KRGRV
Monday, December 23, 2024
Homeಜಿಲ್ಲಾ ಸುದ್ದಿಗಳುಗುತ್ತಿಗೆದಾರರ ಬಾಕಿ ಹಣ ಒಂದೆರಡು ವಾರದಲ್ಲಿ ಬಿಡುಗಡೆಗೆ ಕ್ರಮ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಗುತ್ತಿಗೆದಾರರ ಬಾಕಿ ಹಣ ಒಂದೆರಡು ವಾರದಲ್ಲಿ ಬಿಡುಗಡೆಗೆ ಕ್ರಮ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಗುತ್ತಿಗೆದಾರರ ಬಾಕಿ ಹಣವನ್ನು ಗರಿಷ್ಠ ಒಂದು ಅಥವಾ ಎರಡು ವಾರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರವು ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿತು.

ಕರ್ನಾಟಕ ಸರ್ಕಾರವು 2019-20 ರಿಂದ 2022-23ರ ಅವಧಿಯಲ್ಲಿ ಗುತ್ತಿಗೆದಾರರಿಗೆ ನೀಡಿರುವ ಕಾಮಗಾರಿಗಳ ಗುಣಮಟ್ಟ ಮತ್ತಿತರ ಅಂಶಗಳ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರ ಏಕವ್ಯಕ್ತಿ ಆಯೋಗ ರಚಿಸಿ 2023ರ ಆಗಸ್ಟ್‌ 5ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೆರ್ಸಸ್‌ ನಿಕ್ಷೇಪ್‌ ಇನ್ಫ್ರಾ ಪ್ರಾಜೆಕ್ಟ್ಸ್‌ ಸೇರಿದಂತೆ ಹಲವು ಗುತ್ತಿಗೆ ಕಂಪೆನಿಗಳು ಮತ್ತು ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ನ್ಯಾಯಾಲಯದ ಸೂಚನೆಯಂತೆ ಮಧ್ಯಾಹ್ನ ಪೀಠದ ಮುಂದೆ ವಿಚಾರಣೆಗೆ ಹಾಜರಾದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಗರಿಷ್ಠ ಒಂದು ಅಥವಾ ಎರಡು ವಾರದಲ್ಲಿ ಬಾಕಿ ಹಣ ಬಿಡುಗಡೆ ಮಾಡಿಸುತ್ತೇನೆ” ಎಂದು ಪೀಠಕ್ಕೆ ತಿಳಿಸಿದರು.

ಆಗ ಅರ್ಜಿದಾರರ ಪರ ವಕೀಲರು “ಬಿಬಿಎಂಪಿ ಹೊರತುಪಡಿಸಿ ಉಳಿದೆಲ್ಲಾ ಪ್ರಾಧಿಕಾರಗಳು ಶೇ.100ರಷ್ಟು ಹಣ ಬಿಡುಗಡೆ ಮಾಡಿವೆ. ಬಿಬಿಎಂಪಿ ಶೇ. 75ರಷ್ಟು ಹಣ ಬಿಡುಗಡೆ ಮಾಡಿದ್ದು, ಶೇ. 25ರಷ್ಟು ಹಣ ಬಾಕಿ ಉಳಿಸಿಕೊಂಡಿದೆ. ಸರ್ಕಾರದ ಕಾಮಗಾರಿಗಳಿಂದ ದೊರೆಯುವ ಲಾಭ ಶೇ.10ಕ್ಕೂ ಕಡಿಮೆ. ಶೇ. 25ರಷ್ಟು ಹಣ ಉಳಿಸಿಕೊಂಡರೆ ಏನು ಮಾಡುವುದು? ಈ ನಡುವೆ ಜಿಎಸ್‌ಟಿ ನೋಟಿಸ್‌ ಸಹ ಬರುತ್ತಿವೆ” ಎಂದರು.

ಆಗ ಪೀಠವು “ಗುತ್ತಿಗೆದಾರರಿಗೆ ಬಾಕಿ ಹಣ ಬಿಡುಗಡೆ ಮಾಡಲು ಬಿಬಿಎಂಪಿಗೆ ಸಮಸ್ಯೆ ಏನಾದರೂ ಇದೆಯೇ? ನೀರಾವರಿ ನಿಗಮಕ್ಕೆ ಸಂಬಂಧಿಸಿದ ಪ್ರಕರಣದಲ್ಲೂ ಹಣ ಬಿಡುಗಡೆಯಾಗಿಲ್ಲ” ಎಂದಿತು.

ಇದಕ್ಕೆ ಅಡ್ವೊಕೇಟ್‌ ಜನರಲ್‌ ಅವರು “ಎರಡು ವಾರಗಳ ಬಳಿಕ ಹಾಲಿ ಅರ್ಜಿ ಮತ್ತು ನೀರಾವರಿ ನಿಗಮದ ಬಾಕಿ ಹಣಕ್ಕೆ ಸಂಬಂಧಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೆ ಪರಿಗಣಿಸಬಹುದು. ಸರ್ಕಾರದಿಂದ ಸೂಚನೆ ಪಡೆಯಲಾಗುವುದು. ಗುತ್ತಿಗೆದಾರರು ಕೆಲಸ ಮಾಡಿದ್ದಾರೆ. ಅವರ ಸಮಸ್ಯೆ ನಮಗೆ ಅರ್ಥವಾಗುತ್ತದೆ” ಎಂದರು.

ಇದಕ್ಕೆ ಪೀಠವು “ಅದರೊಳಗೆ ನೀವು ಈ ಟೆನ್ಷನ್‌ (ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಅಭಿಯೋಜನಾ ಮಂಜೂರಾತಿ ನೀಡಿರುವುದ) ಎಲ್ಲಾ ಮುಗಿಸಿಕೊಳ್ಳಿ” ಎಂದು ಲಘು ದಾಟಿಯಲ್ಲಿ ಹೇಳಿತು.

ಇನ್ನು ಅರ್ಜಿದಾರರನ್ನು ಕುರಿತು ನಿಮಗೆ ಶೇ.75ರಷ್ಟು ಹಣ ಬಿಡುಗಡೆಯಾಗಿದೆ. ಈಗ ಅಡ್ವೊಕೇಟ್‌ ಜನರಲ್‌ ಭರವಸೆ ನೀಡಿದ್ದಾರೆ ಎಂದಿತು. ಅಂತಿಮವಾಗಿ ವಿಚಾರಣೆಯನ್ನು ಸೆಪ್ಟೆಂಬರ್‌ 24ಕ್ಕೆ ಮುಂದೂಡಲಾಯಿತು.

ಹೆಚ್ಚಿನ ಸುದ್ದಿ