KRGRV
Friday, October 23, 2026
Homeಬೆಂಗಳೂರುನಕಲಿ ಸ್ಟಿಂಗ್‌ ಆಪರೇಷನ್‌ ಕೃತ್ಯದ ಹಿಂದಿರುವವರು ಯಾರೆಂಬ ಸತ್ಯ ಗೊತ್ತಾಗಲಿ ಎಂದೇ ನಾನು ದೂರು ನೀಡಿರುವುದು...

ನಕಲಿ ಸ್ಟಿಂಗ್‌ ಆಪರೇಷನ್‌ ಕೃತ್ಯದ ಹಿಂದಿರುವವರು ಯಾರೆಂಬ ಸತ್ಯ ಗೊತ್ತಾಗಲಿ ಎಂದೇ ನಾನು ದೂರು ನೀಡಿರುವುದು – ಮೈಸೂರಿನಲ್ಲಿ ಮಾಧ್ಯಮಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

ತಪ್ಪೇ ಮಾಡದ ನನಗೆ ಬೇಸರವೂ ಇಲ್ಲ, ಭಯವೂ ಇಲ್ಲ. ನ್ಯಾಯಯುತ ತನಿಖೆ ನಡೆಯಲಿ ಎಂದಷ್ಟೇ ಒತ್ತಾಯಿಸುತ್ತೇನೆ

ನನ್ನ ಬಳಿ ಅಧಿಕಾರ ಇಲ್ಲದಾಗ ಷಡ್ಯಂತ್ರ ಮಾಡಿದ್ದಾರೆ. ಅವರ ಉದ್ದೇಶ ಸಫಲವಾಗಲ್ಲ – ಸಿದ್ದರಾಮಯ್ಯ

ಮೈಸೂರು, ಅಕ್ಟೋಬರ್‌ 23
ಮೈಸೂರು ದಸರಾ ಉಸ್ತುವಾರಿಯನ್ನು ಹಲವು ಮಂದಿ ಸಚಿವರಿಗೆ ಹಂಚಿಕೆ ಮಾಡಿದ್ದರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ದಸರಾ ಆಚರಣೆಗಾಗಿ ಪ್ರತಿ ನಿತ್ಯವೂ 3 ಮಂದಿ ಸಚಿವರಿಗೆ ಉಸ್ತುವಾರಿ ವಹಿಸಲಾಗಿತ್ತು, ಆದರೆ ಈ ಸಚಿವರೇ ಸರಿಯಾಗಿ ಬಂದಿರಲಿಲ್ಲ. ನನ್ನ ಪ್ರಕಾರ ಈ ರೀತಿ ಜವಾಬ್ದಾರಿ ಹಂಚಿಕೆ ಮಾಡುವ ಅಗತ್ಯವಿರಲಿಲ್ಲ. ಆದರೆ ಮುಖ್ಯಮಂತ್ರಿಗಳು ತೀರ್ಮಾನ ಮಾಡಿ ಮಾಡಿದ್ದರು. ಈಗ ಸರ್ಕಾರವು ಬೇರೆ, ಮುಖ್ಯಮಂತ್ರಿಗಳು ಬೇರೆ ಎಂದು ತಿಳಿಸಿದರು.

ತಮ್ಮ ವಿರುದ್ಧ ನಡೆದ ನಕಲಿ ಸ್ಟಿಂಗ್‌ ಆಪರೇಷನ್‌ ವೀಡಿಯೋಗೆ ಸಂಬಂಧಿಸಿ ಪ್ರಶ್ನೆಗೆ ಉತ್ತರಿಸಿದ ಅವರು, ಇದೊಂದು ಸುಳ್ಳು ಕೇಸ್. ನನ್ನನ್ನು ಬ್ಲಾಕ್‌ ಮೇಲ್‌ ಮಾಡುವ ಉದ್ದೇಶದಿಂದ ಮಾಡಿದ್ದ ಪ್ರಕರಣವಿದು. ಆದ್ದರಿಂದ ಸತ್ಯ ಹೊರಗೆ ಬರಲಿ ಎಂದು ನಾನೇ ದೂರು ನೀಡಿದ್ದೇನೆ. ಜನರಿಗೆ ಸತ್ಯ ಗೊತ್ತಾಗಬೇಕು ಜೊತೆಗೆ ಇದರ ಹಿಂದೆ ಯಾರಿದ್ದಾರೆ ಎಂದು ಸಹ ಗೊತ್ತಾಬೇಕು. ಇದೊಂದು ಸುಳ್ಳು ಸೃಷ್ಟಿ ಎಂಬುದು ಗೊತ್ತಿರುವುದಕ್ಕೆ ನಾನು ದೂರು ನೀಡಿದ್ದೇನೆ ಹಾಗೂ ಈ ಸುಳ್ಳು ಹೆಚ್ಚು ಪ್ರಚಾರ ಆಗಬಾರದು ಎಂದು ಸಿವಿಲ್‌ ಕೋರ್ಟ್‌ ನಿಂದ ತಡೆಯಾಜ್ಞೆ ತಂದಿದ್ದೇನೆ. ನಾನು 8 ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದೆ, ಆಗ ನನ್ನ ಮೇಲೆ ಬ್ಲಾಕ್‌ ಮೇಲ್‌ ಮಾಡುವ ಯಾವುದೇ ಘಟನೆಗಳು ನಡೆದಿರಲಿಲ್ಲ. ಈಗ ನನ್ನ ಬಳಿ ಅಧಿಕಾರವಿಲ್ಲ.

ದಕ್ಷಿಣ ಕನ್ನಡದ ಕೃಪಾ ಆಳ್ವಾ ಎನ್ನುವ ಮಹಿಳೆ ಹಾಗೂ ರಾಕೇಶ್‌ ಶೆಟ್ಟಿ ಈ ಇಬ್ಬರೂ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ತಾವೇ ಮಾಡಿದ್ದು ಎಂದು ರಾಕೇಶ್‌ ಶೆಟ್ಟಿ ಸಹ ಒಪ್ಪಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ತಾವು ಸಿದ್ದರಾಮಯ್ಯ ಅವರ ಪರ ನಿಲ್ಲುವುದಾಗಿ ತಿಳಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ತನಿಖೆ ಜಾರಿಯಲ್ಲಿದೆ. ಈ ವಿಚಾರದಲ್ಲಿ ಯಾರೂ ನನ್ನ ಪರ ನಿಲ್ಲಬೇಕಾದ ಅಗತ್ಯವಿಲ್ಲ. ರಾಜ್ಯದ ಜನತೆಗೆ ಸತ್ಯ ಗೊತ್ತಾಗಬೇಕು, ಇಷ್ಟು ಮಾತ್ರ ಆಗಬೇಕಿರುವುದು. ನನ್ನ ವರ್ಚಸ್ಸಿಗೆ ಮಸಿ ಬಳಿಯಲು ಯಾರು ಎಷ್ಟೇ ಪ್ರಯತ್ನ ಮಾಡಿದರೂ ಜನ ಅದನ್ನು ಒಪ್ಪುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೊಲೀಸ್‌ ತನಿಖೆಯ ಬಗ್ಗೆ ನಿಮಗೆ ವಿಶ್ವಾಸವಿದೆಯೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಈ ತನಿಖೆಯ ಮೇಲೆ ನನಗೆ ವಿಶ್ವಾಸವಿದೆ. ತನಿಖೆ ನ್ಯಾಯಯುತವಾಗಿ ನಡೆಯಬೇಕು ಎನ್ನುವುದು ನನ್ನ ಒತ್ತಾಯವೆಂದು ತಿಳಿಸಿದರು. ಈ ಪ್ರಕರಣದ ತನಿಖೆಗೆ ಎಸ್‌ ಐ ಟಿ ರಚಿಸುವ ಅಗತ್ಯವೇನೂ ಇಲ್ಲ. ಈಗ ನಡೆಯುತ್ತಿರುವ ತನಿಖೆಯನ್ನೇ ಸೂಕ್ತ ರೀತಿಯಲ್ಲಿ ಮಾಡಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.

ಈ ಸ್ಟಿಂಗ್‌ ಷಡ್ಯಂತ್ರದ ಹಿಂದೆ ಕಾಂಗ್ರೆಸ್‌ ನಾಯಕರ ಕೈವಾಡವಿದೆಯೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದರ ಹಿಂದೆ ಯಾರಿದ್ದಾರೆ, ನಮ್ಮ ಪಕ್ಷದವರು ಇದ್ದಾರಾ? ಬೇರೆ ಪಕ್ಷದವರು ಇದ್ದಾರ? ಎನ್ನುವುದು ತನಿಖೆಯಿಂದ ಗೊತ್ತಾಗಬೇಕು ಎಂದು ಅವರು ತಿಳಿಸಿದರು.

ಈ ವಿಚಾರ ಯಾವಾಗ ನಿಮ್ಮ ಗಮನಕ್ಕೆ ಬಂದಿತು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಗಮನಕ್ಕೆ ಬಂದಿದ್ದು ಸೆಪ್ಟಂಬರ್‌ 26ರಂದು. ನಾನು ಯಾವುದೇ ರೀತಿ ತಪ್ಪು ಮಾಡಿಲ್ಲ ಎಂದಮೇಲೆ ನನಗೆ ಬೇಸರವಾಗುವ ಪ್ರಶ್ನೆಯಿಲ್ಲ. ತೇಜೋವಧೆ ಮಾಡಲು ಯಾರೇ ಹೊರಟರೂ ಸತ್ಯ ಏನೆಂದು ನನಗೆ ಗೊತ್ತಿರುತ್ತದೆ. ನಾನು ಬೇಜಾರಾಗುವ ಅಥವಾ ಹೆದರುವ ಪ್ರಶ್ನೆ ಉದ್ಭವವಾಗುವುದಿಲ್ಲ. ಈ ಪ್ರಕರಣವಂತೂ ನೂರಕ್ಕೆ ನೂರು ಸೃಷ್ಟಿ ಮಾಡಿರುವುದು. ನಾನು 1984ರಲ್ಲಿ ಮೊದಲ ಬಾರಿಗೆ ಮಂತ್ರಿಯಾದುದ್ದು. ಅಂದಿನಿಂದ ಇಂದಿನ ವರೆಗೆ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ ಆಗಲೂ ನಡೆದಿರಲಿಲ್ಲ. ಈಗ ನನ್ನ ಬಳಿ ಅಧಿಕಾರ ಇಲ್ಲದಾಗ ಇಂತಹ ಷಡ್ಯಂತ್ರ ಮಾಡುತ್ತಿದ್ದಾರೆ. ಅವರ ಉದ್ದೇಶ ಸಫಲವಾಗುವುದಿಲ್ಲ ಎಂಬುದಂತು ಸತ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್ಚಿನ ಸುದ್ದಿ