KRGRV
Monday, December 23, 2024
Homeಬೆಂಗಳೂರುನವೆಂಬರ್ 14ರ ‘ಮಕ್ಕಳ ದಿನಾಚರಣೆ‘ ಅಂಗವಾಗಿ ಗ್ರಾಮ ಪಂಚಾಯತಿಗಳಲ್ಲಿ ‘ಮಕ್ಕಳ ಪಂಚಾಯತ್’ ಅರಿವಿನ ಹಬ್ಬ ಆಯೋಜನೆ

ನವೆಂಬರ್ 14ರ ‘ಮಕ್ಕಳ ದಿನಾಚರಣೆ‘ ಅಂಗವಾಗಿ ಗ್ರಾಮ ಪಂಚಾಯತಿಗಳಲ್ಲಿ ‘ಮಕ್ಕಳ ಪಂಚಾಯತ್’ ಅರಿವಿನ ಹಬ್ಬ ಆಯೋಜನೆ

ಗ್ರಾಮಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸ್ಥಳೀಯ ಆಡಳಿತದ ಬಗ್ಗೆ ಅರಿವಿರಬೇಕು, ಗ್ರಾಮ ಪಂಚಾಯತಿಗಳ ಆಶಯ, ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಅರಿವಿನ ಹಬ್ಬ ಯಶಸ್ವಿಯಾಗಲಿ. ಪಂಡಿತ್‌ ನೆಹರು ಅವರ ಹುಟ್ಟಹಬ್ಬದ ದಿನವಾದ ಮಕ್ಕಳ ದಿನದಂದು ರಾಜ್ಯದ ಎಲ್ಲ ಮಕ್ಕಳಿಗೂ ಶುಭಾಶಯ ಹೇಳುತ್ತಿದ್ದೇನೆ- ಪ್ರಿಯಾಂಕ್‌ ಖರ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅರಿವು ಕೇಂದ್ರಗಳಲ್ಲಿ, ಮಕ್ಕಳು ಓದುವುದರಲ್ಲಿ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು “ಓದುವ ಬೆಳಕು” ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ಗ್ರಾಮೀಣ ಶಾಲಾ ಮಕ್ಕಳನ್ನು ವ್ಯವಸ್ಥಿತವಾಗಿ ಕಲಿಕಾ ಕ್ಷೇತ್ರಕ್ಕೆ ಮರಳಿ ತರುವ ಹಾಗೂ ನಿರಂತರತೆಯನ್ನು ಕಾಪಾಡುವ ಗುರಿಯನ್ನು ಹೊಂದಲಾಗಿದೆ. ನವೆಂಬರ್ 14ರ ಮಕ್ಕಳ ದಿನಾಚರಣೆ ಹಾಗೂ ನವೆಂಬರ್‌ 20ರ ಅಂತಾರಾಷ್ಟ್ರೀಯ ಮಕ್ಕಳ ದಿನಾಚರಣೆ ಅಂಗವಾಗಿ ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ದೇಶನಗಳನ್ನು ನೀಡಲಾಗಿದೆ.

ನವೆಂಬರ್ 14ರ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಯೋಜಿಸಲಾಗಿದ್ದು, ವಿಕೇಂದ್ರೀಕೃತ ವ್ಯವಸ್ಥೆಯ ಸ್ಥಳೀಯ ಸ್ವಯಂ ಆಡಳಿತ ಘಟಕವಾದ ಗ್ರಾಮ ಪಂಚಾಯತಿಗೆ 9 ಮತ್ತು 10ನೇ ತರಗತಿಯ 25 ವಿದ್ಯಾರ್ಥಿಗಳು ಒಬ್ಬ ಶಿಕ್ಷಕರೊಂದಿಗೆ ಪ್ರವಾಸ ಕೈಗೊಂಡು ಅಧ್ಯಯಿಸಲು ಅವಕಾಶ ಕಲ್ಪಿಸಿ ‘ಮಕ್ಕಳ ಪಂಚಾಯತ್‘ ಅರಿವಿನ ಹಬ್ಬವನ್ನು ಆಯೋಜಿಸಲು ಉದ್ದೇಶಿಸಲಾಗಿದೆ.

‘ಮಕ್ಕಳ ಪಂಚಾಯತ್‘ ಅರಿವಿನ ಹಬ್ಬದ ರೂಪುರೇಷೆಗಳು ಈ ಕೆಳಗಿನಂತಿವೆ:
● ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಂದ ಗ್ರಾಮ ಪಂಚಾಯತಿಯ ಪ್ರದೇಶದಲ್ಲಿ ಮಕ್ಕಳೊಂದಿಗೆ ಒಂದು ಸಣ್ಣ ನಡಿಗೆ ಕೈಗೊಂಡು ಗ್ರಾಮ ಪಂಚಾಯತಿ ಒದಗಿಸುತ್ತಿರುವ ಸೇವೆಗಳ ಬಗ್ಗೆ ವಿವರಿಸಲಾಗುವುದು.
● ಮಕ್ಕಳಿಗೆ ಪ್ರಜಾಪ್ರಭುತ್ವ, 73ನೇ ಸಂವಿಧಾನ ತಿದ್ದುಪಡಿ, 3 ಹಂತದ ವಿಕೇಂದ್ರೀಕೃತ ವ್ಯವಸ್ಥೆ ಮತ್ತು ಸ್ಥಳೀಯ ಸ್ವಯಂ ಆಡಳಿತ ಘಟಕವಾಗಿ ಗ್ರಾಮ ಪಂಚಾಯತಿಯ ಕಾರ್ಯನಿರ್ವಹಣೆ ವಿವರಿಸಲಾಗುವುದು.
● ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿರುವ ಯೋಜನೆಗಳ ಬಗ್ಗೆ ಸ್ಥೂಲ ಪರಿಚಯ ಮಾಡಿಸಲಾಗುವುದು.
● ಮಹತ್ವಾಕಾಂಕ್ಷಿ ಯೋಜನೆಗಳಾದ ಅರಿವು ಕೇಂದ್ರ, ಕೂಸಿನ ಮನೆ, ಸ್ವ ಸಹಾಯ ಸಂಘಗಳಿಂದ ಘನ ತ್ಯಾಜ್ಯ ನಿರ್ವಹಣೆ ಮತ್ತು ಗ್ರಾಮ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಗುವುದು.
● ಮಕ್ಕಳಿಗೆ ಲಘು ಉಪಾಹಾರವನ್ನು ನೀಡಲಾಗುವುದು.
● ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ‘ಮಕ್ಕಳ ಪಂಚಾಯತ್‘ ಅರಿವಿನ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸಲು ಆಯಾ ಜಿಲ್ಲೆಗಳ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ತಿಳಿಸಲಾಗಿದೆ.
● ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ದೇಶನಗಳಂತೆ ಎಲ್ಲಾ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ, ‘ಮಕ್ಕಳ ಪಂಚಾಯತ್‘ ಅರಿವಿನ ಹಬ್ಬವನ್ನು ಆಯೋಜಿಸಲು ಕ್ರಮವಹಿಸುವಂತೆ ತಿಳಿಸಲಾಗಿದೆ.

ಹೆಚ್ಚಿನ ಸುದ್ದಿ