ಕಲಬುರಗಿ: ದೇವಲಗಾಣಗಾಪೂರ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಮಾನವೀಯ ಕಾಳಜಿಯೊಂದಿಗೆ ಚೌಡಾಪೂರ–ದೇವಲಗಾಣಗಾಪೂರ ರಸ್ತೆ ಮಾರ್ಗದಲ್ಲಿ ಹಾಳಾಗಿದ್ದ ರಸ್ತೆಗುಂಡಿಗಳನ್ನು ಡಾಂಬರೀಕರಣದ ಮೂಲಕ ಮುಚ್ಚಿ, ರಸ್ತೆ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ರಸ್ತೆಯಲ್ಲಿ ಉಂಟಾಗಿದ್ದ ಗುಂಡಿಗಳಿಂದ ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅಪಘಾತದ ಅಪಾಯವೂ ಎದುರಾಗಿತ್ತು. ಇದನ್ನು ಗಮನಿಸಿದ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಸ್ವತಃ ಮುಂದಾಗಿ ರಸ್ತೆಗುಂಡಿಗಳನ್ನು ಮುಚ್ಚುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದಾರೆ.
ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಡ್ಡೂರು ಶ್ರೀನಿವಾಸುಲು, ಐಪಿಎಸ್ ಅವರು ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಪೊಲೀಸರ ಈ ಸೇವಾ ಮನೋಭಾವವು ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದತ್ತ ಪೊಲೀಸ್ ಇಲಾಖೆಯ ಕಾಳಜಿಗೆ ಸಾಕ್ಷಿಯಾಗಿದೆ.

