KRGRV
Monday, August 31, 2026
Homeಜಿಲ್ಲಾ ಸುದ್ದಿಗಳುವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ತಂತ್ರಜ್ಞಾನ ಸದ್ಬಳಕೆಯಾಗಲಿ: ಶಾಸಕ ನಾಡಗೌಡ

ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ತಂತ್ರಜ್ಞಾನ ಸದ್ಬಳಕೆಯಾಗಲಿ: ಶಾಸಕ ನಾಡಗೌಡ

ಮುದ್ದೇಬಿಹಾಳ: ಇಂದಿನ ದಿನಗಳಲ್ಲಿ ಕಂಪ್ಯೂಟರ್ ಹಾಗೂ ಅಂತರ್ಜಾಲದ ಮೂಲಕ ನಮಗೆ ಬೇಕಾದ ಎಲ್ಲ ಮಾಹಿತಿಯೂ ಸುಲಭವಾಗಿ ಲಭ್ಯವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ತಾವು ಕಲಿಯಬೇಕಾದ ಹಲವು ವಿಷಯಗಳನ್ನು ಕಡಿಮೆ ಸಮಯದಲ್ಲಿಯೇ ತಿಳಿದುಕೊಳ್ಳಲು ಸಾಧ್ಯವಾಗಿದ್ದು, ತಂತ್ರಜ್ಞಾನವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಉಪಯುಕ್ತವಾಗುವ ರೀತಿಯಲ್ಲಿ ಸಂಸ್ಥೆಗಳು ಬಳಸಿಕೊಳ್ಳಬೇಕು ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
ಪಟ್ಟಣದ ಚನ್ಮಯಿ ಜೆ.ಸಿ. ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗಿರುವ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಂತರ್ಜಾಲದ ಮೂಲಕ ನಮಗೆ ತಿಳಿಯದ ವಿಷಯಗಳ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಆದರೆ ಅದರಲ್ಲಿರುವ ಕೆಲವು ಹಾನಿಕರ ಹಾಗೂ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುವ ವಿಷಯಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗಿದೆ. ಶಿಕ್ಷಕರು ಈ ಬಗ್ಗೆ ಗಮನಹರಿಸಿ, ವಿದ್ಯಾರ್ಥಿಗಳು ಯಾವ ವಿಷಯಗಳನ್ನು ತಿಳಿದುಕೊಳ್ಳಬೇಕು ಮತ್ತು ಯಾವುದರಿಂದ ದೂರವಿರಬೇಕು ಎಂಬುದರ ಕುರಿತು ಸೂಕ್ತ ತಿಳುವಳಿಕೆ ನೀಡುವುದು ಅಗತ್ಯವಾಗಿದೆ ಎಂದು ನಾಡಗೌಡ ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ನಾಡಗೌಡ ಅವರು ತರಬೇತಿ ಕೇಂದ್ರದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜೆ.ಸಿ. ಸಂಸ್ಥೆಯ ಅಧ್ಯಕ್ಷ ಸಿ.ಪಿ. ಸಜ್ಜನ, ಮುರಳಿಧರ ಬುಡ್ಡೊಡಗಿ, ಮಾಜಿ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪ್ರಭುರಾಜ ಕಲಬುರ್ಗಿ, ಜಿತೇಂದ್ರ ಓಸ್ವಾಲ್, ಡಾ. ವಿರೇಶ ಇಟಗಿ, ದಾನಯ್ಯ ಮಠ, ಅಶೋಕ ನಾಡಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ