ಬೆಂಗಳೂರು: ರಾಜ್ಯದಲ್ಲಿ ಕಾಮಗಾರಿಗಳ ಬಿಲ್ ಪಾವತಿಯಾಗದೆ ಕಂಗಾಲಾಗಿರುವ ಗುತ್ತಿಗೆದಾರರಿಗೆ, ಈಗ ಮಧ್ಯವರ್ತಿಗಳ ಕಾಟವೂ ಹೆಚ್ಚಾಗಿದ್ದು, ಇದೀಗ ಕೆಬಿಜೆಎನ್‌ಎಲ್ (KBJNL) ನಿವೃತ್ತ ಅಧಿಕಾರಿಯೊಬ್ಬರ ಪುತ್ರ, ಬಿಲ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಹಣ ಪಡೆದು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ:
ಕೆಬಿಜೆಎನ್‌ಎಲ್‌ನಲ್ಲಿ ಸುಮಾರು 25 ವರ್ಷಗಳ ಕಾಲ ಎಂಡಿಗಳ ಆಪ್ತ ಕಾರ್ಯದರ್ಶಿಯಾಗಿ (PA) ಕಾರ್ಯನಿರ್ವಹಿಸಿದ್ದ ಚಂದ್ರಶೇಖರ ಬೂದಿಹಾಳಮಠ ಅವರ ಪುತ್ರ ಬಸವರಾಜ ಬೂದಿಹಾಳಮಠ, ಗುತ್ತಿಗೆದಾರರನ್ನು ವಂಚಿಸಿರುವ ಆರೋಪ ಹೊತ್ತಿದ್ದಾನೆ. “ನನಗೆ ಎಲ್ಲ ಉನ್ನತ ಅಧಿಕಾರಿಗಳ ಪರಿಚಯವಿದೆ.

ಸರ್ಕಾರದ ಉನ್ನತ ಅಧಿಕಾರಿಗಳ ಮೂಲಕ ನಿಮ್ಮ ಬಾಕಿ ಇರುವ ಬಿಲ್‌ಗಳನ್ನು ಮಂಜೂರು ಮಾಡಿಸಿಕೊಡುತ್ತೇನೆ” ಎಂದು ನಂಬಿಸಿ, ಗುತ್ತಿಗೆದಾರರಿಂದ ದೊಡ್ಡ ಮೊತ್ತದ ಹಣವನ್ನು ವಸೂಲಿ ಮಾಡಿದ್ದಾನೆ. ಹಣ ಪಡೆದ ನಂತರ ಬಸವರಾಜ ಬೂದಿಹಾಳಮಠ ತಲೆಮರೆಸಿಕೊಂಡಿದ್ದು, ನಂಬಿ ಹಣ ನೀಡಿದ ಗುತ್ತಿಗೆದಾರರು ಇದೀಗ ಬೀದಿ ಪಾಲಾಗಿದ್ದಾರೆ.
ಗುತ್ತಿಗೆದಾರರ ಗೋಳು:
ಕಳೆದ ಮೂರು ವರ್ಷಗಳಿಂದ ಬಿಲ್ ಸಿಗದೆ ಸಾಲದ ಸುಳಿಯಲ್ಲಿ ಸಿಲುಕಿರುವ ಗುತ್ತಿಗೆದಾರರ ಸ್ಥಿತಿ ಚಿಂತಾಜನಕವಾಗಿದೆ. ಸಾಲ ಮಾಡಿ, ಮನೆ-ಮಠ ಅಡವಿಟ್ಟು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದರೂ, ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿಲ್ಲ. ಈ ನೋವಿನ ನಡುವೆಯೇ, “ಬಿಲ್ ಮಾಡಿಸಿಕೊಡುತ್ತೇವೆ” ಎಂದು ಬರುವ ಮಧ್ಯವರ್ತಿಗಳ ಮಾತು ನಂಬಿ ಮತ್ತೆ ಮೋಸ ಹೋಗುತ್ತಿರುವುದು ಗುತ್ತಿಗೆದಾರರನ್ನು ಹತಾಶೆಗೆ ತಳ್ಳಿದೆ.

‘ಸಾವು ಒಂದೇ ಗತಿ’: ಗುತ್ತಿಗೆದಾರರ ಅಳಲು
ಹೆಸರು ಹೇಳಲಿಚ್ಛಿಸದ ಗುತ್ತಿಗೆದಾರರೊಬ್ಬರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ: “ಒಂದು ಕಡೆ ಅಧಿಕಾರಿಗಳು, ರಾಜಕೀಯ ನಾಯಕರು ಮತ್ತು ಹಣಕ್ಕಾಗಿ ಪೀಡಿಸುವ ಸಂಘಟನೆಗಳಿಗೆ ಲಂಚ ನೀಡಿ ಕಾಮಗಾರಿ ಮಾಡಿದ್ದೇವೆ. ಈಗ ಬಿಲ್ ಬಾರದೆ ಬಡ್ಡಿ ಕಟ್ಟಲಾಗದೆ ನಲುಗಿದ್ದೇವೆ. ಇಂತಹ ಮಧ್ಯವರ್ತಿಗಳ ಮೋಸದಿಂದಾಗಿ ಬದುಕು ದುಸ್ತರವಾಗಿದೆ. ನಡೆದ ಅನ್ಯಾಯವನ್ನು ಬಹಿರಂಗಪಡಿಸಿದರೆ, ಮುಂದೆ ಬರಬೇಕಾದ ಬಿಲ್ ಕೂಡ ಸಿಗುವುದಿಲ್ಲ ಎಂಬ ಭಯದಲ್ಲಿ ಬದುಕುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಸಾವು ಒಂದೇ ಗತಿಯಾಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.

ಸರ್ಕಾರಕ್ಕೆ ಮನವಿ:
ರಾಜ್ಯದಲ್ಲಿನ ಗುತ್ತಿಗೆದಾರರು ಎದುರಿಸುತ್ತಿರುವ ಈ ದೌರ್ಜನ್ಯ ಮತ್ತು ವಂಚನೆಗಳ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ ಡಾ,ಜಿ ಪರಮೇಶ್ವರ ಹಾಗೂ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ತಕ್ಷಣ ಮಧ್ಯಪ್ರವೇಶಿಸಬೇಕೆಂದು ಸಂತ್ರಸ್ತ ಗುತ್ತಿಗೆದಾರರು ಮನವಿ ಮಾಡಿದ್ದಾರೆ.
ಇಂತಹ ಮಧ್ಯವರ್ತಿಗಳ ಜಾಲವನ್ನು ಭೇದಿಸಿ, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಅರ್ಹ ಗುತ್ತಿಗೆದಾರರಿಗೆ ಬಾಕಿ ಇರುವ ಬಿಲ್ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.


