KRGRV
Monday, August 18, 2025
Homeಜಿಲ್ಲಾ ಸುದ್ದಿಗಳುಯಾದಗಿರಿಯಲ್ಲಿ ನಾಳೆ 'ಅರೋಗ್ಯ ಆವಿಷ್ಕಾರ'ಕಾರ್ಯಕ್ರಮ,ಸಿದ್ಧತಾ ಕಾರ್ಯ ಪರಿಶೀಲಿಸಿದ ದರ್ಶನಾಪುರ

ಯಾದಗಿರಿಯಲ್ಲಿ ನಾಳೆ ‘ಅರೋಗ್ಯ ಆವಿಷ್ಕಾರ’ಕಾರ್ಯಕ್ರಮ,ಸಿದ್ಧತಾ ಕಾರ್ಯ ಪರಿಶೀಲಿಸಿದ ದರ್ಶನಾಪುರ

ಯಾದಗಿರಿ: ಕೆ.ಕೆ.ಆರ್.ಡಿ.ಬಿ ಮಂಡಳಿಯ ಆರ್ಥಿಕ ನೆರವಿನೊಂದಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರೋಗ್ಯ ಸಂಸ್ಥೆಗಳ ಬಲವರ್ಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸುಮಾರು 440. 63 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಿರುವ ಹಿನ್ನೆಲೆಯಲ್ಲಿ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಶುಕ್ರವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಾರ್ಯಕ್ರಮದ ಅಂತಿಮ ಸಿದ್ಧತಾ ಕಾರ್ಯ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶರಣಬಸಪ್ಪ ದರ್ಶನಾಪೂರ, ಮುಖ್ಯಮಂತ್ರಿಗಳ ಜೊತೆಗೆ ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಸೇರಿದಂತೆ ಪ್ರದೇಶದ ಸಚಿವರು, ಶಾಸಕರು-ಸಂಸದರು ಹಾಗೂ ಇತರೆ ಚುನಾಯಿತ ಜನಪ್ರತಿನಿಧಿಗಳು ಆಗಮಿಸಲಿರುವ ಹಿನ್ನೆಲೆಯಲ್ಲಿ ಶಿಷ್ಠಚಾರದಂತೆ ಸೂಕ್ತ ಭದ್ರತೆ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿ ವರ್ಗಕ್ಕೆ ನಿರ್ದೇಶನ ನೀಡಲಾಗಿದೆ ಎಂದರು.

ಸುಮಾರು 20 ಸಾವಿರ ಜನ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಅವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್, ಸುಗಮ ಸಂಚಾರ ನಿರ್ವಹಣೆ ಸೇರಿದಂತೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಮುಂಡರಗಿಯಲ್ಲಿ ಇಂಡಸ್ಟ್ರಿ ಹಬ್:..

ಗಿರಿ ಜಿಲ್ಲೆ ಯಾದಗಿರಿಯಲ್ಲಿ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆ ಇಲಾಖೆ ಹಾಗೂ ಕೆ.ಕೆ.ಆ‌ರ್.ಡಿ.ಬಿ. ಮಂಡಳಿಯ ಶೇ.50-50 ಅನುದಾನದಡಿ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಮುಂಡರಗಿಯಲ್ಲಿ ಇಂಡಸ್ಟ್ರಿಯಲ್ ಹಬ್ ಮಾಡಲು ನಿರ್ಧರಿಸಿದೆ ಎಂದ ಸಚಿವರು, ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೂ ಆದ್ಯತೆ ನೀಡಲಾಗಿದೆ. ಶಹಾಪುರ-ಸುರಪುರ ನಲ್ಲಿ ತಲಾ 90 ಕೋಟಿ ರೂ. ವೆಚ್ಚದಲ್ಲಿ ಮಲ್ಲಾಬಾದ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ವಿರೋಧ ಪಕ್ಷಗಳು ವಿನಾಕಾರಣ ಆರೋಪ ಮಾಡುವುದನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮಾತನಾಡಲಿ ಎಂದರು.

ಕಲ್ಯಾಣದ ಅಭಿವೃದ್ಧಿಗೆ ಮಂಡಳಿ ಬದ್ಧ:

ಕೆ.ಕೆ.ಆ‌ರ್.ಡಿ.ಬಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಮಾತನಾಡಿ, ಪ್ರಸಕ್ತ 2025-26 ನೇ ಸಾಲಿಗೆ ಮಂಡಳಿಗೆ ರಾಜ್ಯ ಸರ್ಕಾರ 5,000 ಕೋಟಿ ರೂ. ಅನುದಾನ ಹಂಚಿಕೆ ಮಾಡುವ ಮೂಲಕ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಪ್ರದೇಶದ 41 ಕ್ಷೇತ್ರಗಳನ್ನು ಸಮಾನವಾಗಿ ಅಭಿವೃದ್ದಿ ಮಾಡಲಾಗುವುದು. ನುಡಿದಂತೆ ನಡೆಯುವ ಸರ್ಕಾರ ನಮ್ಮದು ಎಂದರು.

ಹಿಂದೆ ಯು.ಪಿ.ಎ. ಸರ್ಕಾರದ ಅವಧಿಯಲ್ಲಿಯೇ ಈ ಪ್ರದೇಶಕ್ಕೆ ನ್ಯಾಯ ಒದಗಸುವಂತಹ ಐತಿಹಾಸಿಕ 371ಜೆ ತಿದ್ದುಪಡಿ ತಂದಿದ್ದು, ಅದರ ಪರಿಣಾಮವೇ ಇಂದಿಲ್ಲಿ ಪ್ರದೇಶದಲ್ಲಿ ಸಾವಿರಾರು ಕೋಟಿ ರೂ. ಅಭಿವೃದ್ದಿ ಕಾರ್ಯಗಳು ನೋಡಲು ಸಾಧ್ಯವಾಗುತ್ತಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅರೋಗ್ಯ ಇಲಾಖೆಗೆ ಸಂಬಂಧಿಸಿದಂತೆ 873 ಕೋಟಿ. ರೂ. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಇದರಲ್ಲಿ ಅರ್ಧ ಹಣ ಭರಿಸಲಿದೆ. ಮೊದಲನೇ ಹಂತವಾಗಿ ಶನಿವಾರ 416 ಕೋಟಿ ರೂ. ಮೊತ್ತಕ್ಕೆ ಸಿ.ಎಂ. ಸಿದ್ರಾಮಯ್ಯ ಅವರು ಅಡಿಗಲ್ಲು ನೆರವೇರಿಸಲಿದ್ದಾರೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಪಿಎಚ್‌ಸಿ, ಸಮುದಾಯ ಆರೋಗ್ಯ ಕೇಂದ್ರಗಳ ಸೇವೆ ಬಲಗೊಂಡರೆ ಹಳ್ಳಿ ಜನರ ಆರೋಗ್ಯ ಸುಧಾರಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಆರೋಗ್ಯ ಯೋಜನೆ ಮಂಡಳಿ ರೂಪಿಸಲಾಗಿದೆ ಎಂದರು….

ಕಲ್ಯಾಣ ಭಾಗದಲ್ಲಿ ಅರೋಗ್ಯ ಮತ್ತು ಶಿಕ್ಷಣ ಸುಧಾರಣೆಗೆ ಅಕ್ಷರ ಆವಿಷ್ಕಾರ, ಅರೋಗ್ಯ ಆವಿಷ್ಕಾರ ಯೋಜನೆ ತರಲಾಗಿದೆ. ಇದಲ್ಲದೆ ಪ್ರದೇಶದಲ್ಲಿ ನಿರುದ್ಯೋಗ ನಿವಾರಣೆಗೆ ಯುವಕರಲ್ಲಿ ಕೌಶಲ್ಯ ಹೆಚ್ಚಿಸಲು ಉದ್ಯೋಗ ಆವಿಷ್ಕಾರ, ಅರಣೀಕರಣಕ್ಕೆ ಒತ್ತು ನೀಡಲು ಅರಣ್ಯ ಆವಿಷ್ಕಾರದಂತಹ ನವೀನ ಯೋಜನೆಗಳನ್ನು ಮಂಡಳಿ ಹಾಕಿಕೊಂಡಿದೆ. ಪ್ರದೇಶದ ಗ್ರಾಮೀಣ ಭಾಗದಲ್ಲಿ ಖಾಸಗಿ ಶಾಲೆ ಮೀರಿಸುವಂತಹ ಗುಣಮಟ್ಟದ ಶಿಕ್ಷಣ ನೀಡುವ 50 ಕೆ.ಪಿ.ಎಸ್‌. ಶಾಲೆ ನಿರ್ಮಾಣ ಮಾಡಲಾಗುತ್ತಿದೆ. ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಟಾನಕ್ಕೆ ಜಲ ಭಾಗ್ಯ ಜಾರಿಗೆ ತರುವ ಚಿಂತನೆ ನಡೆದಿದೆ ಎಂದರು…

ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರು, ಡಿ.ಸಿ. ಡಾ.ಬಿ.ಸುಶೀಲಾ, ಯಾದಗಿರಿ ಎಸ್.ಪಿ.ಪೃತ್ವಿಕ್ ಶಂಕರ, ಕಲಬುರಗಿ ಎಸ್.ಪಿ. ಅಡ್ಡರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಲವೀಶ್ ಓರಡಿಯಾ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

ವರದಿ: ಎನ್ ಎಮ್ ನದಾಫ್ ಯಾದಗಿರಿ

ಹೆಚ್ಚಿನ ಸುದ್ದಿ