KRGRV
Monday, December 23, 2024
Homeಜಿಲ್ಲಾ ಸುದ್ದಿಗಳುಸಚಿವ ಎಂ.ಬಿ.ಪಾಟೀಲರಿಗೆ ಒಂದೇ ವಿಳಾಸದಲ್ಲಿ ಬೇರೆ ಬೇರೆ ಹೆಸರಿನಲ್ಲಿ 5-6 ಸೈಟ್

ಸಚಿವ ಎಂ.ಬಿ.ಪಾಟೀಲರಿಗೆ ಒಂದೇ ವಿಳಾಸದಲ್ಲಿ ಬೇರೆ ಬೇರೆ ಹೆಸರಿನಲ್ಲಿ 5-6 ಸೈಟ್

ಕೆಲವರನ್ನು ತೃಪ್ತಿ ಪಡಿಸಲು, ಜೇಬು ತುಂಬಿಸಲು ದೊಡ್ಡ ಸಿ.ಎ. ಸೈಟ್ ಮಂಜೂರು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: 5 ಎಕರೆ, 10 ಎಕರೆ ಸಿ.ಎ. ಸೈಟ್‍ಗಳನ್ನು ಕೊಟ್ಟು ಇನ್ನೊಂದು ಆಯಾಮದಲ್ಲಿ ಕೆಲವರನ್ನು ತೃಪ್ತಿ ಪಡಿಸುವ ಮತ್ತು ಜೇಬು ತುಂಬಿಸುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ. ಈ ಲೂಟಿ ಗಮನಕ್ಕೆ ಬಂದ ಮೇಲೂ ನಾವು ಸುಮ್ಮನಿರಬೇಕೇ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇದೇ ಕಾರಣದಿಂದ ಘನತೆವೆತ್ತ ರಾಜ್ಯಪಾಲರನ್ನು ಭೇಟಿ ಮಾಡಿ ಸಿ.ಎ.ಸೈಟ್‍ಗಳ ಅಕ್ರಮದ ಕುರಿತು ತನಿಖೆಗೆ ಕೋರಿದ್ದೇವೆ. ಇದರಲ್ಲಿ ಒಬ್ಬರ ವಿಷಯ ಎಂದು ಹೇಳಿಲ್ಲ. ಆದರೂ ಸಚಿವರು ಕುಪಿತರಾಗಿದ್ದಾರೆ. ಅವರೇನು ಸೈಟ್ ತಗೊಂಡಿಲ್ವ? ಶೆಡ್ ಕಟ್ಟಿದ್ದಾರೆ. ಶೆಡ್ ನಾರಾಯಣಸ್ವಾಮಿ ಎಂದಿದ್ದಾರೆ. ನಾನು ತಗೊಂಡಿದ್ದೇ ಶೆಡ್ ಕಟ್ಟಲೆಂದು ಅಲ್ಲವೇ? ವೇರ್ ಹೌಸ್ ಎಂದರೆ ಶೆಡ್ ಅಲ್ಲವೇ ಎಂದು ಕೇಳಿದರು.
ಹೈದರಾಬಾದ್‍ನವರಿಗೆ 10 ಎಕರೆ ಜಾಗವನ್ನು ಬೆಂಗಳೂರಿನಲ್ಲಿ ಕೊಟ್ಟಿದ್ದಾರೆ. ಅವರಿಗೆ ಸಿ.ಎ. ಸೈಟ್ ಹೇಗೆ ಕೊಡಲು ಸಾಧ್ಯ? ಇಲ್ಲಿನ ಜನರಿಗೆ ಕೊಡಬೇಕಿತ್ತು. ದಲಿತ ಸಮುದಾಯಕ್ಕೆ ಸೇರಿದ 71 ಜನ ಹಣ ಕಟ್ಟಿ ನಾಲ್ಕೈದು ವರ್ಷಗಳಿಂದ ಸಿ.ಎ. ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಇನ್ನೂ 800 ಎಕರೆ ಬ್ಯಾಕ್‍ಲಾಗ್ ಇದ್ದರೂ ಕೊಡುತ್ತಿಲ್ಲ. 5-6 ವರ್ಷಗಳಿಂದ ಕೊಡದೆ ಇರುವವರು 337 ಎಕರೆಯನ್ನು ಸೈಟ್‍ಗಳಾಗಿ ಪರಿವರ್ತಿಸಿ 5 ಎಕರೆ, 10 ಎಕರೆ ಸಿ.ಎ. ಸೈಟ್ ಎಂದು ನಮೂದಿಸಿ ನೀಡಿದ್ದಾರೆ ಎಂದು ಆಕ್ಷೇಪಿಸಿದರು. ಸಿ.ಎ. ಸೈಟ್ ಎಂದರೆ ಸಾಮಾನ್ಯವಾಗಿ ಅರ್ಧ ಎಕರೆ, ಮುಕ್ಕಾಲು ಎಕರೆ, ಒಂದು ಎಕರೆ ಇರುತ್ತವೆ ಎಂದು ವಿವರಿಸಿದರು.

ತರಾತುರಿಯಲ್ಲಿ ತೀರ್ಮಾನ..
ನಾನು ಒಂದೇ ಸೈಟಿನ ಬಗ್ಗೆ ಮಾತನಾಡಿಲ್ಲ; 193 ಸೈಟ್‍ಗಳ ಕುರಿತು ಮಾತನಾಡಿದ್ದೇನೆ. ಅದರ ಕುರಿತಾಗಿ ತರಾತುರಿಯಲ್ಲಿ ಫೆ. 5ಕ್ಕೆ ತೀರ್ಮಾನ ತೆಗೆದುಕೊಂಡಿದ್ದಾರೆ. ಫೆ.8ರಂದು ನೋಟಿಫಿಕೇಶನ್ ಹಾಕಿದ್ದಾರೆ. 23ರಂದು ಎಂದು ಹೇಳಿದರೂ ಅದಕ್ಕೂ ಮೊದಲೇ ಎಂದರೆ ಕೇವಲ 14- 15 ದಿನಗಳಲ್ಲಿ ಪ್ರಕ್ರಿಯೆ ಮುಗಿಸಿದ್ದಾರೆ. ಇದಾದ ಬಳಿಕ ಆರ್‍ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಇದನ್ನು ಬೆಳಕಿಗೆ ತಂದರು. ಅದು ದೊಡ್ಡ ಸುದ್ದಿಯಾಯಿತು. ನಾನು ಪ್ರತಿಪಕ್ಷ ನಾಯಕನಾಗಿ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.

ಸಚಿವರೊಬ್ಬರ ಹೆಸರು ಬಂದಿದೆ ಎಂದು ಹೇಳಿದ್ದು ನಿಜ. ದೂರನ್ನೂ ಕೊಟ್ಟಿದ್ದೇನೆ. ಸಚಿವ ಎಂ.ಬಿ.ಪಾಟೀಲ ಅವರು ಒಂದೇ ವಿಳಾಸದಲ್ಲಿ ಸೋಲಾಪುರ ರಸ್ತೆ, ಕೆಎಚ್‍ಬಿ ಕಾಲೊನಿ ಎಂದು ನಮೂದಿಸಿ 5-6 ಸೈಟ್‍ಗಳನ್ನು ಬೇರೆ ಬೇರೆ ಹೆಸರಿನಲ್ಲಿ ಪಡೆದಿದ್ದಾರೆ. ಒಂದೇ ಕುಟುಂಬದ ಸಚಿವರು ಇರುವ ಒಂದು ಟ್ರಸ್ಟಿಗೆ ಬೆಲೆಬಾಳುವ ಪ್ರದೇಶದ 5 ಎಕರೆ ಸೈಟನ್ನು ಏರೋಸ್ಪೇಸ್ ಉದ್ದೇಶಕ್ಕೆ ಕೊಟ್ಟಿದ್ದಾರೆ. ಅದಲ್ಲದೆ, ಎಂ.ಬಿ.ಪಾಟೀಲರ ಮಗ ಎಂಬ ಅನುಮಾನದ ವ್ಯಕ್ತಿಗೆ 302ನೇ ಡೆಫಡಿಲ್ ಅಪಾರ್ಟ್‍ಮೆಂಟ್‍ನಲ್ಲಿ 2 ಸೈಟ್ ಕೊಟ್ಟಿದ್ದಾರೆ. ಒಂದೇ ವಿಳಾಸ ಇದ್ದರೂ ಇಬ್ಬರಿಗೆ ನೀಡಿದ್ದಾರೆ. ಬೇರೆಯವರಿಗೆ ಸಣ್ಣಸಣ್ಣ ಸೈಟ್ ಕೊಟ್ಟಿದ್ದಾರೆ ಎಂದು ಟೀಕಿಸಿದರು.
ಎಲ್ಲವೂ ಬಿಜಾಪುರವೇ; ಬೇನಾಮಿ ಹೆಸರಿನಲ್ಲಿ ಪಡೆದಿದ್ದಾರೆ ಎಂದು ಆಕ್ಷೇಪಿಸಿದರು. ನಮಗೆ ಕಾಮನ್‍ಸೆನ್ಸ್ ಇಲ್ಲ ಎಂದು ಮಾನ್ಯ ಪ್ರಿಯಾಂಕ್ ಖರ್ಗೆಯವರು ಹೇಳಿದ್ದಾರೆ. 150 ಶಾಸಕರು ತಮ್ಮ ಅಹವಾಲಿನೊಂದಿಗೆ ಮಾನ್ಯ ರಾಜ್ಯಪಾಲರ ಬಳಿ ಹೋಗಿದ್ದರು. ಅವರು ವಾಪಸ್ ಬಂದ ಬಳಿಕ ಏನಾಗಿದೆ ಎಂದು ಹೇಳಿಲ್ಲ. ರಾಜ್ಯಪಾಲರು ಕೇಸುಗಳ ವಿಚಾರಣೆ ನಡೆಯುವ ಕುರಿತು ಹೇಳಿರುತ್ತಾರೆ. ಕಡತಗಳನ್ನು ಸಂಬಂಧಿತ ಇಲಾಖೆಗೆ ಕಳಿಸಿದ್ದಾರೆ. ಅಲ್ಲಿ ಅವರು ಪರಿಶೀಲಿಸಬೇಕು. ಇದರ ಬಗ್ಗೆ ಸಚಿವರಿಗೆ ಜ್ಞಾನವೇ ಇಲ್ಲ. ಫೈಲ್ ವಾಪಸ್ ಹೋದುದು ಅವರಿಗೆ ಗೊತ್ತೇ ಇಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಜಾತಿ ರಕ್ಷಣೆ ಪಡೆಯಲು ನಾನು ಸಿದ್ಧನಿಲ್ಲ..
ದಲಿತ ಎಂದು ಪದೇಪದೇ ಹೇಳಿಕೊಂಡು ಜಾತಿ ರಕ್ಷಣೆ ಪಡೆಯಲು ನಾನು ಸಿದ್ಧನಿಲ್ಲ. ಬಹಳ ನಿಂದನೆ ಮಾಡಿದ್ದಾರೆ. ಆದರೆ, ಜಾತಿ ನಿಂದನೆ ಮಾಡಿದ್ದಾಗಿ ನಾನು ಹೇಳಿಲ್ಲ. ನನ್ನ ಸ್ಥಾನವನ್ನು ನಿಂದಿಸಿದ್ದಾಗಿ ಹೇಳಿದ್ದೇನೆ; ಈಗಲೂ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು. ನೀವು ನಿಂದಿಸಿದ ಕುರಿತು ಜನರು ತೀರ್ಮಾನ ಮಾಡುತ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಎಚ್ಚರಿಸಿದರು.

ರಾಜಕೀಯ ಸೇಡು ತೀರಿಸಿಕೊಳ್ಳಲು..
ಕೇವಲ ರಾಜಕೀಯ ಸೇಡು ತೀರಿಸಿಕೊಳ್ಳಲು ಗವರ್ನರ್ ಅವರ ಕಚೇರಿ ಮೇಲೆ ಎಷ್ಟೊಂದು ದಿನಗಳಿಂದ ಅವರು ಪ್ರಹಾರ ಮಾಡುತ್ತಿದ್ದಾರೆ ಎಂದು ಕೇಳಿದರು. ಮಾನ್ಯ ರಾಜ್ಯಪಾಲರನ್ನು ಎಷ್ಟು ರೀತಿಯಲ್ಲಿ ನಿಂದಿಸಿದ್ದಾರೆ? ನಿಂದಿಸುತ್ತಾ ಇದ್ದಾರೆ ಎಂದು ಪ್ರಶ್ನಿಸಿದರು. ಫೈಲ್ ಎಲ್ಲಿದೆ ಎಂದು ನೋಡಿಕೊಳ್ಳಬೇಕಿತ್ತಲ್ಲವೇ? ಯಾಕೆ ಸರಕಾರ ನಡೆಸುತ್ತೀರಿ ಎಂದು ಸವಾಲು ಹಾಕಿದರು. ಕೆಐಎಡಿಬಿ ನಿವೇಶನಗಳನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಿಸಿಕೊಂಡ ವಿಷಯ, ಸಿದ್ಧಾರ್ಥ ವಿಹಾರ ಟ್ರಸ್ಟಿಗೆ ಕೊಟ್ಟ ಸೈಟ್ ವಿಚಾರದಲ್ಲಿ ಒಂದು- ಹೀಗೆ ಎರಡು ಕಡತ ಇದೆ ಎಂದಿದ್ದರೂ ಗವರ್ನರ್ ಅವರನ್ನು ಚುಚ್ಚುತ್ತೀರಲ್ಲವೇ ಎಂದು ಕೇಳಿದರು.
ಬಿಜೆಪಿ-ಆರೆಸ್ಸೆಸ್ ಸಂಚು ಮಾಡಿ ಛಲವಾದಿಯವರ ಬಳಿ ಮಾತನಾಡಿಸುವ ಕುರಿತ ಪ್ರಿಯಾಂಕ್ ಖರ್ಗೆಯವರ ಆರೋಪದ ಬಗೆಗಿನ ಪ್ರಶ್ನೆಗೆ ಉತ್ತರಿಸಿದರು; ನಾನು ಸರಕಾರದಲ್ಲಿದ್ದು ತಪ್ಪು ಮಾಡಿದ್ದರೆ, ಪ್ರಿಯಾಂಕ್ ಖರ್ಗೆಯವರು ನನ್ನ ಸ್ಥಾನದಲ್ಲಿ ಇದ್ದರೆ ನನ್ನನ್ನು ಸುಮ್ಮನೆ ಬಿಡುತ್ತಿದ್ದರೇ ಎಂದು ಮರುಪ್ರಶ್ನೆ ಹಾಕಿದರು. ಹೋಗಲಿ ಅವರು ದಲಿತರು ಎಂದು ನನ್ನನ್ನು ಬಿಟ್ಟು ಬಿಡುತ್ತಿದ್ದರೇ ಎಂದೂ ಕೇಳಿದರು. ನನ್ನದು ದಲಿತರ ಸ್ಥಾನ ಅಲ್ಲ; ನನ್ನದು ವಿಪಕ್ಷದ ಸ್ಥಾನ. ಅಲ್ಲಿ ಯಾರೇ ಇದ್ದರೂ ಜಾತಿ ನೋಡಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಈಗ ಹೇಳಿ..ಲಜ್ಜೆಗೆಟ್ಟವರು ಯಾರು..?
ಬಬಲೇಶ್ವರದಲ್ಲಿ ಅವರು ಚುನಾವಣೆಗೆ ನಿಂತಿದ್ದರು. ಚುನಾವಣೆ ವೆಚ್ಚಕ್ಕೆ ಬಾಗ್ಮನೆ ಡೆವಲಪರ್ಸ್‍ನಿಂದ 4 ಕೋಟಿ ಸಾಲ ಪಡೆದುದಾಗಿ ತಿಳಿಸಿದ್ದರು. ಇದರ ನಿರ್ದೇಶಕರಾಗಿ ರಾಮಕೃಷ್ಣ ಅನುರಾಧಾ, ರಾಜಾ ಬಾಗ್ಮನೆ, ದಂಡಿಗಾನಹಳ್ಳಿ ವೆಂಕಟರಮಣಪ್ಪ ರಾಮಕೃಷ್ಣ ಇದ್ದಾರೆ. ಎಸ್‍ಇಜೆಡ್‍ನಲ್ಲಿ ಹೈಟೆಕ್ ಏರೋಸ್ಪೇಸ್ ಪಾರ್ಕಿಗೆ 8 ಎಕರೆ ಜಾಗವನ್ನು ಮೊನ್ನೆ ಮಂಜೂರು ಮಾಡಿದ್ದಾರೆ. ಇದು ಸುಮಾರು 160 ಕೋಟಿ ಮೌಲ್ಯದ್ದು. ಅದನ್ನು ಎಕರೆಗೆ 10 ಕೋಟಿ ಅಂದುಕೊಂಡರೂ 80 ಕೋಟಿ ಆಗುತ್ತದೆ. ಅದನ್ನು ಮೆಸರ್ಸ್ ಬಾಗ್ಮನೆ ಡೆವಲಪರ್ಸ್‍ನ ಮೆಸರ್ಸ್ ವೈಗೈ ಇನ್‍ವೆಸ್ಟ್‍ಮೆಂಟ್ಸ್ ನ ನಿರ್ದೇಶಕರಾದ ರಾಜಾ ಬಾಗ್ಮನೆ, ದಂಡಿಗಾನಹಳ್ಳಿ ವೆಂಕಟರಮಣಪ್ಪ ರಾಮಕೃಷ್ಣರಿಗೆ ಮಂಜೂರು ಮಾಡಿದ್ದಾರೆ. ಬಾಗ್ಮನೆಯೂ ಅವರದೇ; ವೈಗೈಯೂ ಅವರದೇ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ಬಾಗ್ಮನೆ ನಿರ್ದೇಶಕರು ಅವರೇ? ವೈಗೈ ನಿರ್ದೇಶಕರೂ ಅವರೇ. ಇದು ಯಾವ ರೀತಿಯ ಸಂಬಂಧ ಎಂದು ಪ್ರಶ್ನಿಸಿದರು. ನನ್ನನ್ನು ಲಜ್ಜೆಗೆಟ್ಟವರು ಎಂದಿದ್ದೀರಿ; ಚಿಂತೆ ಇಲ್ಲ. ಈಗ ಹೇಳಿ..ಲಜ್ಜೆಗೆಟ್ಟವರು ಯಾರು ಎಂದು ಕೇಳಿದರು.

ಮಾಜಿ ಸಚಿವ ಎನ್.ಮಹೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಹೆಚ್ಚಿನ ಸುದ್ದಿ