KRGRV
Tuesday, September 29, 2026
Homeಜಿಲ್ಲಾ ಸುದ್ದಿಗಳುಕಾಮನಕೇರಿಯಲ್ಲಿ ವಿಬಿ ರಾಮ್ ಜಿ ಕೂಲಿ ಕಾರ್ಮಿಕರಿಗೆ ಅನ್ಯಾಯ ಆರೋಪ: ಅನಧಿಕೃತ ರಜೆ ಹಾಗೂ ಕೂಲಿ...

ಕಾಮನಕೇರಿಯಲ್ಲಿ ವಿಬಿ ರಾಮ್ ಜಿ ಕೂಲಿ ಕಾರ್ಮಿಕರಿಗೆ ಅನ್ಯಾಯ ಆರೋಪ: ಅನಧಿಕೃತ ರಜೆ ಹಾಗೂ ಕೂಲಿ ವಿಳಂಬದ ವಿರುದ್ಧ ಆಕ್ರೋಶ

ಬಸವನ ಬಾಗೇವಾಡಿ : ಬರಗಾಲದ ಹಿನ್ನೆಲೆಯಲ್ಲಿ ಕಾಮನಕೇರಿ ಗ್ರಾಮದ ಕೆರೆಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಆಗ್ರಹಿಸಿ ತಾಲ್ಲೂಕು ಪಂಚಾಯಿತಿ ಇಒ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ನೀಡಿದ ಬಳಿಕ ಆರಂಭವಾಗಿದ್ದ ವಿಬಿ ರಾಮ್ ಜಿ ಯೋಜನೆಯ ಕಾಮಗಾರಿಗೆ, ಇದೀಗ ಗ್ರಾಮ ಪಂಚಾಯಿತಿ ಸಿಬ್ಬಂದಿಯಿಂದಲೇ ಅಡ್ಡಿಪಡಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮಳೆಯಿಲ್ಲದೆ ಕೆಲಸ ಮಾಡಲು ಸಂಪೂರ್ಣ ಅವಕಾಶವಿದ್ದರೂ, ಗ್ರಾಮ ಪಂಚಾಯಿತಿಯಿಂದ ಶುಕ್ರವಾರ, ಶನಿವಾರ ಹಾಗೂ ರವಿವಾರ ಮೂರು ದಿನಗಳ ಕಾಲ ವಿಬಿ ರಾಮ್ ಜಿ ಕಾಮಗಾರಿಗೆ ಅನಧಿಕೃತವಾಗಿ ರಜೆ ಘೋಷಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದರಿಂದ ಕೂಲಿ ಕಾರ್ಮಿಕರು ಉದ್ಯೋಗ ಮತ್ತು ಆದಾಯದಿಂದ ವಂಚಿತರಾಗುವಂತಾಗಿದೆ.

ತಮ್ಮ ಮನಸ್ಸಿಗೆ ಬಂದಂತೆ ರಜೆ ಘೋಷಿಸಿ ಬಡ ಕೂಲಿ ಕಾರ್ಮಿಕರಿಗೆ ತೊಂದರೆ ನೀಡುತ್ತಿರುವ ಸಂಬಂಧಿಸಿದ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಅಮರೇಶಣ್ಣ ಕಾಮನಕೇರಿ ಆಗ್ರಹಿಸಿದ್ದಾರೆ.

ವಾರದೊಳಗೆ ಬರಬೇಕಾದ ಕೂಲಿ ಹಣ 30 ದಿನಗಳಾದರೂ ಬಾಕಿ ಉಳಿಸಿ ನಂತರ ಕೋಡುತ್ತಿದ್ದಾರೆ

ವಿಬಿ ರಾಮ್ ಜಿ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ನಿಯಮಾನುಸಾರ ವಾರಕ್ಕೆ ಸರಿಯಾಗಿ ಪಾವತಿಯಾಗಬೇಕಾದ ಕೂಲಿ ಹಣವನ್ನು ವಿಳಂಬ ಮಾಡಲಾಗುತ್ತಿದೆ ಬೂದಿಹಾಳ ಗ್ರಾಮದ ಜನರಿಗೆ 30 ದಿನಗಳಾದರು ಕೂಲಿ ಹಣ ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ವಿಜಯಪುರ ಸಿಇಒ ರವರಿಗೆ ದೂರವಾಣಿ ಮೂಲಕ ಹಾಗೂ ವಾಟ್ಸಪ್ ಮೂಲಕ ದೂರು ಸಲ್ಲಿಸದ ಮೇಲೆ ಬೂದಿಹಾಳ ಗ್ರಾಮದ ಜನರಿಗೆ ವಿಬಿ ರಾಮ್ ಜಿ ಕೆರೆ ಕಾಮಗಾರಿ ಕೂಲಿ ನೀಡಿದ್ದಾರೆ.

ಕೆಲಸ ಮಾಡಿದ ನಂತರ ವಾರದೊಳಗೆ ದೊರೆಯಬೇಕಾದ ಕೂಲಿ ಹಣವನ್ನು ಸುಮಾರು 30 ದಿನಗಳವರೆಗೆ ನೀಡದೆ, ಗ್ರಾಮ ಪಂಚಾಯಿತಿ ಸಿಬ್ಬಂದಿ ಕಾರ್ಮಿಕರಿಗೆ ಆರ್ಥಿಕ ತೊಂದರೆ ಉಂಟುಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ದಿನಗೂಲಿ ಆಧಾರದಲ್ಲಿ ಜೀವನ ಸಾಗಿಸುವ ಬಡ ಕಾರ್ಮಿಕರು ಸಮಯಕ್ಕೆ ಹಣ ಸಿಗದೆ ಕುಟುಂಬದ ಖರ್ಚು, ಮಕ್ಕಳ ಶಿಕ್ಷಣ ಹಾಗೂ ದೈನಂದಿನ ಅಗತ್ಯಗಳನ್ನು ಪೂರೈಸಲು ಸಂಕಷ್ಟ ಎದುರಿಸುವಂತಾಗಿದೆ. “ಕೂಲಿ ಮಾಡಿದ ಕಾರ್ಮಿಕರಿಗೆ ಹಬ್ಬಕ್ಕೂ ಹಣವಿಲ್ಲ” ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾದ ನಂತರವೇ ಹಣ ಬಿಡುಗಡೆ ಮಾಡಿರುವುದು ಪಂಚಾಯಿತಿ ಆಡಳಿತದ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಾಮನಕೇರಿ ಗ್ರಾಮದಲ್ಲಿ ಎರಡು ವರ್ಷಗಳಿಂದ ನಡೆಯದ ಗ್ರಾಮ ಸಭೆ ಆರೋಪ

ದಿಂಡವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಯಮಾನುಸಾರ ಗ್ರಾಮ ಸಭೆಗಳು ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಕಾಮನಕೇರಿ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ಗ್ರಾಮ ಸಭೆ ನಡೆದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಮ ಸಭೆಯ ಮಾಹಿತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ನೋಟಿಸ್ ಮೂಲಕ ಪ್ರಕಟಿಸಿಲ್ಲ ಹಾಗೂ ಸ್ಥಳೀಯ ಯುವಕ ಸಂಘಗಳು, ಸಾಮಾಜಿಕ ಸಂಘಟನೆಗಳು ಮತ್ತು ಮಹಿಳಾ ಸಂಘಗಳಿಗೆ ಯಾವುದೇ ಮುನ್ಸೂಚನೆ ನೀಡುತ್ತಿಲ್ಲ ಎಂಬ ಆರೋಪಗಳಿವೆ.

ದಿಂಡವಾರ ಗ್ರಾಮ ಪಂಚಾಯಿತಿಯು ಕೆಲವೇ ಕೆಲವು ಜನರ ಹಿತಾಸಕ್ತಿಗೆ ಮಾತ್ರ ಸೀಮಿತವಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿವೆ.

ಹೋರಾಟಗಾರರ ಪ್ರಮುಖ ಬೇಡಿಕೆಗಳು

  • ವಿಬಿ ರಾಮ್ ಜಿ ಕಾಮಗಾರಿಗೆ ಅನಧಿಕೃತವಾಗಿ ರಜೆ ಘೋಷಿಸಿದವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.
  • ಕೂಲಿ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಕೂಲಿ ಹಣ ಪಾವತಿಯಾಗುವಂತೆ ಕ್ರಮ ಜರುಗಿಸಬೇಕು.
  • 30 ದಿನಗಳವರೆಗೆ ಕೂಲಿ ಹಣ ವಿಳಂಬ ಮಾಡಿದ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
  • ವಿಬಿ ರಾಮ್ ಜಿ ಯೋಜನೆಯಡಿ ನಿರಂತರ ಉದ್ಯೋಗ ಒದಗಿಸಿ ಬಡ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು.

.ಕಳೆದ ಎರಡು ವರ್ಷಗಳಿಂದ ಗ್ರಾಮ ಸಭೆ ನಡೆಸದಿರುವ ಕುರಿತು ತನಿಖೆ ನಡೆಸಬೇಕು.

ಕೂಲಿ ಕಾರ್ಮಿಕರ ಹಕ್ಕುಗಳ ಧ್ವನಿಯಾಗಿರುವ ಈ ಸಮಸ್ಯೆಗೆ ಜಿಲ್ಲಾ ಆಡಳಿತ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

ಹೆಚ್ಚಿನ ಸುದ್ದಿ