ನೇಮಕಾತಿಯಲ್ಲಿ ಕರಾಟೆ–ಯೋಗ ಶಿಕ್ಷಕರನ್ನು ಪ್ರತ್ಯೇಕವಾಗಿ ಪರಿಗಣಿಸಲು ಆಗ್ರಹ – ಪತ್ರ ಬರೆಯುವ ಭರವಸೆ ನೀಡಿದ ಡಾ. ನಾಗಲಕ್ಷ್ಮಿ ಚೌಧರಿ
ಮುದ್ದೇಬಿಹಾಳ:
ರಾಜ್ಯದಲ್ಲಿ ಕರಾಟೆ ಮತ್ತು ಯೋಗ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಸಮಾನ ನ್ಯಾಯ ಒದಗಿಸುವುದರ ಜೊತೆಗೆ, ಎರಡೂ ವಿಭಾಗಗಳ ಸ್ವರೂಪ ಹಾಗೂ ಅರ್ಹತೆಗಳನ್ನು ಆಧರಿಸಿ ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ರಾಜ್ಯ ಕರಾಟೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ಸಲ್ಲಿಸಿದರು.
ಬಳ್ಳಾರಿಯಲ್ಲಿ ನಡೆಯಲಿರುವ ‘ನಾರಿ ಶಕ್ತಿ’ ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಆಹ್ವಾನಿಸುವ ಉದ್ದೇಶದಿಂದ ಶುಕ್ರವಾರ ಮುದ್ದೇಬಿಹಾಳದಿಂದ ತೆರಳಿದ್ದ ರಾಜ್ಯ ಕರಾಟೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕಟ್ಟಿ ಸ್ವಾಮಿ ಹಾಗೂ ರಾಜ್ಯ ವಕ್ತಾರ ಶಿವಕುಮಾರ್ ಶಾರದಳ್ಳಿ ಅವರ ನೇತೃತ್ವದ ನಿಯೋಗವು ಮಹಿಳಾ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿತು.
ಈ ಸಂದರ್ಭದಲ್ಲಿ ರಾಜ್ಯದಲ್ಲಿ ಸರ್ಕಾರದ ವತಿಯಿಂದ ನಡೆಯುತ್ತಿರುವ ಕರಾಟೆ ಮತ್ತು ಯೋಗ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕರಾಟೆ ಶಿಕ್ಷಕರಿಗೆ ಆಗುತ್ತಿರುವ ತಾರತಮ್ಯದ ಕುರಿತು ಪದಾಧಿಕಾರಿಗಳು ಗಮನ ಸೆಳೆದರು.
ಯೋಗ ಮತ್ತು ಕರಾಟೆ ಎರಡೂ ವಿಭಿನ್ನ ಸ್ವರೂಪದ ತರಬೇತಿ ಕ್ಷೇತ್ರಗಳಾಗಿದ್ದು, ಅವುಗಳ ತರಬೇತಿ ವಿಧಾನ, ಶೈಕ್ಷಣಿಕ ಅರ್ಹತೆ, ಕೌಶಲ್ಯ ಹಾಗೂ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿಯಲ್ಲಿ ಪ್ರತ್ಯೇಕ ಮಾನದಂಡ ರೂಪಿಸಬೇಕು. ಕರಾಟೆ ಶಿಕ್ಷಕರಿಗೆ ಅವರ ಕ್ಷೇತ್ರಕ್ಕೆ ಅನುಗುಣವಾಗಿ ಅರ್ಹತೆ ಮತ್ತು ನ್ಯಾಯಯುತ ಅವಕಾಶ ಕಲ್ಪಿಸಬೇಕು. ಈ ಕುರಿತು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ನಿಯೋಗವು ಮೌಖಿಕವಾಗಿ ಮನವಿ ಮಾಡಿತು.
ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಡಾ. ನಾಗಲಕ್ಷ್ಮಿ ಚೌಧರಿ ಅವರು, ಈ ವಿಚಾರದ ಕುರಿತು ನಾನು ತಕ್ಷಣವೇ ಸಂಬಂಧಪಟ್ಟವರಿಗೆ ಪತ್ರ ಬರೆಯುತ್ತೇನೆ. ನೀವು ಕೂಡ ಸಮಸ್ಯೆಯನ್ನು ವಿವರವಾಗಿ ಉಲ್ಲೇಖಿಸಿ ನನಗೆ ಲಿಖಿತ ಮನವಿ ಸಲ್ಲಿಸಿ ಎಂದು ಭರವಸೆ ನೀಡಿದರು.
ಮಹಿಳೆಯರ ಆತ್ಮರಕ್ಷಣೆ, ಸ್ವಾವಲಂಬನೆ ಮತ್ತು ಆತ್ಮವಿಶ್ವಾಸ ವೃದ್ಧಿಸುವಲ್ಲಿ ಕರಾಟೆ ತರಬೇತಿ ಮಹತ್ವದ ಪಾತ್ರ ವಹಿಸುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಕರಾಟೆ ಕಲಿಸುವುದು ಇಂದಿನ ಸಂದರ್ಭದಲ್ಲಿ ಅತ್ಯಂತ ಅಗತ್ಯವಾಗಿದೆ. ಇಂತಹ ಮಹತ್ವದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕರಾಟೆ ಶಿಕ್ಷಕರಿಗೆ ಸೂಕ್ತ ಮಾನ್ಯತೆ ಹಾಗೂ ನ್ಯಾಯಯುತ ಅವಕಾಶ ದೊರೆಯಬೇಕು ಎಂಬುದು ಸಂಘದ ಪ್ರಮುಖ ಆಶಯವಾಗಿದೆ.
ಕರಾಟೆ ಶಿಕ್ಷಕರ ಹಕ್ಕು, ಗೌರವ ಮತ್ತು ವೃತ್ತಿಪರ ಮಾನ್ಯತೆಗಾಗಿ ಸಂಘದ ಹೋರಾಟ ಮುಂದುವರಿಯಲಿದೆ. ಸರ್ಕಾರವು ಕರಾಟೆ ಶಿಕ್ಷಣದ ಮಹತ್ವವನ್ನು ಗುರುತಿಸಿ, ನೇಮಕಾತಿ ಪ್ರಕ್ರಿಯೆಯಲ್ಲಿ ಕರಾಟೆ ಶಿಕ್ಷಕರಿಗೆ ಪ್ರತ್ಯೇಕ ಗುರುತಿನೊಂದಿಗೆ ನ್ಯಾಯ ಒದಗಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಮಹಿಳಾ ಆಯೋಗದ ಅಧ್ಯಕ್ಷರು ಸಮಸ್ಯೆಗೆ ಸ್ಪಂದಿಸಿ ಸಂಬಂಧಪಟ್ಟವರಿಗೆ ಪತ್ರ ಬರೆಯುವ ಭರವಸೆ ನೀಡಿರುವುದು ರಾಜ್ಯದ ಕರಾಟೆ ಶಿಕ್ಷಕರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

