ರಾಯಚೂರು: ಕೇವಲ 10 ರೂಪಾಯಿ ಪೆಟ್ರೋಲ್ ಹಣದ ಬಾಕಿ ವಿಚಾರವಾಗಿ ಆರಂಭವಾದ ಸಣ್ಣ ವಾಗ್ವಾದವೊಂದು ವಿಕೋಪಕ್ಕೆ ತಿರುಗಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ರಾಯಚೂರು ತಾಲೂಕಿನ ಹಂಚಿನಾಳ ಕ್ಯಾಂಪ್ ಸಮೀಪದ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ.
ಹಂಚಿನಾಳ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಮೇಘನಾಥ್ (42) ಕೊಲೆಯಾದ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಇಡಪನೂರು ಪೊಲೀಸ್ ಠಾಣೆಯಲ್ಲಿ ಬಂಕ್ ಸಿಬ್ಬಂದಿ ಸೇರಿದಂತೆ ಒಟ್ಟು 13 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಘಟನೆಯ ಹಿನ್ನೆಲೆ:
ಮಾಹಿತಿಯ ಪ್ರಕಾರ, ಮಹೇಶ್ ಮತ್ತು ನಾಗರಾಜ್ ಎಂಬುವರು ಬಾಟಲಿಯಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಹಂಚಿನಾಳ ಕ್ಯಾಂಪ್ ಬಳಿಯ ಪೆಟ್ರೋಲ್ ಬಂಕ್ಗೆ ತೆರಳಿದ್ದರು. ಈ ವೇಳೆ ಅವರು 110 ರೂಪಾಯಿ ಮೌಲ್ಯದ ಪೆಟ್ರೋಲ್ ಹಾಕಿಸಿಕೊಂಡು, ಕೇವಲ 100 ರೂಪಾಯಿ ಮಾತ್ರ ನೀಡಿದ್ದಾರೆನ್ನಲಾಗಿದೆ. ಬಾಕಿ ಉಳಿದ 10 ರೂಪಾಯಿ ಹಣದ ವಿಚಾರವಾಗಿ ಇವರಿಬ್ಬರಿಗೂ ಹಾಗೂ ಪೆಟ್ರೋಲ್ ಬಂಕ್ ಸಿಬ್ಬಂದಿಗೂ ನಡುವೆ ತೀವ್ರ ಮಾತಿನ ಚಕಮಕಿ ಆರಂಭವಾಗಿದೆ.
ಸ್ನೇಹಿತನ ಸಹಾಯಕ್ಕೆ ಬಂದು ಪ್ರಾಣ ಕಳೆದುಕೊಂಡ ಮಾಜಿ ಅಧ್ಯಕ್ಷ: ಬಂಕ್ ಸಿಬ್ಬಂದಿ ಮಹೇಶ್ ಮೇಲೆ ಹಲ್ಲೆ ನಡೆಸಲು ಮುಂದಾದಾಗ, ಆಗ ಮಹೇಶ ತಕ್ಷಣವೇ ಸಹಾಯಕ್ಕಾಗಿ ತನ್ನ ಸ್ನೇಹಿತ, ಮಾಜಿ ಗ್ರಾ.ಪಂ. ಅಧ್ಯಕ್ಷ ಮೇಘನಾಥ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಜಗಳ ಬಿಡಿಸಲು ಹಾಗೂ ಬಂಕ್ ಸಿಬ್ಬಂದಿಯನ್ನು ಪ್ರಶ್ನಿಸಲು ಮುಂದಾದ ಮೇಘನಾಥ್ ಮೇಲೆ ಬಂಕ್ ಸಿಬ್ಬಂದಿ ಸೇರಿದಂತೆ ಸುಮಾರು 13 ಜನರ ಗುಂಪು ಏಕಾಏಕಿ ಮುಗಿಬಿದ್ದಿದೆ.
ಪರಸ್ಪರ ಘರ್ಷಣೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ದುಷ್ಕರ್ಮಿಗಳು ಕಟ್ಟಿಗೆಗಳಿಂದ ಮೇಘನಾಥ್ ಅವರ ತಲೆ ಹಾಗೂ ದೇಹದ ಭಾಗಗಳಿಗೆ ಮನಬಂದಂತೆ ಬಲವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೇಘನಾಥ್ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
13 ಜನರ ವಿರುದ್ಧ ಎಫ್ಐಆರ್: ತನಿಖೆ ಚುರುಕು
ಘಟನಾ ಸ್ಥಳಕ್ಕೆ ಇಡಪನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆ ನಡೆಸಿ ಕೊಲೆಗೈದ ಆರೋಪದಡಿ 13 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. ಪೆಟ್ರೋಲ್ ಬಂಕ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

