ ಕರ್ತವ್ಯವಾಗಬೇಕು. ಅದನ್ನೇ ಮರೆತು ನಿಮ್ಮ ಮತಬ್ಯಾಂಕಿಗಾಗಿ ಸುಳ್ಳು ಆಪಾದನೆ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ರಾಜ್ಯ ವಕ್ತಾರ ಹೆಚ್.ಎನ್.ಚಂದ್ರಶೇಖರ್, ಮುಖಂಡ ಆನಂದ್ ಗುರುಮೂರ್ತಿ, ಎಸ್.ಸಿ.ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಅವರು ಭಾಗವಹಿಸಿದ್ದರು.

