KRGRV
Tuesday, November 3, 2026
Homeಜಿಲ್ಲಾ ಸುದ್ದಿಗಳುತುಳು ಭಾಷೆಗೆ ಹೆಚ್ಚುವರಿ ಆಡಳಿತ ಭಾಷೆ ಸ್ಥಾನ: ಸಚಿವ ಯು.ಟಿ. ಖಾದರ್ ಘೋಷಣೆ

ತುಳು ಭಾಷೆಗೆ ಹೆಚ್ಚುವರಿ ಆಡಳಿತ ಭಾಷೆ ಸ್ಥಾನ: ಸಚಿವ ಯು.ಟಿ. ಖಾದರ್ ಘೋಷಣೆ

ಮಂಗಳೂರು: ತುಳು ಭಾಷಾಭಿಮಾನಿಗಳ ದಶಕಗಳ ಬೇಡಿಕೆಗೆ ಸ್ಪಂದನೆಯಾಗಿ ತುಳು ಭಾಷೆಗೆ ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಘೋಷಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಗೆ ಸೀಮಿತವಾಗಿ ಹೆಚ್ಚುವರಿ ಆಡಳಿತ ಭಾಷೆಯಾಗಿ ಅಂಗೀಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಪಂಚದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ತುಳು ಭಾಷೆಗೆ ಈ ಗೌರವ ದೊರೆತಿರುವುದು ಕರಾವಳಿ ಭಾಗದ ಜನರ ಬಹುಕಾಲದ ಹೋರಾಟ ಹಾಗೂ ಆಶಯದ ಫಲವಾಗಿದೆ ಎಂದರು.

ಪ್ರತಿ ವರ್ಷ ಸೆಪ್ಟೆಂಬರ್ 18ರಂದು ಅಧಿಕೃತವಾಗಿ ‘ತುಳು ದಿನ’ (ತುಳು ದಿವಸ) ಆಚರಿಸಲು ನಿರ್ಧರಿಸಲಾಗಿದೆ. ತುಳು ಭಾಷೆಗೆ ದೊರೆತಿರುವ ಈ ಮಾನ್ಯತೆ, ಮುಂದಿನ ದಿನಗಳಲ್ಲಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆ ಸೇರ್ಪಡೆಗೊಳ್ಳುವ ಪ್ರಕ್ರಿಯೆಗೆ ಸಹಕಾರಿಯಾಗಲಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.

ತುಳು ಭಾಷೆಯ ಸಂರಕ್ಷಣೆ, ಅಭಿವೃದ್ಧಿ ಹಾಗೂ ಆಡಳಿತದಲ್ಲಿ ಬಳಕೆಗೆ ಈ ನಿರ್ಧಾರ ಮಹತ್ವದ ಹೆಜ್ಜೆಯಾಗಿದೆ ಎಂದು ಕರಾವಳಿ ಭಾಗದ ಭಾಷಾ ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿ