KRGRV
Wednesday, September 23, 2026
Homeಬೆಂಗಳೂರುಕರ್ನಾಟಕ ಪರ್ವ–2026: ಅಲ್ಪಸಂಖ್ಯಾತ ಕುಶಲಕರ್ಮಿಗಳ ಪ್ರತಿಭೆಗೆ ರಾಜ್ಯಮಟ್ಟದ ವೇದಿಕೆ

ಕರ್ನಾಟಕ ಪರ್ವ–2026: ಅಲ್ಪಸಂಖ್ಯಾತ ಕುಶಲಕರ್ಮಿಗಳ ಪ್ರತಿಭೆಗೆ ರಾಜ್ಯಮಟ್ಟದ ವೇದಿಕೆ

ಸೆ.26ರಿಂದ 30ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಐದು ದಿನಗಳ ವೈಭವದ ಉತ್ಸವ

ಬೆಂಗಳೂರು, ಸೆ. 21:ಅಲ್ಪಸಂಖ್ಯಾತ ಸಮುದಾಯದ ಕುಶಲಕರ್ಮಿಗಳ ಕಲೆ, ಕರಕುಶಲ ಉತ್ಪನ್ನಗಳು, ಸಾಂಪ್ರದಾಯಿಕ ವೃತ್ತಿಗಳು ಹಾಗೂ ಉದ್ಯಮಶೀಲತೆಗೆ ಹೊಸ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಕರ್ನಾಟಕ ಪರ್ವ–2026’ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 26ರಿಂದ 30ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಹಿನಿ ಆವರಣದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಅಲ್ಪಸಂಖ್ಯಾತ ಸಮುದಾಯದ ಕುಶಲಕರ್ಮಿಗಳು ತಯಾರಿಸಿರುವ ವಿಶಿಷ್ಟ ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಉತ್ಪನ್ನಗಳು ಹಾಗೂ ಕೈಗಾರಿಕಾ ಕೌಶಲ್ಯಗಳು ಒಂದೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.

ರಾಜ್ಯದ ಕುಶಲಕರ್ಮಿಗಳಿಗೆ ಮಾರುಕಟ್ಟೆ ವಿಸ್ತರಣೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹಾಗೂ ವ್ಯಾಪಾರಾಭಿವೃದ್ಧಿಗೆ ಅನುಕೂಲವಾಗುವಂತೆ 180 ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಕರಕುಶಲ ಉತ್ಪನ್ನಗಳ ಮಾರಾಟದ ಜೊತೆಗೆ ಇ-ಕಾಮರ್ಸ್, ಡಿಜಿಟಲ್ ಮಾರ್ಕೆಟಿಂಗ್, ಆಧುನಿಕ ವ್ಯಾಪಾರ ನಿರ್ವಹಣೆ, ಉದ್ಯಮ ಸಂಪರ್ಕ ಹಾಗೂ ಮಾರುಕಟ್ಟೆ ವಿಸ್ತರಣೆ ಕುರಿತ ತರಬೇತಿ ಮತ್ತು ಸಂವಾದ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಉತ್ಸವದ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡುವಂತೆ ಸಚಿವರು ಮನವಿ ಮಾಡಿದರು.

ಸೆಪ್ಟೆಂಬರ್ 26ರಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಚಿವರಾದ ರಿಜ್ವಾನ್ ಅರ್ಷದ್, ಜಮೀರ್ ಅಹಮದ್ ಖಾನ್, ಕೆ.ಜೆ. ಜಾರ್ಜ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ನಕಲಿ ಔಷಧ ಜಾಲದ ವಿರುದ್ಧ ಕಠಿಣ ಕ್ರಮ

ಸುದ್ದಿಗೋಷ್ಠಿಯಲ್ಲಿ ನಕಲಿ ಔಷಧ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಯು.ಟಿ. ಖಾದರ್, ರಾಜ್ಯದಲ್ಲಿ ಎಸ್‌ಐಟಿ ತನಿಖೆ ಮಹತ್ವದ ಹಂತ ತಲುಪಿದ್ದು, ವರದಿ ಸಲ್ಲಿಕೆಯಾದ ಬಳಿಕ ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಈಗಾಗಲೇ 12 ಸಂಶಯಾಸ್ಪದ ಔಷಧ ಮಳಿಗೆಗಳನ್ನು ಮುಚ್ಚಲಾಗಿದ್ದು, ಅವುಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ. ತನಿಖೆಗೆ ಅಗತ್ಯ ಸಹಕಾರ ನೀಡದ ಹಿನ್ನೆಲೆಯಲ್ಲಿ ಬಹುರಾಷ್ಟ್ರೀಯ ಔಷಧ ಸಂಸ್ಥೆ ಫೈಜರ್ ಕಂಪನಿಯ ಕೆಲವು ಉತ್ಪನ್ನಗಳ ಮಾರಾಟ ಮತ್ತು ಸರಬರಾಜಿನ ಮೇಲೂ ರಾಜ್ಯದಲ್ಲಿ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕಿ ಯಾಸ್ಮಿನ್ ವಾಲಿಕಾರ್, ಜಂಟಿ ನಿರ್ದೇಶಕ ಪುಂಡಲೀಕ ಅನವಾಲ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶೇಖ್ ಲತೀಫ್ ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ