KRGRV
Wednesday, November 19, 2025
Homeಜಿಲ್ಲಾ ಸುದ್ದಿಗಳುಚನ್ನಪಟ್ಟಣ ಬಡವರ ನಿವೇಶನಕ್ಕಾಗಿ 120 ಎಕರೆ ಜಮೀನು ಗುರುತು; ಮೂಲಸೌಕರ್ಯಗಳಿಗೆ ಮುಖ್ಯಮಂತ್ರಿಗಳಿಂದ 100 ಕೋಟಿ ವಿಶೇಷ...

ಚನ್ನಪಟ್ಟಣ ಬಡವರ ನಿವೇಶನಕ್ಕಾಗಿ 120 ಎಕರೆ ಜಮೀನು ಗುರುತು; ಮೂಲಸೌಕರ್ಯಗಳಿಗೆ ಮುಖ್ಯಮಂತ್ರಿಗಳಿಂದ 100 ಕೋಟಿ ವಿಶೇಷ ಅನುದಾನ: ಡಿಸಿಎಂ ಡಿ.ಕೆ.ಶಿವಕುಮಾರ್

ಚನ್ನಪಟ್ಟಣ: ಆ.08:

“ಚನ್ನಪಟ್ಟಣ ಕ್ಷೇತ್ರದ ಬಡವರಿಗೆ ಮನೆ ಹಾಗೂ ನಿವೇಶನ ಹಂಚಿಕೆಗಾಗಿ ಸರ್ಕಾರದಿಂದ 120 ಎಕರೆಯಷ್ಟು ಜಮೀನು ಗುರುತಿಸಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ತಾಲ್ಲೂಕಿನಲ್ಲಿ ನಡೆದಿದ್ದ ʼಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರʼ ಸರಣಿ ಕಾರ್ಯಕ್ರದಲ್ಲಿ ಮನೆ, ನಿವೇಶನ ಹಂಚಿಕೆ ಬಗ್ಗೆ ನಾಗರಿಕರಿಗೆ ಡಿಸಿಎಂ ಶಿವಕುಮಾರ್ ಅವರು ಈ ಹಿಂದೆ ಭರವಸೆ ನೀಡಿದ್ದರು. ಅದರಂತೆ ನಿವೇಶನಗಳಿಗಾಗಿ ಸ್ಥಳ ವೀಕ್ಷಣೆಗೆ ತಾಲ್ಲೂಕಿನ ಹನುಮಂತನಗರ, ಪಟ್ಲು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮದವರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

“ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ವಿವಿಧ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮ ನಡೆಸಲಾಗಿತ್ತು. ಸುಮಾರು 22 ಸಾವಿರ ಜನರು ಅಹವಾಲು ಸಲ್ಲಿಸಿದ್ದರು. ಇದರಲ್ಲಿ ಸುಮಾರು 15 ಸಾವಿರ ಮಂದಿ ನಿವೇಶನ ಹಾಗೂ ಮನೆಗಾಗಿ ಬೇಡಿಕೆ ಇಟ್ಟಿದ್ದರು” ಎಂದು ತಿಳಿಸಿದರು.

“ಜನತೆಗೆ ಆದಷ್ಟು ಬೇಗ ಅನುಕೂಲ ಮಾಡಿಕೊಡುವ ಸಲುವಾಗಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈಗ ಇರುವ ಜಮೀನುಗಳ ಅಕ್ಕಪಕ್ಕ ಖಾಸಗಿಯವರು ಜಮೀನು ನೀಡಿದರೆ ಸರ್ಕಾರಿದಿಂದ ಖರೀದಿಸಲಾಗುವುದು. ಈಗಾಗಲೇ ಚನ್ನಪಟ್ಟಣ ತಾಲ್ಲೂಕು ಸೇರಿದಂತೆ ಒಟ್ಟು ಮೂರು ಕ್ಷೇತ್ರಗಳಿಗೆ ಮುಖ್ಯಮಂತ್ರಿಗಳು ಮೂಲ ಸೌಕರ್ಯ ಅಭಿವೃದ್ದಿಗೆ ತಲಾ 100 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿದ್ದಾರೆ. ಬಡವರಿಗೆ ನಿವೇಶನ, ಮನೆ ಹಂಚಲಾಗುವುದು. ಅರ್ಜಿ ನೀಡಿರುವವರ ಮನೆಗೆ ತೆರಳಿ ಅಧಿಕಾರಿಗಳು ಸತ್ಯಾಸತ್ಯತೇ ಪರಿಶೀಲನೆ ಮಾಡುತ್ತಾರೆ. ಈಗಲೂ ಮನೆಗೆ ಅರ್ಜಿ ನೀಡಬಹುದು” ಎಂದು ತಿಳಿಸಿದರು.

ನಿವೇಶನ ನೀಡುವ ಮಾತನ್ನು ಉಳಿಸಿಕೊಳ್ಳುವಿರಾ ಎಂದು ಕೇಳಿದಾಗ, “ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ಇಲ್ಲದಿದ್ದರೆ ಸ್ಥಳ ವೀಕ್ಷಣೆ ಸೇರಿದಂತೆ ಇಷ್ಟೆಲ್ಲಾ ಕೆಲಸ ಏಕೆ ಮಾಡಬೇಕಿತ್ತು? ಯಾರ ಬಗ್ಗೆಯೂ ದೂಷಣೆ ಮಾಡುವುದಿಲ್ಲ. ಜನರಿಗೆ, ಬಡವರಿಗೆ ಒಳ್ಳೆಯದಾಗಬೇಕು. ನಿವೇಶನ ಮಂಜೂರು ಆದವರ ಪಟ್ಟಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದು. ದೊಡ್ಡ ಮನೆ ಇರುವವರು, ಸ್ಥಿತಿವಂತರಿಗೆ ಈ ಅವಕಾಶವಿಲ್ಲ” ಎಂದರು.

“ಕನಕಪುರದಲ್ಲಿ ನೂರಾರು ಎಕರೆ ಹಂಚಿದ್ದೇನೆ. ನಾನೇ ಖುದ್ದಾಗಿ ವಾರ್ಡ್ ಮಟ್ಟದಲ್ಲಿ ನಿವೇಶನ ಹಂಚಿಕೆ ಮಾಡಿದ್ದೇನೆ. ಇಲ್ಲಿಯೂ ಇದೇ ರೀತಿ ಹಂಚಿಕೆ ಮಾಡಲಾಗುವುದು. ಉತ್ತಮ ದರ್ಜೆಯ ಲೇಔಟ್ ಗಳನ್ನು ನಿರ್ಮಾಣ ಮಾಡಿ, ಒಳಚರಂಡಿ, ಕುಡಿಯುವ ನೀರು, ಶಾಲೆ, ಅಂಗನವಾಡಿ, ದೇವಸ್ಥಾನ, ರಸ್ತೆ ಸೇರಿದಂತೆ ಎಲ್ಲಾ ಸೌಕರ್ಯ ನೀಡಲಾಗುವುದು. ಒಂದಷ್ಟು ಭೂಮಿಗಳು ಚನ್ನಪಟ್ಟಣಕ್ಕೆ ಹತ್ತಿರದಲ್ಲಿವೆ. ಇನ್ನೊಂದಷ್ಟು 5 ಕಿಮೀ ದೂರದಲ್ಲಿವೆ. ಖಾಸಗಿಯವರು ಜಮೀನು ನೀಡಿದರೆ ಮಾರುಕಟ್ಟೆ ದರದಲ್ಲಿಯೇ ಖರೀದಿ ಮಾಡಲಾಗುವುದು” ಎಂದು ಹೇಳಿದರು.

ಉಪಚುನಾವಣೆ ಮುಂಚಿತವಾಗಿಯೇ ಹಂಚಿಕೆ ಮಾಡಲಾಗುವುದೇ ಎಂದಾಗ “ಈಗಾಗಲೇ ಸ್ಕೆಚ್ ಕೂಡ ಮಾಡಲಾಗಿದೆ. ಚನ್ನಪಟ್ಟಣ ನಗರ ಮಾತ್ರವಲ್ಲ, ಆಯಾಯ ಹಳ್ಳಿಗಳಲ್ಲಿ ಅಲ್ಲಲ್ಲಿಯೇ ನಿವೇಶನ ಹಂಚಿಕೆ ಮಾಡಲಾಗುವುದು. ಅವೇರಗಳ್ಳಿ, ಸುಳ್ಳೇರಿ, ಶಿಬನಹಳ್ಳಿ, ವಂದಾರಗುಪ್ಪೆ, ಅಲ್ಲಾಳುಸಂದ್ರ ಸೇರಿದಂತೆ ಬ್ರಹ್ಮಿಣೀಪುರದಲ್ಲಿ 9 ಎಕರೆ, ಪಟ್ಲು ಗ್ರಾಮದಲ್ಲಿ 22ಎಕರೆ ಸೇರಿದಂತೆ ಆಯಾಯ ಗ್ರಾಮಮಟ್ಟದಲ್ಲಿ ಎಷ್ಟು ಭೂಮಿ ಲಭ್ಯತೆ ಇದೆಯೋ ಅವುಗಳನ್ನು ಗುರುತಿಸಲಾಗಿದೆ” ಎಂದರು.

ಕುಮಾರಸ್ವಾಮಿ ಅವರ ಸ್ವಚ್ಚತೆ ಬಗ್ಗೆ ತಿಳಿಸಲಿ

ಜನಾಂದೋಲನ ಸಮಾವೇಶ ಇತಿಹಾಸ ಸೃಷ್ಟಿಸಲಿದೆಯೇ ಎಂದಾಗ “ನಮ್ಮ ಸಮಾವೇಶಕ್ಕೆ ಬಿಜೆಪಿ, ಜೆಡಿಎಸ್ ಉತ್ತರ ನೀಡಲಿ. ನಾವು ಕೇವಲ ಉತ್ತರ ನೀಡಿ ಎಂದಷ್ಟೇ ಕೇಳುತ್ತಿದ್ದೇವೆ. ಮಾಧ್ಯಮವೊಂದರಲ್ಲಿ ಗಣಿ ವಿಚಾರವಾಗಿ ಸುದ್ದಿ ಬಿತ್ತರವಾಗುತ್ತಿತ್ತು. ಮೈನಿಂಗ್ ಮಿನಿಸ್ಟರ್ ಮೈನಿಂಗ್ ಹೇಗೆ ಕೊಟ್ಟರು ಎಂದು ಚರ್ಚೆಯಾಗುತ್ತಿತ್ತು. ಮೈನಿಂಗ್, ಸ್ಟೀಲ್, ಕಬ್ಬಿಣ ಸಚಿವರು ಅನುಮತಿ ಕೊಟ್ಟರು ಎನ್ನುವ ವಿಚಾರವಿದೆ. ಡೀನೋಟಿಫಿಕೇಶನ್ ಸೇರಿದಂತೆ ಇತರೇ ಆರೋಪಗಳಿಗೆ ಉತ್ತರ ನೀಡಲಿ. ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರಲ್ಲವೇ, ಅವರ ಸ್ವಚ್ಚತೆ ಬಗ್ಗೆ ತಿಳಿಸಲಿ” ಎಂದು ಸವಾಲು ಹಾಕಿದರು.

ಮೈಸೂರಿನಲ್ಲಿ ನಡೆಯಲಿರುವ ಜನಾಂದೋಲನ ಸಭೆಯ ಪೋಸ್ಟರ್ ಅಲ್ಲಿ ಕೆಪಿಸಿಸಿ ಅಧ್ಯಕ್ಷರ ಫೋಟೊ ಕಣ್ಮರೆಯಾಗಿರುವ ಬಗ್ಗೆ ಕೇಳಿದಾಗ “ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿ. ಹಿಂದುಳಿದ ವರ್ಗದ ನಾಯಕ ಎಂದು ಗುರಿ ಮಾಡಲಾಗುತ್ತಿದೆ. ಇಲ್ಲಿ ನನ್ನ ಅವಶ್ಯಕತೆ ಏನಿಲ್ಲ. ನಮ್ಮ ಸರ್ಕಾರದ ನಾಯಕರು ಅವರು, ನಾನು ಪಕ್ಷದ ಅಧ್ಯಕ್ಷ ಇದರಲ್ಲಿ ಸಮಸ್ಯೆ ಏನಿದೆ?” ಎಂದು ಮರು ಪ್ರಶ್ನಿಸಿದರು.

ಹೆಚ್ಚಿನ ಸುದ್ದಿ