‘ಪಂಪ: ಟೆಕ್ಸ್ಟೈಲ್ಸ್ ಆಫ್ ಕರ್ನಾಟಕ’ ಪ್ರದರ್ಶನ ಉದ್ಘಾಟನೆ; ಇಳಕಲ್ನಿಂದ ಮೈಸೂರು ಸಿಲ್ಕ್ವರೆಗೆ ಕರ್ನಾಟಕದ ನೇಕಾರಿಕೆ ವೈಭವಕ್ಕೆ ಶ್ಲಾಘನೆ
ಬೆಂಗಳೂರು: ಕರ್ನಾಟಕದ ಜವಳಿ ಪರಂಪರೆ ಶತಮಾನಗಳ ಇತಿಹಾಸ ಹೊಂದಿದ್ದು, ನೇಕಾರರ ಕೌಶಲ್ಯ, ಸಂಸ್ಕೃತಿ ಮತ್ತು ಸೃಜನಶೀಲತೆಯ ಪ್ರತಿಬಿಂಬವಾಗಿದೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯಲ್ಲಿ (NGMA) ಆಯೋಜಿಸಲಾಗಿದ್ದ ‘ಪಂಪ: ಟೆಕ್ಸ್ಟೈಲ್ಸ್ ಆಫ್ ಕರ್ನಾಟಕ’ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಪಾರಂಪರಿಕ ಜವಳಿ ಕಲೆಗಳನ್ನು ಸಂರಕ್ಷಿಸುವುದರ ಜೊತೆಗೆ ಅವುಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.
ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಜವಳಿ ಕ್ಷೇತ್ರಕ್ಕೆ ವಿಶಿಷ್ಟ ಸ್ಥಾನವಿದೆ. ಕರ್ನಾಟಕವು ಶತಮಾನಗಳಿಂದಲೂ ತನ್ನ ವೈವಿಧ್ಯಮಯ ನೇಕಾರಿಕೆ ಪರಂಪರೆಯಿಂದ ಗುರುತಿಸಿಕೊಂಡಿದೆ. ಯುರೋಪ್ ಮತ್ತು ಅರಬ್ ರಾಷ್ಟ್ರಗಳೊಂದಿಗೆ ನಡೆದ ವ್ಯಾಪಾರದಲ್ಲಿಯೂ ಕರ್ನಾಟಕದ ಜವಳಿ ಉತ್ಪನ್ನಗಳು ಪ್ರಮುಖ ಪಾತ್ರ ವಹಿಸಿದ್ದವು ಎಂದು ಅವರು ವಿವರಿಸಿದರು.
ಕದಂಬರು, ರಾಷ್ಟ್ರಕೂಟರು ಮತ್ತು ಚಾಲುಕ್ಯರ ಕಾಲದಿಂದಲೂ ಕರ್ನಾಟಕದ ಜವಳಿ ಪರಂಪರೆ ಬೆಳವಣಿಗೆ ಕಂಡಿದೆ. ಉತ್ತರ ಕರ್ನಾಟಕದ ಇಳಕಲ್ ಸೀರೆಗಳು ಪ್ರಾರಂಭಿಕ ಚಾಲುಕ್ಯರ ಕಾಲದ ಪರಂಪರೆಯನ್ನು ಹೊಂದಿದ್ದು, ಇಂದಿಗೂ ದಕ್ಷಿಣ ಭಾರತದ ಪ್ರಮುಖ ಸೀರೆಗಳಲ್ಲೊಂದಾಗಿದೆ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಳಕಲ್ ಸೀರೆಗಳಿಗೆ ಬೇಡಿಕೆ ಇದೆ ಎಂದರು.
ಕರ್ನಾಟಕದ ಮೈಸೂರು ರೇಷ್ಮೆ ಸೀರೆಗಳು ದೇಶದ ಕೋಟ್ಯಂತರ ಮಹಿಳೆಯರ ಮೆಚ್ಚಿನ ಹಾಗೂ ಪ್ರತಿಷ್ಠಿತ ವಸ್ತ್ರವಾಗಿವೆ. ಇದರ ಜೊತೆಗೆ ಮೊಳಕಾಲ್ಮೂರು ರೇಷ್ಮೆ ಸೀರೆಗಳು, ಉಡುಪಿ ಸೀರೆಗಳು, ಚರಕ ಸೀರೆಗಳು, ಬೆಂಗಳೂರು ಸಿಲ್ಕ್, ಯಾದಗಿರಿಯ ಜವಳಿ ಉತ್ಪನ್ನಗಳು, ಸಂಡೂರಿನ ಲಂಬಾಣಿ ಜವಳಿ ಕಲೆ ಹಾಗೂ ಧಾರವಾಡದ ಕಸೂತಿ ಕಲೆಗಳು ರಾಜ್ಯದ ಶ್ರೀಮಂತ ಜವಳಿ ವೈವಿಧ್ಯತೆಯನ್ನು ಸಾರುತ್ತಿವೆ ಎಂದು ಹೇಳಿದರು.
ಇತ್ತೀಚೆಗೆ ಪುನರುಜ್ಜೀವನಗೊಂಡಿರುವ ಆನೇಕಲ್ ಸೀರೆ ಕೂಡ ಕರ್ನಾಟಕದ ಪಾರಂಪರಿಕ ನೇಕಾರಿಕೆಯ ಹೊಸ ಅಧ್ಯಾಯವಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕದ ಸೀರೆಗಳನ್ನು ಉತ್ತೇಜಿಸಲು ಕರೆ
ಕರ್ನಾಟಕದ ಜವಳಿ ಪರಂಪರೆಯನ್ನು ಉಳಿಸುವಲ್ಲಿ ಜನರ ಪಾತ್ರವೂ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ಹೆಚ್ಚು ಹೆಚ್ಚು ಕರ್ನಾಟಕದ ಸೀರೆಗಳನ್ನು ಧರಿಸುವ ಮೂಲಕ ನೇಕಾರ ಸಮುದಾಯಕ್ಕೆ ಬೆಂಬಲ ನೀಡಬೇಕು. ಗ್ರಾಹಕರ ಪ್ರೋತ್ಸಾಹದಿಂದ ಮಾತ್ರ ನೇಕಾರಿಕೆ ಕ್ಷೇತ್ರ ಸುಸ್ಥಿರವಾಗಿ ಬೆಳೆಯಲು ಸಾಧ್ಯ ಎಂದು ಕೇಂದ್ರ ಸಚಿವರು ಕರೆ ನೀಡಿದರು.
ಹೊಸ ಜವಳಿ ನೀತಿಗೆ ಮೆಚ್ಚುಗೆ
ಕರ್ನಾಟಕದ ಹೊಸ ಜವಳಿ ನೀತಿಯು ಕೈಮಗ್ಗ ಕ್ಷೇತ್ರವನ್ನು ಕೇವಲ ಕಲ್ಯಾಣ ಯೋಜನೆಗಳ ವ್ಯಾಪ್ತಿಯಲ್ಲಿ ನೋಡುವ ಬದಲು, ನೇಕಾರ ಕೇಂದ್ರಿತ ಮತ್ತು ಆರ್ಥಿಕವಾಗಿ ಸದೃಢವಾದ ಮಾದರಿಯತ್ತ ಕೊಂಡೊಯ್ಯುವ ಪ್ರಯತ್ನವಾಗಿದೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಕೈಮಗ್ಗ ಕ್ಷೇತ್ರದ ಪುನರುಜ್ಜೀವನಕ್ಕೆ ವಿಶೇಷ ಯೋಜನೆಗಳು ಅಗತ್ಯವಿವೆ. ಪಾರಂಪರಿಕ ಜವಳಿ ವಿನ್ಯಾಸಗಳ ರಕ್ಷಣೆ, ನವೀನ ವಿನ್ಯಾಸ ಕೇಂದ್ರಗಳ ಸ್ಥಾಪನೆ, ರಾಷ್ಟ್ರೀಯ ಮಾರುಕಟ್ಟೆ ಹಾಗೂ ರಫ್ತು ಅವಕಾಶಗಳ ವಿಸ್ತರಣೆ ಮೂಲಕ ನೇಕಾರರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದರು.
ನೇಕಾರರ ಅಭಿವೃದ್ಧಿಗೆ ಸಹಭಾಗಿತ್ವ ಅಗತ್ಯ
ಸರ್ಕಾರ, ಖಾಸಗಿ ವಲಯ, ಸಾಮಾಜಿಕ ಸಂಸ್ಥೆಗಳು ಮತ್ತು ನೇಕಾರ ಸಮುದಾಯಗಳು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಕರ್ನಾಟಕದ ಜವಳಿ ಪರಂಪರೆಗೆ ಹೊಸ ಶಕ್ತಿ ದೊರೆಯಲಿದೆ ಎಂದು ಹೇಳಿದರು.
ಅಭೇರಾಜ್ ಬಾಲ್ಡೋಟಾ ಫೌಂಡೇಷನ್ ಕರ್ನಾಟಕದ ನೇಕಾರರು ಹಾಗೂ ಪಾರಂಪರಿಕ ಜವಳಿ ಪರಂಪರೆಯ ಸಂರಕ್ಷಣೆ ಮತ್ತು ಪ್ರಚಾರಕ್ಕೆ ನೀಡುತ್ತಿರುವ ಕೊಡುಗೆಯನ್ನು ಕೇಂದ್ರ ಸಚಿವರು ಶ್ಲಾಘಿಸಿದರು.
ಕರ್ನಾಟಕದ ಪ್ರತಿಯೊಂದು ಜವಳಿ ವಿನ್ಯಾಸದ ಹಿಂದೆ ಇತಿಹಾಸ, ಸಂಸ್ಕೃತಿ, ಸಮುದಾಯಗಳ ಬದುಕು ಮತ್ತು ಹಲವು ತಲೆಮಾರುಗಳ ನೇಕಾರರ ಪರಿಶ್ರಮದ ಕಥೆ ಅಡಗಿದೆ. ಈ ಪರಂಪರೆಯನ್ನು ಉಳಿಸಿಕೊಂಡು ಹೊಸ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
2018ರ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ಸುಮಾರು 55 ಸಾವಿರ ಕೈಮಗ್ಗ ನೇಕಾರರು ಹಾಗೂ 1.25 ಲಕ್ಷ ಪವರ್ಲೂಮ್ ನೇಕಾರರು ಇದ್ದು, ಅವರ ಜೀವನೋಪಾಯ ಬಲಪಡಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
“ವಿಕಾಸ್ ಭೀ, ವಿರಾಸತ್ ಭೀ” ಎಂಬ ಆಶಯದಂತೆ ಅಭಿವೃದ್ಧಿಯ ಜೊತೆಗೆ ಭಾರತದ ಸಾಂಸ್ಕೃತಿಕ ಪರಂಪರೆಯ ರಕ್ಷಣೆಯೂ ನಡೆಯಬೇಕು ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅಭಿಪ್ರಾಯಪಟ್ಟರು.

