ಬೆಂಗಳೂರು, ಆ.19- ಘನತೆವೆತ್ತ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಲೋಕಾಯುಕ್ತ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ಮೂಡಾದಲ್ಲಿ ತಮ ಧರ್ಮಪತ್ನಿ ಪಾರ್ವತಮ ಅವರ ಹೆಸರಿಗೆ 14 ಬದಲಿ ನಿವೇಶನಗಳನ್ನು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಹಂಚಿಕೆ ಮಾಡಿ ಸರ್ಕಾರದ ಬೊಕ್ಕಸಕ್ಕೆ 60 ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ನಾನು ಜು.20ರಂದು ಲೋಕಾಯುಕ್ತಕ್ಕೆ 408 ಪುಟಗಳ ದಾಖಲೆಗಳ ಸಮೇತ ದೂರು ದಾಖಲಿಸಿದ್ದೇನೆ.
ರಾಜ್ಯದ ರಾಜ್ಯಪಾಲರು ಸಿಎಂ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿರುವ ಕಾರಣ ಸದರಿ ಪ್ರಕರಣದಲ್ಲಿ ಪ್ರಮುಖರಾದ ಸಿದ್ಧರಾಮಯ್ಯ, ಪಾರ್ವತಮ, ಮಲ್ಲಿಕಾರ್ಜುನ ಸ್ವಾಮಿ, ಬಸವೇಗೌಡ, ರಾಜೀವ್, ನಟೇಶ್, ಮರಿಗೌಡ ಮತ್ತಿತರ ಭ್ರಷ್ಟ / ವಂಚಕ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ ಮತ್ತು ಸರ್ಕಾರಿ ಸ್ವತ್ತು ಕಬಳಿಕೆ ಸಂಚು ನಡೆಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೂಡಲೇ ಎಫ್‌ಐಆರ್ ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಲೋಕಾಯುಕ್ತ ಪೊಲೀಸರಿಗೆ ಪತ್ರ ಬರೆದಿದ್ದಾರೆ.