ಕಾರವಾರ: ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವುದಕ್ಕೆ ಸೀಮಿತವಾಗದೆ, ವ್ಯಕ್ತಿತ್ವ ವಿಕಸನ, ಮಾತನಾಡುವ ಕೌಶಲ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕೆಎಸ್ಎಂಸಿ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಹೇಳಿದರು.
ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಉತ್ತರ ಕನ್ನಡ ಜಿಲ್ಲೆ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಸಂಘದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಮಕ್ಕಳ ಪ್ರತಿಭಾ ಪುರಸ್ಕಾರ–2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಜಗತ್ತು ತೀವ್ರ ಸ್ಪರ್ಧಾತ್ಮಕವಾಗಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಜತೆಗೆ ದೊರೆಯುವ ಪ್ರತಿಯೊಂದು ಅವಕಾಶವನ್ನೂ ಸದುಪಯೋಗಪಡಿಸಿಕೊಳ್ಳಬೇಕು. ಸಂದರ್ಶನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸುವುದರ ಜತೆಗೆ, ಜಾಣ್ಮೆಯಿಂದ ಉತ್ತರಿಸುವ ಸಾಮರ್ಥ್ಯವನ್ನೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹತ್ತನೇ ತರಗತಿಯ ನಂತರದ ಆರು ವರ್ಷಗಳ ಅವಧಿಯಲ್ಲಿ ಕಠಿಣ ಪರಿಶ್ರಮ ವಹಿಸಿದರೆ ಮುಂದಿನ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು. ಯುವಜನತೆ ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗದೆ ಸನ್ಮಾರ್ಗದಲ್ಲಿ ನಡೆಯಬೇಕು. ಹೆತ್ತವರು, ಶಿಕ್ಷಣ ಸಂಸ್ಥೆ ಹಾಗೂ ದೇಶಕ್ಕೆ ಕೀರ್ತಿ ತರುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಣದ ಜತೆಗೆ ಆತ್ಮವಿಶ್ವಾಸವೂ ಅಗತ್ಯ
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ವಿವಿಧ ಒತ್ತಡಗಳ ನಡುವೆಯೂ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಅವರಿಗೆ ಬೆಂಬಲವಾಗಿ ನಿಂತ ಪೋಷಕರನ್ನು ಅಭಿನಂದಿಸಿದರು.
ಶಿಕ್ಷಣವು ಜೀವನದ ಅಡಿಪಾಯವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಭವಿಷ್ಯದ ಸವಾಲುಗಳನ್ನು ಎದುರಿಸಲು ಅಂಕಗಳ ಜತೆಗೆ ಧೈರ್ಯ, ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ವಿಕಸನವೂ ಅಗತ್ಯ. ಪೋಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯ ಜತೆಗೆ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು ಎಂದು ಹೇಳಿದರು.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಉತ್ತರ ಕನ್ನಡ ಜಿಲ್ಲೆ ನಿರಂತರವಾಗಿ ರಾಜ್ಯದ ಮೊದಲ ಮೂರು ಸ್ಥಾನಗಳಲ್ಲಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯನ್ನು ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಮಾಜಕ್ಕೆ ಮರಳಿ ಕೊಡುಗೆ ನೀಡಲಿ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಸಮಾಜಕ್ಕೆ ಮರಳಿ ಕೊಡುಗೆ ನೀಡಬೇಕು. ತಾವು ಕಲಿತ ಶಾಲೆಗಳಿಗೆ ಭೇಟಿ ನೀಡಿ, ಮುಂದಿನ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
10 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಸಂಘದ ವತಿಯಿಂದ ಪ್ರತಿವರ್ಷ ಸುಮಾರು 10 ಸಾವಿರ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಈ ಬಾರಿ ಅರ್ಜಿ ಸಲ್ಲಿಕೆ, ಪರಿಶೀಲನೆ ಹಾಗೂ ಆಯ್ಕೆ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ಪಾರದರ್ಶಕವಾಗಿ ನಡೆಸಲಾಗಿದೆ ಎಂದು ತಿಳಿಸಿದರು.
ಅಂಕಗಳಷ್ಟೇ ಜೀವನವಲ್ಲ. ನಿರಂತರ ಅಭ್ಯಾಸ, ಬದ್ಧತೆ ಹಾಗೂ ಅನುಭವದ ಮೂಲಕ ಭವಿಷ್ಯದ ಸವಾಲುಗಳನ್ನು ಎದುರಿಸಬೇಕು. ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕಾರ್ಪೊರೇಟ್, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಗುರಿ ಹೊಂದಬೇಕು. ದೇಶಪ್ರೇಮ, ಭಾಷಾಭಿಮಾನ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುತ್ತಿದೆ. ಹಳೆಯ ಪಿಂಚಣಿ ಯೋಜನೆ ಮರುಜಾರಿಗೆ ಸಂಬಂಧಿಸಿದಂತೆಯೂ ಸರ್ಕಾರದೊಂದಿಗೆ ಚರ್ಚಿಸಲಾಗುತ್ತಿದೆ. ಕೇಂದ್ರದಲ್ಲಿ 8ನೇ ವೇತನ ಆಯೋಗ ಜಾರಿಯಾದ ಬಳಿಕ ರಾಜ್ಯದಲ್ಲಿಯೂ ಅದನ್ನು ಅಳವಡಿಸುವಂತೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.
ಸರ್ಕಾರಿ ನೌಕರರ ಕುಟುಂಬಗಳಿಗೆ ಜಾರಿಯಲ್ಲಿರುವ ಉಚಿತ ಆರೋಗ್ಯ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದೆ ಎಂದರು.
ಸಾಧಕ ವಿದ್ಯಾರ್ಥಿಗಳು, ಶಾಲಾ ಮುಖ್ಯಸ್ಥರಿಗೆ ಗೌರವ
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿಯನ್ನು ಗೌರವಿಸಲಾಯಿತು. ಶೇ.100ರಷ್ಟು ಫಲಿತಾಂಶ ದಾಖಲಿಸಿದ ಶಾಲೆಗಳು ಹಾಗೂ ಕಾಲೇಜುಗಳ ಮುಖ್ಯಸ್ಥರನ್ನೂ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ವಿಭಾಗೀಯ ಉಪಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ನಾಯ್ಕ, ವಿವಿಧ ತಾಲ್ಲೂಕುಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಸಂಜೀವಕುಮಾರ ಎಸ್. ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ವನಿತಾ ಶೇಟ್ ಹಾಗೂ ವಿಕಾಸ ಕಾರ್ಯಕ್ರಮ ನಿರೂಪಿಸಿದರು.

