ಅಥಣಿ: MSP ದರ ಹೆಚ್ಚಳಕ್ಕೆ ಆಗ್ರಹಿಸಿ ರೈತರು ವಿಮಾನ ನಿಲ್ದಾಣ, ರೈಲು ಬಂದ್ ಮಾಡುವ ಹಂತಕ್ಕೆ ಹೋಗಿದ್ದಾರೆ. ಇದು ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದಿರುವುದಕ್ಕೆ ಸಾಕ್ಷಿ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ಒಂದು ಎಕರೆಗೆ ಕಬ್ಬು ಬೆಳೆಯಲು ಏನು ಖರ್ಚು ಬರುತ್ತದೆ ಎಂದು ಕೇಂದ್ರ ಸರ್ಕಾರ ಅಧ್ಯಯನವೇ ಮಾಡಿಲ್ಲ. ರಸಗೊಬ್ಬರ ದರ ಎಷ್ಟಾಗಿದೆ, ಲೇಬರ್ ಖರ್ಚು ಎಷ್ಟು, ಕ್ರಿಮಿನಾಶಕ ಸಿಂಪಡಣೆಗೆ ಎಷ್ಟು ಖರ್ಚು ಬರುತ್ತದೆ ಎಂಬುದು ಅವರಿಗೆ ಅರ್ಥವೇ ಆಗುತ್ತಿಲ್ಲ. ಕಳೆದ ಒಂದು ವರ್ಷದಿಂದ MSP ಹೆಚ್ಚಿಸಬೇಕು ಎಂದು ಲಿಖಿತವಾಗಿ ಮತ್ತು ವೈಯಕ್ತಿಕ ಯಾಗಿ ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಮೊನ್ನೆ ಹುಬ್ಬಳ್ಳಿಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರ ಗಮನ ಸೆಳೆಯಲು ರೈತ ಸಂಘಟನೆಗಳು ಪ್ರತಿಭಟನೆ ಮಾಡಿದರೂ ಕೇಂದ್ರ ಗಮನ ಹರಿಸುವಲ್ಲಿ ವಿಫಲವಾಗಿದೆ.
ಸಕ್ಕರೆಗೆ ಎರಡು ದರ ನೀತಿ ಅಗತ್ಯ
ಕಾರ್ಖಾನೆಯವರು ಕಬ್ಬಿಗೆ ಹೆಚ್ಚು ದರ ಕೊಡಬೇಕಾದರೆ ಸಕ್ಕರೆಗೂ ಹೆಚ್ಚಿನ ದರ ಸಿಗಬೇಕು. ಇದಕ್ಕಾಗಿ ಸಕ್ಕರೆ ದರವನ್ನು ಎರಡು ರೀತಿ ಮಾಡಬೇಕು. ಒಂದು ಗ್ರಾಹಕರು ಬಳಸುವ ಸಕ್ಕರೆಗೆ ಒಂದು ದರ, ಇನ್ನೊಂದು ಕಮರ್ಷಿಯಲ್ ಬಳಕೆ – ಕೋಕಾ-ಕೋಲಾ, ಸಾಫ್ಟ್ ಡ್ರಿಂಕ್ಸ್, ಸ್ವೀಟ್ ತಯಾರಿಕೆಗೆ ಬಳಸುವ ಸಕ್ಕರೆಗೆ ಇನ್ನೊಂದು ದರ. ಈ ಎರಡು ದರದ ಸರಾಸರಿಯನ್ನು MSP ಎಂದು ಪರಿಗಣಿಸಬೇಕು. ಆಗ ಗ್ರಾಹಕರ ಮೇಲೂ ಹೊರೆ ಬೀಳುವುದಿಲ್ಲ, ರೈತರಿಗೂ ನ್ಯಾಯ ಸಿಗುತ್ತದೆ.
ಎಥೆನಾಲ್ ನೀತಿಯನ್ನು ತಂದವರೇ ಕೇಂದ್ರ ಸರ್ಕಾರ. ಎಲ್ಲ ಕಾರ್ಖಾನೆಯವರು ಉತ್ಪಾದನೆ ಮಾಡಿ ಎಂದು ಪರ್ಮಿಷನ್ ಕೊಟ್ಟವರು ಅವರೇ. ಬ್ಯಾಂಕ್ ಸಾಲದ ಬಡ್ಡಿಯಲ್ಲಿ ಅರ್ಧ ನಾವು ಭರಿಸುತ್ತೇವೆ ಎಂದು ಹೇಳಿ ಎಥೆನಾಲ್ ಉತ್ಪಾದನೆಗೆ ಮುಂದಾಗಿಸಿದರು. ಇವತ್ತು ಸಿ-ಮೊಲಾಸಿಸ್, ಬಿ-ಹೆವಿ ಮತ್ತು ಜ್ಯೂಸ್ ಟು ಎಥೆನಾಲ್ ಗೆ 57, 61, 65 ರೂ. ಎಂದು ಮೂರು ತರಹದ ದರ ಕೊಡುತ್ತಾರೆ. ಸರಾಸರಿ 62 ರೂ. ಆಗುತ್ತದೆ. ಇವತ್ತು ನೀವು ಪೆಟ್ರೋಲ್ ಅನ್ನು 110 ರೂ.ಗೆ ಮಾರುತ್ತಿದ್ದೀರಿ. 62 ರೂ.ಗೆ ತೆಗೆದುಕೊಂಡು 110 ರೂ.ಗೆ ಮಾರಿದರೆ ನಿಮಗೆ 50 ರೂ. ಲಾಭ ಉಳಿಯುತ್ತದೆ.
ಆಯಿಲ್ ಕಂಪನಿಯವರು ರೈತರ ಹೊಲಕ್ಕೆ ಬಂದು ನೀರು ಹಾಕಿದ್ದಾರಾ? ಗೊಬ್ಬರ ಕೊಟ್ಟಿದ್ದಾರಾ? ಸೊಪ್ಪು ತೆಗೆದಿದ್ದಾರಾ? ಕಟಾವು ಮಾಡಿದ್ದಾರಾ? ಟ್ರಾನ್ಸ್ಪೋರ್ಟ್ ಮಾಡಿದ್ದಾರಾ? ಏನೂ ಮಾಡದೆ 50 ರೂ. ಲಾಭ ಇಟ್ಟುಕೊಳ್ಳುತ್ತಾರೆ. ಅವರಿಗೆ ಪ್ರೊಸೆಸಿಂಗ್ ಚಾರ್ಜ್ ಇಲ್ಲ. ಮೇಲಿನಿಂದ ಸುರಿದು ಕೆಳಗಡೆ ಪೆಟ್ರೋಲ್ ಬಂಕ್ಗೆ ಕಳುಹಿಸುತ್ತಾರೆ. ಪೆಟ್ರೋಲ್ ಬಂಕ್ದವರಿಗೆ 3-4 ರೂ. ಕಮಿಷನ್ ಕೊಡುತ್ತಾರೆ. 7-8 ವರ್ಷದ ಹಿಂದಿನ ಆಯಿಲ್ ಕಂಪನಿಗಳ ಬ್ಯಾಲೆನ್ಸ್ ಶೀಟ್ ನೋಡಿ, ಇಂದಿನ ಸ್ಥಿತಿ ನೋಡಿ. ರೈತರ ಶ್ರಮಕ್ಕೆ ಬೆಲೆ ಇಲ್ಲ, ಕಾರ್ಖಾನೆಯವರಿಗೆ ಲಾಭ ಇಲ್ಲ, ನೇರ ಲಾಭ ಆಯಿಲ್ ಕಂಪನಿಗಳಿಗೆ ಆಗುತ್ತಿದೆ.
ಸರಾಸರಿ 62 ರೂ. ಕೊಡುವ ಬದಲು ಕನಿಷ್ಠ 90 ರೂ. ಎಥೆನಾಲ್ ದರ ಕೊಡಬೇಕು. 90 ರೂ. ಕೊಟ್ಟರೆ ಸಕ್ಕರೆಯಿಂದ ಬರುವ ಲಾಭ ಮತ್ತು ಎಥೆನಾಲ್ ಲಾಭವನ್ನು ರೈತರಿಗೆ ವರ್ಗಾಯಿಸಿದರೆ ಪ್ರತಿ ಟನ್ಗೆ 5 ಸಾವಿರ ರೂ. ದರ ಸಿಗಲು ಸಾಧ್ಯವಿದೆ. ನಾನು ಕ್ಯಾಲ್ಕುಲೇಷನ್ ಮಾಡಿದ್ದೇನೆ.
ಕಳೆದ 12ನೇ ತಾರೀಖು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಆಹಾರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ದೆಹಲಿಯಲ್ಲಿ ಸಭೆ ನಡೆಯಿತು. 80 ರಿಂದ 100 ರೈತ ಮುಖಂಡರು, ರಾಜ್ಯದ ಸಹಕಾರ, ಕೃಷಿ ಮತ್ತು ಸಕ್ಕರೆ ಸಚಿವರಾಗಿ ನಾವು ಭಾಗವಹಿಸಿದ್ದೆವು. ರೈತರ ವಿಚಾರಗಳನ್ನು ಆಲಿಸಿದರು. ಆದರೆ ಸಚಿವ ಸಂಪುಟದಲ್ಲಿ ಚರ್ಚಿಸಿ ದರ ಘೋಷಣೆ ಮಾಡುವ ಬದಲು, 8 ದಿನದಲ್ಲಿ ಕಮಿಟಿ ಮಾಡಿ ಒಂದು ತಿಂಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದರು. ಇದು ಯಾರಿಗೂ ಸಮಂಜಸವಲ್ಲ. ಸಭೆ ವಿಫಲವಾಯಿತು.
ಒಂದು ವರ್ಷದಿಂದ ಕಬ್ಬಿಗೆ ದರ ಸಿಗಬೇಕು, ಸಕ್ಕರೆ ಬೆಲೆ ಹೆಚ್ಚಾಗಬೇಕು, ಉತ್ಪಾದನೆಯಾಗುವ ಸಂಪೂರ್ಣ ಎಥೆನಾಲ್ ಅನ್ನು ಕೇಂದ್ರವೇ ತೆಗೆದುಕೊಳ್ಳಬೇಕು ಎಂಬ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರ ಇದರ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದ ಕಾರಣ ರಾಜ್ಯದ ಬೇರೆ ಬೇರೆ ಕಡೆ ಚಳುವಳಿಗಳು ಪ್ರಾರಂಭವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಇನ್ನು ಕಮಿಟಿ ಮಾಡುವ ಅವಶ್ಯಕತೆ ಇಲ್ಲ. ತಕ್ಷಣಕ್ಕೆ ಎಥೆನಾಲ್ ಗೆ ಇಷ್ಟು, ಸಕ್ಕರೆಗೆ ಇಷ್ಟು ಎಂದು ಘೋಷಣೆ ಮಾಡಬೇಕು. ನಿನ್ನೆಯ ಸಭೆಗೆ ಪೆಟ್ರೋಲ್ ಸಚಿವರು ಬರಬೇಕಿತ್ತು, ಏಕೆಂದರೆ ನಮ್ಮ ಡಿಮ್ಯಾಂಡ್ ಅಲ್ಲೇ ಇದೆ.
ಕೇಂದ್ರದಲ್ಲಿ ಬಹುತೇಕ ನಿವೃತ್ತ IAS ಅಧಿಕಾರಿಗಳೇ ಸಚಿವರಾಗಿರುವುದರಿಂದ ರೈತರ ಬಗ್ಗೆ ಅವರಿಗೆ ಏನು ಗೊತ್ತು? ಆಡಳಿತಾತ್ಮಕ ಅನುಭವ ಇರಬಹುದು, ಆದರೆ ಥೇಯರಿ ಬೇರೆ, ಪ್ರಾಕ್ಟಿಕಲ್ ಬೇರೆ. ಪ್ರಹ್ಲಾದ್ ಜೋಶಿ ಅವರು ಸಭೆ ಸಫಲವಾಯಿತು ಎನ್ನುತ್ತಾರೆ. ಸಫಲವಾಗಿದ್ದರೆ ರೈತರು ಇವತ್ತು ಹಗಲು-ರಾತ್ರಿ ರಸ್ತೆಯಲ್ಲಿ ಧರಣಿ ಮಾಡುತ್ತಿದ್ದರಾ? ಎಂದು ಪ್ರಶ್ನಿಸಿದರು.

