ವಿಜಯಪುರ: ಮುಳವಾಡ ಕೈಗಾರಿಕಾ ಪ್ರದೇಶ ಹಂತ-2ರಲ್ಲಿ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಸಂಸ್ಥೆಗೆ 100 ಎಕರೆ ಜಮೀನು ಹಂಚಿಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB)ಗೆ ಮಹತ್ವದ ನಿರ್ದೇಶನ ನೀಡಿದೆ.
ಜಮೀನು ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಅಂಗವಿಕಲರು ಹಾಗೂ ಮಾಜಿ ಸೈನಿಕ ಉದ್ಯಮಿಗಳಿಗೆ ಮೀಸಲಾತಿ ಕಲ್ಪಿಸುವ ರೋಸ್ಟರ್ ನಿಯಮಗಳ ಉಲ್ಲಂಘನೆಯಾಗಿದೆ ಎಂಬ ಆರೋಪದ ಕುರಿತು ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಿ, ಕಾನೂನು ಪ್ರಕಾರ 8 ವಾರಗಳೊಳಗೆ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಅನು ಶಿವರಾಮ್ ಮತ್ತು ಕೆ.ಎಸ್. ಭಾರತ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರ್ಖೇಡ ಗ್ರಾಮದ ಸಾಮಾಜಿಕ ಹೋರಾಟಗಾರ ಮಳಗಾಣ ಬಸವರಾಜ ಅವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲರಾದ ಸರಸ್ವತಿ ಅವರು ವಾದ ಮಂಡಿಸಿ, ಮುಳವಾಡ ಕೈಗಾರಿಕಾ ಪ್ರದೇಶ ಹಂತ-2ರಲ್ಲಿ ರಿಲಯನ್ಸ್ ಸಂಸ್ಥೆಗೆ ಹಂಚಿಕೆ ಮಾಡಲಾದ 100 ಎಕರೆ ಜಮೀನಿನಲ್ಲಿ ಮೀಸಲು ವರ್ಗಗಳಿಗೆ ಅನ್ವಯಿಸುವ ರೋಸ್ಟರ್ ನಿಯಮಗಳನ್ನು ಪಾಲಿಸಲಾಗಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
“ಮುಳವಾಡ ಕೈಗಾರಿಕಾ ಪ್ರದೇಶ ಹಂತ-2ರಲ್ಲಿ ರಿಲಯನ್ಸ್ ಸಂಸ್ಥೆಗೆ 100 ಎಕರೆ ಜಮೀನು ಹಂಚಿಕೆ ಮಾಡುವ ವೇಳೆ ಎಸ್ಸಿ-ಎಸ್ಟಿ ಸೇರಿದಂತೆ ಮೀಸಲು ವರ್ಗಗಳ ರೋಸ್ಟರ್ ನಿಯಮ ಉಲ್ಲಂಘನೆಯಾಗಿದೆ ಎಂಬ ವಿಚಾರವಾಗಿ ನಾನು ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇನೆ. ಹೈಕೋರ್ಟ್ ನೀಡಿರುವ ನಿರ್ದೇಶನದಿಂದ ನ್ಯಾಯ ಸಿಗುವ ವಿಶ್ವಾಸವಿದೆ. ಜಮೀನು ಹಂಚಿಕೆ ಪ್ರಕ್ರಿಯೆಯಲ್ಲಿ ಸಾಮಾಜಿಕ ನ್ಯಾಯ ಹಾಗೂ ನಿಯಮಗಳ ಪಾಲನೆ ಖಚಿತವಾಗಲಿದೆ ಎಂಬ ನಂಬಿಕೆ ಇದೆ.”
ಮಳಗಾಣ ಬಸವರಾಜ ಸಾಮಾಜಿಕ ಹೋರಾಟಗಾರ, ಅಗರ್ಖೇಡ ಗ್ರಾಮ, ಇಂಡಿ ತಾಲೂಕು, ವಿಜಯಪುರ ಜಿಲ್ಲೆ
ಅರ್ಜಿದಾರರ ಆರೋಪದ ಪ್ರಕಾರ, 2025ರ ಅಕ್ಟೋಬರ್ 24ರಂದು ಮುಳವಾಡ ಕೈಗಾರಿಕಾ ಪ್ರದೇಶ ಹಂತ-2ರಲ್ಲಿ ರೋಸ್ಟರ್ ನಿಯಮಗಳಡಿ ಮೀಸಲಿಟ್ಟಿದ್ದ 100 ಎಕರೆ ಜಮೀನನ್ನು ರಿಲಯನ್ಸ್ ಸಂಸ್ಥೆಗೆ ಹಂಚಿಕೆ ಮಾಡಲಾಗಿದ್ದು, ಈ ಹಂಚಿಕೆಯನ್ನು ರದ್ದುಪಡಿಸುವಂತೆ ಮನವಿ ಮಾಡಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ.24ರಷ್ಟು ಜಮೀನು ಮೀಸಲಾತಿ ಸೇರಿದಂತೆ ನಿಗದಿತ ಮೀಸಲು ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಅರ್ಜಿದಾರರು 2026ರ ಆಗಸ್ಟ್ 5ರಂದು ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಿ, 8 ವಾರಗಳೊಳಗೆ ಸೂಕ್ತ ಆದೇಶ ಹೊರಡಿಸುವಂತೆ ನಿರ್ದೇಶನ ನೀಡಿತು.
ಈ ನಿರ್ದೇಶನಗಳೊಂದಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.