ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಗದ್ದನಕೇರಿಯ ರಾಮಾರೂಢ ಮಠದ ಸ್ವಾಮೀಜಿಗೆ ನಿಮ್ಮ ಮೇಲೆ ಗಂಭೀರ ಆರೋಪ ಬಂದಿದೆ ಎಂದು, ಮೊಬೈಲ್ ಅಲ್ಲಿ ಎಡಿಜಿಪಿ ಮಾತನಾಡುತ್ತಿದ್ದೇನೆ ಹೇಳಿಕೊಂಡು ಎರಡು ಕಂತಿನಲ್ಲಿ 1 ಕೋಟಿ ರೂ. ಪಡೆದು ವಂಚನೆ ಮಾಡಿದ್ದ ಜೆಡಿಎಸ್ ನಾಯಕ ಪ್ರಕಾಶ್ ಮುಧೋಳನನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ಪ್ರಕಾಶ್ ಮುಧೋಳನಿಂದ ಇದೀಗ ಪೊಲೀಸರು 87 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಬಾಗಲಕೋಟೆ ಎಸ್ ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಮೂರು ಪೊಲೀಸ್ ತಂಡ ರಚಿಸಲಾಗಿತ್ತು. ಕೂಡಲೇ ಕ್ರಮ ಕೈಗೊಂಡು ಒಂದೇ ದಿನದಲ್ಲಿ ಪ್ರಕಾಶ್ ಮುಧೋಳ ಬಂಧನ ಮಾಡಲಾಗಿದೆ.ಬಂಧಿತನಿಂದ 87 ಲಕ್ಷ ರೂ.ಹಣ, ಇನ್ನೋವಾ, ಔರಾ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕಾಶ್ ಮುಧೋಳ್ ಹಿನ್ನೆಲೆ?
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಮೂಲದವನಾದ ಆರೋಪಿ ಪ್ರಕಾಶ್ ಎಂಬಾತ 2024 ರಲ್ಲಿ ರಾಮದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಎಲೆಕ್ಷನ್ಗೆ ನಿಂತಿದ್ದ. ಇತನ ಮೇಲೆ ಈ ಹಿಂದೆ 3 ಕಳ್ಳತನ, 3 ಚೀಟಿಂಗ್, 3 ಸುಲಿಗೆ, 1 ಸಾರ್ವಜನಿಕ ಅಡೆತಡೆ ಸೇರಿದಂತೆ 12 ಕೇಸ್ ಇರುವುದು ಪತ್ತೆಯಾಗಿದೆ.
ಈತನ ವಿರುದ್ಧ 12 ಕೇಸ್ ದಾಖಲಾಗಿದ್ದು, ಪೊಲೀಸರು ಬಂಧಿಸಿದ ಪ್ರಕಾಶ್ ಮುಧೋಳನ ಕಾರಿನಲ್ಲಿ ಪೊಲೀಸರು ಬಳಸುವಂತ ಮಾದರಿಯ ವಾಕಿಟಾಕಿ, ಪೊಲೀಸರ ಸೈರನ್, ಪೊಲೀಸ್ ವರ್ಲ್ಡ್ ಚಾನಲ್ ಲೋಗೊ, ಮೂರು ಮೊಬೈಲ್, ಎರಡು ಚೆಕ್ ಹಾಗೂ ನಾಲ್ಕು ಬಾಂಡ್ ಜಪ್ತಿ ಮಾಡಲಾಗಿದೆ.ಇನ್ನು ಆರೋಪಿ ಸ್ವಾಮೀಜಿಗೆ ಏನೆಂದು ಬೆದರಿಕೆ ಹಾಕಿದ್ದ, ಇದರಲ್ಲಿ ಇನ್ನೂ ಯಾರ್ಯಾರ ಪಾತ್ರ ಇದೆ ಎಂಬ ಬಗ್ಗೆ ತನಿಖೆ ಮುಂದುವರೆಯುತ್ತಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸ ಕುಮಾರ್ ಹೇಳಿದ್ದಾರೆ.