ಬೆಳಗಾವಿ ಅಧಿವೇಶನದಲ್ಲಿ ಚರ್ಚೆ – ಕಾನೂನುಬದ್ಧ ಅಡಿಪಾಯಕ್ಕೆ ಸರ್ಕಾರದ ಸಿದ್ಧತೆ
ಬಾವುಟದ ಬಣ್ಣದಲ್ಲಿ ಯಾವುದೇ ಬದಲಾವಣೆ ಇಲ್ಲ – ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಕನ್ನಡ ಬಾವುಟ ಹಾರಿಸುವ ಚಿಂತನೆ
ಬೆಂಗಳೂರು, ನ.1:
“ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜದ ಸ್ಥಾನಮಾನ ನೀಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಈ ಕುರಿತು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸಲಾಗುವುದು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.
ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಷಣ ಮಾಡಿದ ಅವರು, ಬಳಿಕ ಸದಾಶಿವನಗರ ನಿವಾಸ ಹಾಗೂ ವಿಧಾನಸೌಧದ ಭುವನೇಶ್ವರಿ ಪ್ರತಿಮೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ ಸರ್ಕಾರದ ಮುಂದಿನ ಯೋಜನೆಗಳನ್ನು ವಿವರಿಸಿದರು.
ಮುಖ್ಯಮಂತ್ರಿ ಕಚೇರಿ ಮತ್ತು ವಿಧಾನಸೌಧದಲ್ಲಿ ರಾಷ್ಟ್ರಧ್ವಜದ ಪಕ್ಕದಲ್ಲೇ ಕನ್ನಡ ಬಾವುಟವನ್ನು ಗೌರವಯುತವಾಗಿ ಹಾರಿಸಲು ಅಗತ್ಯವಿರುವ ಕಾನೂನು, ನೀತಿ-ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ರೂಪಿಸಲಾಗುವುದು ಎಂದು ತಿಳಿಸಿದ ಅವರು, ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಿ ನಾಡಧ್ವಜಕ್ಕೆ ಕಾನೂನುಬದ್ಧ ಅಡಿಪಾಯ ಹಾಕುವ ಉದ್ದೇಶ ಸರ್ಕಾರದ್ದಾಗಿದೆ ಎಂದರು.
ಈ ಹಿಂದೆ ರಾಜ್ಯ ಸಚಿವ ಸಂಪುಟದಲ್ಲಿ ಈ ಕುರಿತು ತೀರ್ಮಾನ ಮಾಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಅಧಿಕೃತ ಮಾನ್ಯತೆ ದೊರೆತಿಲ್ಲ ಎಂದು ಅವರು ನೆನಪಿಸಿದರು.
ಕನ್ನಡ ಬಾವುಟಕ್ಕೆ ನೀಡಬೇಕಾದ ಗೌರವ, ರಾಷ್ಟ್ರಧ್ವಜದ ಪಕ್ಕದಲ್ಲಿ ಹಾರಿಸುವ ವೇಳೆ ಪಾಲಿಸಬೇಕಾದ ನಿಯಮಗಳು ಹಾಗೂ ಕಾನೂನುಬದ್ಧ ಅವಕಾಶಗಳ ಕುರಿತು ಸರ್ಕಾರ ಸಮಗ್ರ ಮಾರ್ಗಸೂಚಿ ಸಿದ್ಧಪಡಿಸಲಿದೆ. ಕನ್ನಡಿಗರು ಕನ್ನಡ ಬಾವುಟವನ್ನು ಯಾವ ರೀತಿಯಲ್ಲಿ ಗೌರವದಿಂದ ಕಾಣಬೇಕು ಎಂಬುದಕ್ಕೂ ಸರ್ಕಾರ ನಿಯಮ ರೂಪಿಸಲಿದೆ ಎಂದು ಹೇಳಿದರು.
“ಮತ್ತೊಮ್ಮೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡು ಕಾನೂನು ರೂಪಿಸಿ ರಾಷ್ಟ್ರಧ್ವಜದ ಪಕ್ಕದಲ್ಲಿ ಕನ್ನಡ ಧ್ವಜ ಹಾರಿಸಲು ಸರ್ಕಾರ ಬದ್ಧವಾಗಿದೆ. ಇದು ನಮ್ಮ ಸರ್ಕಾರವಲ್ಲ, ನಿಮ್ಮ ಸರ್ಕಾರ. ಕನ್ನಡಿಗರ ಭಾವನೆಯ ಹೆಗ್ಗುರುತಾದ ಕೆಂಪು-ಹಳದಿ ಬಾವುಟಕ್ಕೆ ಗೌರವದ ಸ್ಥಾನ ಕಲ್ಪಿಸಲಾಗುವುದು. ಕನ್ನಡದ ಜ್ಞಾನ, ಪರಂಪರೆ, ಸಂಸ್ಕೃತಿ, ಸರ್ವಧರ್ಮ ಸಮಾನತೆ ಹಾಗೂ ಶಾಂತಿಯ ಸಂದೇಶ ಸಾರುವ ಈ ಬಾವುಟವನ್ನು ಅಧಿಕೃತ ನಾಡಧ್ವಜವನ್ನಾಗಿ ರೂಪಿಸಲು ಸರ್ಕಾರ ಮುಂದಾಗಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಹೆಗ್ಗುರುತನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರ್ಧಾರ ಇದಾಗಿದೆ” ಎಂದು ಹೇಳಿದರು.
ಕನ್ನಡ ಬಾವುಟ ಹಾರಿಸುವುದನ್ನು ಕಡ್ಡಾಯಗೊಳಿಸುವ ಚಿಂತನೆ
71ನೇ ಕನ್ನಡ ರಾಜ್ಯೋತ್ಸವದಿಂದ ಆರಂಭವಾಗುವ ಒಂದು ವರ್ಷದ ಅವಧಿಯಲ್ಲಿ ಕನ್ನಡದ ಹಿರಿಮೆ ಸಾರುವ ವಿಶೇಷ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದ ಮುಖ್ಯಮಂತ್ರಿ, ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಬಾವುಟ ಹಾರಿಸುವುದರ ಜೊತೆಗೆ ಸರ್ಕಾರದ ನೆರವು ಪಡೆಯುವ ಸಂಸ್ಥೆಗಳಲ್ಲಿಯೂ ಕನ್ನಡ ಬಾವುಟ ಹಾರಿಸುವುದನ್ನು ಕಡ್ಡಾಯಗೊಳಿಸುವ ಕುರಿತು ಚಿಂತನೆ ನಡೆದಿದೆ ಎಂದರು.
ಖಾಸಗಿ ಸಂಸ್ಥೆಗಳೂ ಕನ್ನಡ ಬಾವುಟ ಹಾರಿಸುವಂತೆ ಈ ತಿಂಗಳಲ್ಲಿಯೇ ಸರ್ಕಾರ ಆದೇಶ ಹೊರಡಿಸಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದರು.
ಭಾಷೆ ಸಂಸ್ಕೃತಿ ಮತ್ತು ಜ್ಞಾನದ ಪ್ರತಿಬಿಂಬ
“ನಮ್ಮ ಉಸಿರು, ಹೆಸರು, ಕಸುಬು ಕನ್ನಡ. ನಮ್ಮ ನುಡಿ ಬಹಳ ಚೆಂದ; ಅದರಲ್ಲಿ ಏನೇ ಗೀಚಿದರೂ ಆಗುವುದು ಶ್ರೀಗಂಧ. ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ” ಎಂದು ಹೇಳಿದ ಮುಖ್ಯಮಂತ್ರಿ, ದಾ.ರಾ. ಬೇಂದ್ರೆ ಅವರ ವಿಚಾರಗಳನ್ನು ಉಲ್ಲೇಖಿಸಿ ಭಾಷೆ ಸಂಸ್ಕೃತಿ ಹಾಗೂ ಜ್ಞಾನದ ಪ್ರತಿಬಿಂಬವಾಗಿದೆ ಎಂದು ಹೇಳಿದರು.
“ಹೆತ್ತ ತಾಯಿ, ಹುಟ್ಟಿದ ನಾಡು ಸ್ವರ್ಗಕ್ಕಿಂತ ಮಿಗಿಲು. ನಾವು ಬೇರೆಯವರ ಮನಸ್ಸನ್ನು ಕನ್ನಡದಿಂದಲೇ ಗೆಲ್ಲಬೇಕು. ಜಗತ್ತಿನ ಯಾವ ಮೂಲೆಯಲ್ಲಿದ್ದರೂ ನಮ್ಮ ಉಸಿರು ಕನ್ನಡವಾಗಿರಬೇಕು” ಎಂದು ಕರೆ ನೀಡಿದರು.
ಮಾತೃಭಾಷೆಯಲ್ಲಿ ಕಲಿಯುವ ಜ್ಞಾನ ಗಟ್ಟಿಯಾಗಿರುತ್ತದೆ
ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಮಾತೃಭಾಷೆ ಉಳಿಸಲು ಸಂಘಟನೆಗಳನ್ನು ಕಟ್ಟಿಕೊಂಡು ಶ್ರಮಿಸುತ್ತಿರುವುದನ್ನು ಶ್ಲಾಘಿಸಿದ ಅವರು, “ನುಡಿ ಉಳಿದರೆ ನಾಡು ಉಳಿಯುತ್ತದೆ, ನಾಡು ಉಳಿದರೆ ನುಡಿ ಉಳಿಯುತ್ತದೆ” ಎಂದರು.
“ಮಾತೃಭಾಷೆಯಲ್ಲಿ ಕಲಿಯುವ ಜ್ಞಾನ ಗಟ್ಟಿಯಾಗಿರುತ್ತದೆ. ಕನ್ನಡವನ್ನು ಪ್ರೀತಿಸುವುದು ತಾಯಿಯನ್ನು ಪ್ರೀತಿಸಿದಂತೆಯೇ. ಕುವೆಂಪು ಅವರು ಕನ್ನಡದಲ್ಲಿ ವಿಶ್ವಮಾನವ ಸಂದೇಶ ಸಾರಿದ್ದಾರೆ. ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಶಾಸ್ತ್ರೀಯ ಭಾಷೆಯ ಸ್ಥಾನಮಾನ ಹಾಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ” ಎಂದು ಹೇಳಿದರು.
ಪಂಪ, ರನ್ನ, ಜನ್ನ, ಕುಮಾರವ್ಯಾಸ, ಕನಕದಾಸ, ಪುರಂದರದಾಸ, ಬಸವಣ್ಣ, ಸರ್ವಜ್ಞ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಗೋಕಾಕ್, ಯು.ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಸಿದ್ದಲಿಂಗಯ್ಯ, ನಿಸಾರ್ ಅಹ್ಮದ್ ಮೊದಲಾದ ಮಹನೀಯರ ಸೇವೆಯನ್ನು ಸ್ಮರಿಸಿದರು.
“ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ್ದು ಕನ್ನಡ ನಾಡು. ಭಾಷೆಗೆ ಗಡಿಯಿಲ್ಲ. ಡಿಜಿಟಲ್ ಯುಗದಲ್ಲಿ ಕನ್ನಡ ಇನ್ನಷ್ಟು ಬೆಳೆಯಬೇಕು. ಮಕ್ಕಳು ಮೊದಲು ಕನ್ನಡ ಕಲಿಯಬೇಕು; ಕಲಿತಷ್ಟೇ ಸಾಲದು, ಪ್ರತಿದಿನ ಬಳಸಬೇಕು” ಎಂದು ಹೇಳಿದರು.
ಕನ್ನಡ ಕೇವಲ ಸರ್ಕಾರಿ ಭಾಷೆಯಲ್ಲ, ಹೃದಯದ ಭಾಷೆಯಾಗಬೇಕು
“ಕನ್ನಡ ಕೇವಲ ಸರ್ಕಾರಿ ಭಾಷೆ ಮಾತ್ರವಲ್ಲ; ಅದು ಹೃದಯದ ಭಾಷೆಯಾಗಬೇಕು. ಭಾಷೆ ಬದುಕು. ಭಾಷೆ ಇಲ್ಲದ ಬದುಕು ಮೂಕಿಚಿತ್ರದಂತಾಗುತ್ತದೆ” ಎಂದು ಮುಖ್ಯಮಂತ್ರಿ ಹೇಳಿದರು.
ಕನ್ನಡದ ಬೇರುಗಳು ಸರ್ಕಾರಿ ಶಾಲೆಗಳಲ್ಲಿವೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ (AI) ಶಿಕ್ಷಣ ಆರಂಭಿಸಲಾಗಿದ್ದು, ಅದನ್ನು 12ನೇ ತರಗತಿವರೆಗೆ ವಿಸ್ತರಿಸಲಾಗುವುದು ಎಂದರು. ಸಿಎಸ್ಆರ್ ನಿಧಿಯಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಕರ್ನಾಟಕ ಪಬ್ಲಿಕ್ ಶಾಲೆಗಳ ಆಧುನೀಕರಣ ನಡೆಯುತ್ತಿದೆ ಎಂದು ವಿವರಿಸಿದರು.
ಗ್ರಾಮೀಣ ಸರ್ಕಾರಿ ಶಾಲೆ ಮಕ್ಕಳಿಗೆ ವೃತ್ತಿಪರ ಶಿಕ್ಷಣದಲ್ಲಿ ಶೇ.7 ಮೀಸಲಾತಿ
ಪಂಚಾಯಿತಿ ಮಟ್ಟದ ಸರ್ಕಾರಿ ಶಾಲೆಗಳನ್ನು ನಗರ ಶಾಲೆಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ 15 ಸಾವಿರ ಶಿಕ್ಷಕರ ನೇಮಕಾತಿಗೆ ಆದೇಶ ನೀಡಲಾಗಿದೆ.
ರಾಜ್ಯದಲ್ಲಿ 25,498 ದ್ವಿಭಾಷಾ ಶಾಲೆಗಳು ಆರಂಭವಾಗಿದ್ದು, 250 ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಆರನೇ ತರಗತಿಯಿಂದ ಕೌಶಲ್ಯಾಧಾರಿತ ಶಿಕ್ಷಣ ಆರಂಭಿಸಲಾಗಿದೆ.
ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಶಿಕ್ಷಣದಲ್ಲಿ ಶೇ.7ರಷ್ಟು ಮೀಸಲಾತಿ ನೀಡಲಾಗಿದೆ ಎಂದು ತಿಳಿಸಿದರು.
ನಗರದ ಮಕ್ಕಳಿಗೆ ಗ್ರಾಮಾನುಭವ
ಬೆಂಗಳೂರು ಸೇರಿದಂತೆ ಹತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯ ಶಾಲಾ ಮಕ್ಕಳಿಗೆ 2-3 ದಿನಗಳ ಗ್ರಾಮವಾಸ್ತವ್ಯ ಕಾರ್ಯಕ್ರಮದ ಮೂಲಕ ಕೃಷಿ, ತೋಟಗಾರಿಕೆ ಹಾಗೂ ಗ್ರಾಮೀಣ ಜೀವನ ಪರಿಚಯಿಸುವ “ಗ್ರಾಮಾನುಭವ” ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ
ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಚಿನ್ನಕ್ಕೆ ₹1 ಕೋಟಿ, ಬೆಳ್ಳಿಗೆ ₹75 ಲಕ್ಷ ಹಾಗೂ ಕಂಚಿಗೆ ₹50 ಲಕ್ಷ ಬಹುಮಾನ ನೀಡಲಾಗಿದೆ. ಭಾಗವಹಿಸಿದವರಿಗೆ ತಲಾ ₹5 ಲಕ್ಷ ನೀಡಲಾಗಿದೆ.
ಪ್ಯಾರಾಲಿಂಪಿಕ್ಸ್ ಸಿದ್ಧತೆಗೆ ಕ್ರೀಡಾಪಟುಗಳಿಗೆ ತಲಾ ₹10 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಸರ್ಕಾರಿ ಉದ್ಯೋಗಗಳಲ್ಲಿ ಶೇ.2 ಹಾಗೂ ಅರಣ್ಯ ಮತ್ತು ಪೊಲೀಸ್ ಇಲಾಖೆಯಲ್ಲಿ ಶೇ.3ರಷ್ಟು ಮೀಸಲಾತಿ ನೀಡಲಾಗಿದೆ ಎಂದು ತಿಳಿಸಿದರು.
ಭಾರತ ಜೋಡೋ ಯುವ ಸಂಘಗಳು
ರಾಜ್ಯವನ್ನು ನಶೆಮುಕ್ತವಾಗಿಸುವ ಗುರಿಯೊಂದಿಗೆ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ 10 ಸಾವಿರ “ಭಾರತ ಜೋಡೋ ಯುವ ಸಂಘ”ಗಳನ್ನು ಸ್ಥಾಪಿಸಿ, 16ರಿಂದ 35 ವರ್ಷದೊಳಗಿನ ಯುವಕರನ್ನು ಸದಸ್ಯರನ್ನಾಗಿ ಮಾಡಲಾಗುವುದು ಎಂದು ಘೋಷಿಸಿದರು.
ಪ್ರತಿ ಸಂಘಕ್ಕೆ ವಾರ್ಷಿಕ ₹10 ಲಕ್ಷ ಅನುದಾನ ನೀಡಿ ಕ್ರೀಡೆ, ಕಲೆ, ಸಂಸ್ಕೃತಿ ಹಾಗೂ ನಾಯಕತ್ವ ಬೆಳೆಸುವ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ
72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಆದೇಶ ನೀಡಲಾಗಿದ್ದು, 66 ಸಾವಿರ ಉದ್ಯೋಗಗಳು ಸೃಷ್ಟಿಯಾಗಿವೆ. ಉದ್ಯೋಗ ಸೇತು ವ್ಯವಸ್ಥೆ ಹಾಗೂ 100 ಐಟಿಐಗಳನ್ನು ಕೈಗಾರಿಕೆಗಳೊಂದಿಗೆ ಜೋಡಿಸುವ ಕಾರ್ಯಕ್ರಮ ಜಾರಿಯಲ್ಲಿದೆ ಎಂದು ಹೇಳಿದರು.
ರೈತರಿಗೆ ಶಕ್ತಿ ತುಂಬಲು ಹಾಲಿನ ದರ ಏರಿಕೆ
ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಪ್ರತಿ ಲೀಟರ್ ಹಾಲಿನ ದರವನ್ನು ₹8 ಹೆಚ್ಚಿಸಲಾಗಿದೆ. ಅದರಲ್ಲಿ ₹7 ನೇರವಾಗಿ ರೈತರಿಗೆ ತಲುಪಲಿದ್ದು, 11 ಲಕ್ಷ ರೈತ ಕುಟುಂಬಗಳಿಗೆ ಲಾಭವಾಗಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ರಸ್ತೆ ಸಂಪರ್ಕ ಯೋಜನೆಗೆ ₹10 ಸಾವಿರ ಕೋಟಿ, 20 ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿಗೆ ₹6 ಸಾವಿರ ಕೋಟಿ, ಸರ್ಕಾರಿ ಆಸ್ಪತ್ರೆ ದತ್ತು ಯೋಜನೆ, 100 ಹೊಸ ಆಂಬುಲೆನ್ಸ್, 1995ರ ನಂತರ ಆರಂಭವಾದ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ನೆರವು, ನೇಗಿಲ ಯೋಗಿ ಯೋಜನೆ, ಭೂ ಗ್ಯಾರಂಟಿ, ತೇಗ ಸಿರಿ ಯೋಜನೆ, ಐದು ಲಕ್ಷ ನಿವೇಶನ ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ವಿವರಿಸಿದರು.
ಕೃಷಿ ಕ್ಷೇತ್ರದಲ್ಲಿ ಡ್ರೋನ್ ಹಾಗೂ ಉಪಗ್ರಹ ಆಧಾರಿತ ಬೆಳೆ ಸಮೀಕ್ಷೆ, ಡಿಜಿಟಲ್ ಬೆಳೆ ಸಮೀಕ್ಷೆ, ಕರ್ನಾಟಕ ಪ್ರೋಟೀನ್ ಮಿಷನ್, ಮುಖ್ಯಮಂತ್ರಿ ರೈತ ವಿದ್ಯಾನಿಧಿ, ವಸುಧಾಮೃತ, ತೇಗ ಸಿರಿ, 37.32 ಲಕ್ಷ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ಸೇರಿಸುವುದು, ₹30 ಸಾವಿರ ಕೋಟಿ ಕೃಷಿ ಸಾಲ ವಿತರಣೆ, 3.41 ಲಕ್ಷ ರೈತರಿಗೆ ಕೃಷಿ ಯಂತ್ರೋಪಕರಣ, 32,138 ಕೃಷಿ ಹೊಂಡ ನಿರ್ಮಾಣ ಹಾಗೂ ₹2,825 ಕೋಟಿ ವೆಚ್ಚದಲ್ಲಿ ಹನಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
50 ವರ್ಷಗಳ ಹಳೆಯ ನೆನಪು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, “50 ವರ್ಷಗಳ ಹಿಂದೆ ನಾನು ಇದೇ ಕಂಠೀರವ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಇಂದು ನಿಮ್ಮನ್ನು ನೋಡಿದಾಗ ಆ ನೆನಪು ಮರುಕಳಿಸುತ್ತಿದೆ. ನೀವು ಕೂಡ ಉತ್ತಮ ಸ್ಥಾನಕ್ಕೆ ಏರಬೇಕು” ಎಂದು ಶುಭ ಹಾರೈಸಿದರು.
ಮಾಧ್ಯಮ ಪ್ರಶ್ನೆಗೆ ಸ್ಪಷ್ಟನೆ – ಬಾವುಟದ ಬಣ್ಣ ಬದಲಾಗುವುದಿಲ್ಲ
ಕನ್ನಡ ಬಾವುಟದ ಬಣ್ಣ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, “ಯಾವುದೇ ಹೊಸ ಬಣ್ಣ ಸೇರಿಸುವುದಿಲ್ಲ. ಈಗಿರುವ ಕೆಂಪು-ಹಳದಿ ಬಣ್ಣಗಳೇ ಮುಂದುವರಿಯುತ್ತವೆ. ಜನರ ಪ್ರೀತಿಯಿಂದ ಒಪ್ಪಿಗೆಯಾಗಿರುವ ಇದೇ ಬಾವುಟಕ್ಕೆ ಸರ್ಕಾರ ಆದ್ಯತೆ ನೀಡಲಿದೆ” ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಮೂರು ಬಣ್ಣಗಳ ಧ್ವಜದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈಗಿರುವ ಕನ್ನಡ ಬಾವುಟವೇ ಮುಂದುವರಿಯಲಿದೆ. ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿರುವ ಬಾವುಟದ ಬಣ್ಣಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ” ಎಂದು ಪುನರುಚ್ಚರಿಸಿದರು.

