ಪ್ರಿಯಕರನ ಬಂಧನ; ಹಣ ವಾಪಸ್ ಹಾಗೂ ಮದುವೆಗೆ ಒತ್ತಾಯಿಸಿದ್ದರಿಂದ ಕೊಲೆ ಮಾಡಿದ ಆರೋಪ
ಯಾದಗಿರಿ, ಅ.8: ಯಾದಗಿರಿ ತಾಲೂಕಿನ ಬಾಚವಾರ್ ಗ್ರಾಮದ ದಟ್ಟ ಅರಣ್ಯ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಜೋಗತಿ ಮಹಿಳೆಯ ಕೊಲೆ ಪ್ರಕರಣವನ್ನು ಯಾದಗಿರಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲ್ವಾರ್ ಗ್ರಾಮದ ನಿವಾಸಿ ಶಾಂತಮ್ಮ (48) ಎಂಬ ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಹಲ್ಕಟ್ಟಾ ಗ್ರಾಮದ ಸುರೇಶ್ ಎಂಬಾತನನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಸುಮಾರು ಹತ್ತು ಸಾವಿರ ಎಕರೆ ವಿಸ್ತೀರ್ಣ ಹೊಂದಿರುವ ಬಾಚವಾರ್ ಅರಣ್ಯ ಪ್ರದೇಶದಲ್ಲಿ ಕಳೆದ ಸೆಪ್ಟೆಂಬರ್ 24ರಂದು ಗಸ್ತು ತಿರುಗುತ್ತಿದ್ದ ಕಾವಲುಗಾರನಿಗೆ ಸುಟ್ಟ ಸ್ಥಿತಿಯಲ್ಲಿದ್ದ ಮಹಿಳೆಯ ಶವ ಪತ್ತೆಯಾಗಿತ್ತು. ಈ ಕುರಿತು ತಕ್ಷಣ ಗ್ರಾಮಸ್ಥರು ಹಾಗೂ ಯಾದಗಿರಿ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಯಾದಗಿರಿ ಎಸ್‌ಪಿ ಪೃಥ್ವಿಕ್ ಶಂಕರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಹಿಳೆಯ ಶವ ಬಹುತೇಕ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರಿಂದ ಆಕೆಯ ಗುರುತು ಪತ್ತೆಹಚ್ಚುವುದು ಪೊಲೀಸರಿಗೆ ಆರಂಭದಲ್ಲಿ ಸವಾಲಾಗಿತ್ತು. ಸ್ಥಳದಲ್ಲಿ ದೊರೆತ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ ಪೊಲೀಸರು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಅರಣ್ಯ ಪ್ರದೇಶದಲ್ಲೇ ಶವದ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಬಳೆಯೇ ಕೊಲೆ ಪ್ರಕರಣಕ್ಕೆ ಪ್ರಮುಖ ಸುಳಿವು
ಮಹಿಳೆಯ ಗುರುತು ಪತ್ತೆಹಚ್ಚಲು ಯಾದಗಿರಿ ಎಸ್‌ಪಿ ಪೃಥ್ವಿಕ್ ಶಂಕರ್ ಅವರು ಯಾದಗಿರಿ ಸರ್ಕಲ್ ಇನ್ಸ್‌ಪೆಕ್ಟರ್ ನಾನಾಗೌಡ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದರು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ನಾಪತ್ತೆ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿದರೂ ಆರಂಭದಲ್ಲಿ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಈ ನಡುವೆ ಗಡಿ ಭಾಗದ ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯಲ್ಲಿ ನಾಲ್ವಾರ್ ಗ್ರಾಮದ ಶಾಂತಮ್ಮ ಎಂಬ ಮಹಿಳೆ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಅರಣ್ಯದಲ್ಲಿ ಪತ್ತೆಯಾಗಿದ್ದ ಶವದ ಬಳಿ ಸಿಕ್ಕಿದ್ದ ಬಳೆಯನ್ನು ಪೊಲೀಸರು ಶಾಂತಮ್ಮಳ ಕುಟುಂಬಸ್ಥರಿಗೆ ತೋರಿಸಿದ್ದಾರೆ. ಈ ವೇಳೆ ಆಕೆಯ ಪುತ್ರ ದೇವಪ್ಪ, ಅದು ತಮ್ಮ ತಾಯಿಯ ಬಳೆ ಎಂದು ಗುರುತಿಸಿದ್ದಾನೆ. ಇದರಿಂದ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವ ಶಾಂತಮ್ಮಳದ್ದೇ ಎಂಬುದು ಪತ್ತೆಯಾಗಿದ್ದು, ತನಿಖೆಗೆ ಮಹತ್ವದ ತಿರುವು ದೊರೆತಿದೆ.
ಕಾಲ್ ಡಿಟೇಲ್ಸ್ ಆಧರಿಸಿ ಆರೋಪಿಯ ಪತ್ತೆ
ಶಾಂತಮ್ಮಳ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಿದಾಗ, ಘಟನೆಗೂ ಮುನ್ನ ಹಲ್ಕಟ್ಟಾ ಗ್ರಾಮದ ಸುರೇಶ್ ಎಂಬಾತನೊಂದಿಗೆ ಸಂಪರ್ಕದಲ್ಲಿದ್ದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಪ್ರಕರಣ ನಡೆದ ನಂತರ ಸುರೇಶ್ ತಲೆಮರೆಸಿಕೊಂಡಿದ್ದರಿಂದ ಪೊಲೀಸರ ಅನುಮಾನ ಮತ್ತಷ್ಟು ಬಲಗೊಂಡಿತ್ತು.
ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳು ಬಹಿರಂಗವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣ ಹಾಗೂ ಮದುವೆ ವಿಚಾರವೇ ಕೊಲೆಗೆ ಕಾರಣ?
ಪೊಲೀಸರ ಪ್ರಕಾರ, ಗಂಡನಿಂದ ದೂರವಾಗಿದ್ದ ಶಾಂತಮ್ಮ ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿದ್ದರು. ಸುಮಾರು ಐದು ತಿಂಗಳ ಹಿಂದೆ ಆಕೆಗೆ ಸುರೇಶ್ ಪರಿಚಯವಾಗಿದ್ದು, ನಂತರ ಇಬ್ಬರ ನಡುವೆ ಆತ್ಮೀಯ ಸಂಬಂಧ ಬೆಳೆದಿತ್ತು ಎನ್ನಲಾಗಿದೆ.
ಶಾಂತಮ್ಮ ಸುರೇಶ್‌ಗೆ ಬೇರೆಯವರಿಂದ ಸುಮಾರು ಒಂದು ಲಕ್ಷ ರೂಪಾಯಿ ಸಾಲ ಕೊಡಿಸಿದ್ದಳು ಎನ್ನಲಾಗಿದೆ. ಬಳಿಕ ಆ ಹಣವನ್ನು ವಾಪಸ್ ನೀಡುವಂತೆ ಹಾಗೂ ತನ್ನನ್ನು ಮದುವೆಯಾಗುವಂತೆ ಶಾಂತಮ್ಮ ಸುರೇಶ್‌ಗೆ ಒತ್ತಾಯಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ಇದೇ ಹಿನ್ನೆಲೆಯಲ್ಲಿ ಸುರೇಶ್ ಕೊಲೆ ಮಾಡಲು ಮುಂದಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ತೆಲಂಗಾಣ ಗಡಿಯಲ್ಲಿ ಸರಾಯಿ ಕುಡಿಸಿ ಅರಣ್ಯಕ್ಕೆ ಕರೆತಂದ ಆರೋಪ
ಸೆಪ್ಟೆಂಬರ್ 20ರಂದು ಸುರೇಶ್ ಶಾಂತಮ್ಮಳನ್ನು ಬೈಕ್‌ನಲ್ಲಿ ಕರ್ನಾಟಕ-ತೆಲಂಗಾಣ ಗಡಿಯ ಜಲಾಲಪುರ ಪ್ರದೇಶಕ್ಕೆ ಕರೆದೊಯ್ದಿದ್ದಾನೆ ಎನ್ನಲಾಗಿದೆ. ಅಲ್ಲಿ ಆಕೆಗೆ ಹೆಚ್ಚಿನ ಪ್ರಮಾಣದಲ್ಲಿ ಸರಾಯಿ ಕುಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಶಾಂತಮ್ಮಳನ್ನು ಬಾಚವಾರ್ ಗ್ರಾಮದ ಅರಣ್ಯ ಪ್ರದೇಶಕ್ಕೆ ಕರೆತಂದು, ಆಕೆ ಪ್ರಜ್ಞೆ ತಪ್ಪಿದ ಸಂದರ್ಭದಲ್ಲಿ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕೊಲೆ ಮಾಡಿದ ಬಳಿಕ ಬೈಕ್‌ನಿಂದ ಪೆಟ್ರೋಲ್ ಹಾಗೂ ತನ್ನೊಂದಿಗೆ ತಂದಿದ್ದ ಸರಾಯಿಯನ್ನು ಶವದ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶವ ಸಂಪೂರ್ಣವಾಗಿ ಸುಟ್ಟು ಕರಕಲಾಗುವವರೆಗೂ ಅಲ್ಲಿಯೇ ಇದ್ದ ಬಳಿಕ ಸುರೇಶ್ ಬೆಂಗಳೂರಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ನ್ಯಾಯಾಂಗ ಬಂಧನಕ್ಕೆ ಆರೋಪಿಯ ರವಾನೆ
ಬಳೆ, ನಾಪತ್ತೆ ಪ್ರಕರಣದ ಮಾಹಿತಿ, ಮೊಬೈಲ್ ಕರೆಗಳ ವಿವರ ಹಾಗೂ ಆರೋಪಿಯ ಚಲನವಲನಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದು, ಕೊನೆಗೆ ಸುರೇಶ್‌ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

