KRGRV
Monday, December 23, 2024
Homeಜಿಲ್ಲಾ ಸುದ್ದಿಗಳುಟಿ.ನರಸೀಪುರದಲ್ಲಿ 470 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಟಿ.ನರಸೀಪುರದಲ್ಲಿ 470 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ನಾನು ನೆನ್ನೆ ಮೊನ್ನೆ ಮಂತ್ರಿಯಾದವನಲ್ಲ. 40 ವರ್ಷದಿಂದ ಮಂತ್ರಿಯಾಗಿದ್ದೀನಿ: ಸುಳ್ಳು ಕೇಸಲ್ಲಿ ನನ್ನನ್ನು, ನನ್ನ ಧರ್ಮಪತ್ನಿಯನ್ನು ಎಳೀತೀರಾ? ರಾಜ್ಯದ ಜನರೇನು ಮೂರ್ಖರಾ : ಸಿಎಂ ಪ್ರಶ್ನೆ

ED, CBI ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಂಡು ಆಟ ಆಡ್ತೀರಾ: ಸಿಎಂ ಗುಡುಗು

ಅರವಿಂದ್ ಕೇಜ್ರಿವಾಲ್ ಆಯ್ತು. ಈಗ ನನ್ನ ಮತ್ತು ನನ್ನ ಪತ್ನಿಯನ್ನು ಟಾರ್ಗೆಟ್ ಮಾಡಿದ್ದಾರೆ: ಸಿಎಂ

ಲೂಟಿ ಮಾಡೋದು, ಕಾಂಗ್ರೆಸ್ ಶಾಸಕರನ್ನು ಖರೀದಿಸೋದು, ಜಾತಿ-ಧರ್ಮದ ಹೆಸರಲ್ಲಿ ಭಾರತೀಯರನ್ನು ವಿಭಜಿಸಿ ಆಳೋದಷ್ಟೆ ಬಿಜೆಪಿ ರಾಜಕಾರಣ: ಸಿ.ಎಂ.ಆಕ್ರೋಶ

ಟಿ.ನರಸೀಪುರ ನ 13: ED, CBI, IT ಹಾಗೂ ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಂಡು ಆಟ ಆಡ್ತೀರಾ?
ಅರವಿಂದ್ ಕೇಜ್ರಿವಾಲ್ ಆಯ್ತು. ಈಗ ನನ್ನ ಮತ್ತು ನನ್ನ ಪತ್ನಿಯನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿನ 470 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗಳ ಉದ್ಘಾಟನೆ ಮತ್ತು ಕಟ್ಟಡಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿ, ಫಲಾನುಭವಿಗಳಿಗೆ ನೇರವಾಗಿ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.

ನಾನು ನೆನ್ನೆ ಮೊನ್ನೆ ಮಂತ್ರಿಯಾದವನಲ್ಲ. 40 ವರ್ಷದಿಂದ ಮಂತ್ರಿಯಾಗಿದ್ದೀನಿ: ಸುಳ್ಳು ಕೇಸಲ್ಲಿ ನನ್ನನ್ನು, ನನ್ನ ಧರ್ಮಪತ್ನಿಯನ್ನು ಎಳೀತೀರಾ? ರಾಜ್ಯದ ಜನರೇನು ಮೂರ್ಖರಾ. ರಾಜ್ಯದ ಜನ‌ರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನಾನು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಷಡ್ಯಂತ್ರಗಳಿಗೆ ಜಗ್ಗಲ್ಲ, ಬಗ್ಗಲ್ಲ. ನೀವೂ ಕೂಡ ಸುಖಾ ಸುಮ್ಮನೆ ತಂಟೆಗೆ ಬಂದರೆ ಸುಮ್ಮನಿರಲ್ಲ ಎನ್ನುವ ಎಚ್ಚರಿಕೆ ಕೊಡಬೇಕಿದೆ ಎಂದು ಕರೆ ನೀಡಿದರು.

ಬಿಜೆಪಿ ಇವತ್ತಿನವರೆಗೂ ರಾಜ್ಯದಲ್ಲಿ ಸ್ವಂತ ಶಕ್ತಿಯಿಂದ ಒಂದು ಬಾರಿಯೂ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಮಾತ್ರ ಅಧಿಕಾರಕ್ಕೆ ಬಂದಿದೆ. ಈ ಬಾರಿ ಕಾಂಗ್ರೆಸ್ಸಿನ 50 ಮಂದಿ ಶಾಸಕರಿಗೆ ತಲಾ 50 ಕೋಟಿ ಆಫರ್ ನೀಡಿ ಖರೀದಿಸಲು ಯತ್ನಿಸಿದ್ದಾರೆ. ಎಲ್ಲಿಂದ ಬರತ್ತೆ ಈ ಹಣ? ಯಡಿಯೂರಪ್ಪ, ಬೊಮ್ಮಾಯಿ, ಆರ್.ಅಶೋಕ್ ಪ್ರಿಂಟ್ ಹಾಕಿದ್ದಾ ಈ ಹಣ? ರಾಜ್ಯವನ್ನು ಲೂಟಿ ಹೊಡೆದ ಹಣ ತಾನೇ. ಆದರೆ ನಮ್ಮ ಶಾಸಕರು ಇವರ ಆಮಿಷಕ್ಕೆ ಒಳಗಾಗಲಿಲ್ಲ ಎಂದರು.

ಬಿಜೆಪಿಯವರು ಗ್ಯಾರಂಟಿಯ ಹಣ ತಗೊತಾ ಇಲ್ವಾ? ಎದೆ ಮುಟ್ಟಿಕೊಂಡು ಹೇಳಲಿ

ರಾಜ್ಯದಲ್ಲಿ ನಮ್ಮ ಐದೂ ಗ್ಯಾರಂಟಿಗಳು ಯಶಸ್ವೀ ಜಾರಿ ಆದ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಭಯಾನಕ ಸುಳ್ಳುಗಳನ್ನು ಹೊಸೆಯುತ್ತಿದ್ದಾರೆ.
ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಹಸಿ ಹಸಿ ಸುಳ್ಳಿನ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿಗಳಿಗಾಗಿ 56 ಸಾವಿರ ಕೋಟಿ ರೂಪಾಯಿ ಕೊಟ್ಟರೆ, ಅಭಿವೃದ್ಧಿ ಕಾರ್ಯಗಳಿಗೆ 1 ಲಕ್ಷದ 20 ಸಾವಿರ ಕೋಟಿ ರೂಪಾಯಿ ನೀಡಿದೆ.‌ ಇಂದು ನರಸೀಪುರದಲ್ಲಿ 470 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ದೊರೆತಿದೆ. ಬಿಜೆಪಿಯ ಸುಳ್ಳುಗಳಿಗೆ ಇವತ್ತಿನ ಅಭಿವೃದ್ಧಿ ಕಾರ್ಯಕ್ರಮ ಕನ್ನಡಿ ಹಿಡಿದಿದೆ ಎಂದರು.

ಹೋಗಲಿ ಈ ಬಿಜೆಪಿಯವರಿಗೆ ನಾನು ನೇರವಾಗಿ ಒಂದು ಪ್ರಶ್ನೆ ಕೇಳ್ತೀನಿ. ರಾಜ್ಯದಲ್ಲಿ ಬಿಜೆಪಿಯವರು ನಮ್ಮ ಗ್ಯಾರಂಟಿಗಳ ಫಲಾನುಭವಿಗಳಲ್ಲವಾ? ಬಿಜೆಪಿಯವರು ಉಚಿತವಾಗಿ ಬಸ್ಸಲ್ಲಿ ಓಡಾಡುತ್ತಿಲ್ಲವಾ? ಬಿಜೆಪಿಯವರು ಉಚಿತ ವಿದ್ಯುತ್ ಪಡೆಯುತ್ತಿಲ್ಲವಾ ? ಬಿಜೆಪಿಯವರು ಗೃಹಲಕ್ಷ್ಮಿ ಹಣ ಪಡೆಯುತ್ತಿಲ್ಲವಾ? ಇಲ್ಲಾ, ನಾವು ತಗೊತಾ ಇಲ್ಲ ಅಂತ ಬಿಜೆಪಿಯವರು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ ಎಂದು ಸವಾಲೆಸೆದ ಸಿಎಂ, ರಾಜ್ಯ ಸರ್ಕಾರದ ಗ್ಯಾರಂಟಿ ಫಲಾನುಭವಿಗಳನ್ನು ಅವಮಾನಿಸಿ, ಅಪಪ್ರಚಾರ ಮಾಡುವುದನ್ನು ನಿಲ್ಲಿಸದಿದ್ದರೆ ಕೋಟಿ ಕೋಟಿ ಫಲಾನುಭವಿಗಳು ನಿಮಗೆ ಸರಿಯಾದ ಪಾಠ ಕಲಿಸ್ತಾರೆ ಎಂದು ಎಚ್ಚರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಸಂಸದರಾದ ಸುನಿಲ್ ಬೋಸ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್, ವಿಧಾನ ಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ, ಡಾ.ತಿಮ್ಮಯ್ಯ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಹಲವು ಪ್ರಮುಖರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ