KRGRV
Monday, August 24, 2026
Homeಜಿಲ್ಲಾ ಸುದ್ದಿಗಳುಆಶನಾಳ ಗೇಟ್ ಅರಣ್ಯ ಪ್ರದೇಶದ ಮಠದಲ್ಲಿ ಅಪ್ರಾಪ್ತ ಬಾಲಕಿ ಪತ್ತೆ; ಆರೋಪಗಳ ತನಿಖೆ ಚುರುಕು

ಆಶನಾಳ ಗೇಟ್ ಅರಣ್ಯ ಪ್ರದೇಶದ ಮಠದಲ್ಲಿ ಅಪ್ರಾಪ್ತ ಬಾಲಕಿ ಪತ್ತೆ; ಆರೋಪಗಳ ತನಿಖೆ ಚುರುಕು

ಯಾದಗಿರಿ: ತಾಲೂಕಿನ ಆಶನಾಳ ಗ್ರಾಮದ ಆಶನಾಳ ಗೇಟ್ ಸಮೀಪದ ಅರಣ್ಯ ಪ್ರದೇಶದಲ್ಲಿರುವ ಶ್ರೀ ಭಾಗ್ಯವಂತಿ ಮಠದಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಪತ್ತೆಯಾಗಿದ್ದು, ಆಕೆಯನ್ನು ಹಲವು ವರ್ಷಗಳಿಂದ ಮಠದ ಆವರಣದಲ್ಲಿ ಇರಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬಾಲಕಿಯ ಸುರಕ್ಷತೆ ಕುರಿತು ಮಕ್ಕಳ ಸಹಾಯವಾಣಿ 1098ಕ್ಕೆ ಬಂದ ದೂರಿನ ಆಧಾರದ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ವೈದ್ಯಕೀಯ ಪರೀಕ್ಷೆ, ಬಾಲಕಿಯ ಹೇಳಿಕೆ ಹಾಗೂ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಮಠದಲ್ಲಿ ವಾಸವಾಗಿದ್ದ ಅಣ್ಣಪ್ಪ ಪೂಜಾರಿ ಎಂಬಾತ ಘತ್ತರಗಿ ಭಾಗಮ್ಮ ದೇವರ ಹೆಸರಿನಲ್ಲಿ ಸಣ್ಣ ಗುಡಿ ನಿರ್ಮಿಸಿಕೊಂಡು, ತಾನು ದೇವರ ಆರಾಧನೆ ಮಾಡುತ್ತೇನೆ, ತನ್ನ ಮೈಮೇಲೆ ಭಾಗ್ಯವಂತಿ ದೇವತೆ ಬರುತ್ತಾಳೆ ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇನೆ ಎಂದು ಭಕ್ತರನ್ನು ನಂಬಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಮಟ್ಕಾ ಸಂಖ್ಯೆಗಳನ್ನೂ ಹೇಳುವುದಾಗಿ ನಂಬಿಸಿ ಜನರಿಂದ ಹಣ ಪಡೆಯುತ್ತಿದ್ದ ಎಂಬ ಆರೋಪಗಳೂ ಸ್ಥಳೀಯವಾಗಿ ಕೇಳಿಬಂದಿವೆ.

ಸುರಪುರ ತಾಲೂಕಿನ 16 ವರ್ಷದ ಬಾಲಕಿಯನ್ನು ಕಳೆದ ಮೂರು ವರ್ಷಗಳಿಂದ ಮಠದ ಆವರಣದಲ್ಲಿ ಇರಿಸಲಾಗಿತ್ತು ಎಂಬ ಮಾಹಿತಿ ಅಧಿಕಾರಿಗಳಿಗೆ ಲಭಿಸಿದೆ. ಮಠದ ಸಮೀಪದ ಅರಣ್ಯ ಪ್ರದೇಶದಲ್ಲಿ ಸಣ್ಣ ಮನೆಯನ್ನು ಮಾಡಿಕೊಂಡು ಆರೋಪಿ ವಾಸವಾಗಿದ್ದ ಎನ್ನಲಾಗಿದ್ದು, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ. ಈ ಆರೋಪಗಳು ತನಿಖೆಯಲ್ಲಿದ್ದು, ಅವುಗಳ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ.

ದೂರು ಸ್ವೀಕರಿಸಿದ ಬಳಿಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಪೊಲೀಸರು ಆಶನಾಳ ಗೇಟ್ ಸಮೀಪದ ಮಠಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಲಕಿ ಪತ್ತೆಯಾಗಿದ್ದು, ಅಧಿಕಾರಿಗಳು ಆಕೆಯನ್ನು ರಕ್ಷಿಸಿ ಅಗತ್ಯ ರಕ್ಷಣಾತ್ಮಕ ನೆರವು ನೀಡಿದ್ದಾರೆ. ನಂತರ ಬಾಲಕಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಗೋವಿಂದ ರಾಥೋಡ್ ಅವರು ಮಾತನಾಡಿ, ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಬಾಲಕಿಯ ಹೇಳಿಕೆ ದಾಖಲಿಸಿದ ಬಳಿಕ ಪ್ರಕರಣದ ಮುಂದಿನ ಕ್ರಮ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

ದೇವರ ಹೆಸರಿನಲ್ಲಿ ಜನರನ್ನು ನಂಬಿಸಿ ಮಟ್ಕಾ, ಜೂಜಾಟದಂತಹ ಚಟುವಟಿಕೆಗಳಿಗೆ ಪ್ರೇರೇಪಿಸುವುದು ಅಥವಾ ಧಾರ್ಮಿಕ ನಂಬಿಕೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ. ನಿಜವಾದ ಧಾರ್ಮಿಕ ಸೇವೆಯ ಉದ್ದೇಶವಿದ್ದರೆ ಸಂಕಷ್ಟದಲ್ಲಿರುವ ರೈತರು, ಕೂಲಿ ಕಾರ್ಮಿಕರು ಹಾಗೂ ಅಗತ್ಯವಿರುವವರಿಗೆ ನೆರವಾಗಬೇಕು ಎಂದು ಗೋವಿಂದ ರಾಥೋಡ್ ಅಭಿಪ್ರಾಯಪಟ್ಟಿದ್ದಾರೆ.

ಕಾರ್ಯಾಚರಣೆಯಲ್ಲಿ ಮಕ್ಕಳ ರಕ್ಷಣಾಧಿಕಾರಿ ಗೋವಿಂದ ರಾಥೋಡ್, ಕ್ಷೇತ್ರ ಕಾರ್ಯಕರ್ತರಾದ ಪರ್ವತ ರೆಡ್ಡಿ ಹಾಗೂ ರಾಜೇಶ್ವರಿ, 112 ವಾಹನದ ಪೊಲೀಸ್ ಸಿಬ್ಬಂದಿ ಹನುಮಂತಪ್ಪ ಮತ್ತು ವೀರೇಶ್, ಗ್ರಾಮೀಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸಿದ್ದರು.

ಬಾಲಕಿಯ ರಕ್ಷಣೆ, ವೈದ್ಯಕೀಯ ಪರೀಕ್ಷೆ, ಹೇಳಿಕೆ ದಾಖಲಿಸುವಿಕೆ ಹಾಗೂ ಆರೋಪಗಳ ಸತ್ಯಾಸತ್ಯತೆ ಕುರಿತು ಕಾನೂನು ಪ್ರಕ್ರಿಯೆಯಂತೆ ತನಿಖೆ ಮುಂದುವರಿದಿದೆ. ಅಪ್ರಾಪ್ತೆಯ ಗುರುತು ಮತ್ತು ವೈಯಕ್ತಿಕ ವಿವರಗಳನ್ನು ಕಾನೂನುಬದ್ಧವಾಗಿ ಗೌಪ್ಯವಾಗಿಡಲಾಗಿದ.

ಹೆಚ್ಚಿನ ಸುದ್ದಿ