ಬೆಂಗಳೂರು, ಅಕ್ಟೋಬರ್ 01, : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ದಿನಾಚರಣೆಯ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ-ಕರ್ನಾಟಕ’ 2026 ಗೆ ಸುಪ್ರಸಿದ್ಧ ಸಮಾಜ ಸೇವಕ ‘ಡಾ. ವೂಡೇ ಪಿ. ಕೃಷ್ಣ’ ಅವರು ಭಾಜನರಾಗಿದ್ದಾರೆ.
ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯಾದ್ಯಂತ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಹಾಗೂ ಗಾಂಧೀಜಿಯವರ ತತ್ವಾದರ್ಶಗಳನ್ನು ಪಾಲಿಸುತ್ತಿರುವ ಶ್ರೇಷ್ಠ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶ್ರೀ ಟಿ. ಜಿ. ಶಿವಶಂಕರೇಗೌಡ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯು ದಿನಾಂಕ 23/09/2026 ರಂದು ಸಭೆ ನಡೆಸಿ ಪರಿಶೀಲನೆ ನಡೆಸಿತು. ಪ್ರಶಸ್ತಿಗಾಗಿ ಸ್ವೀಕರಿಸಲಾಗಿದ್ದ ಒಟ್ಟು 06 ಸಂಸ್ಥೆಗಳು ಹಾಗೂ 24 ವ್ಯಕ್ತಿಗಳ ಅರ್ಹತೆ ಹಾಗೂ ಸೇವಾ ವಿವರಗಳನ್ನು ಸುದೀರ್ಘವಾಗಿ ಪರಿಶೀಲಿಸಿದ ಸಮಿತಿಯು, ಡಾ. ವೂಡೇ ಪಿ. ಕೃಷ್ಣ ಅವರನ್ನು 2026ನೇ ಸಾಲಿನ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಆಯ್ಕೆ ಸಮಿತಿಯ ವರದಿ ಹಾಗೂ ಶಿಫಾರಸ್ಸನ್ನು ಅಂಗೀಕರಿಸಿರುವ ಘನ ಸರ್ಕಾರವು, ಡಾ. ವೂಡೇ ಪಿ. ಕೃಷ್ಣ ಅವರಿಗೆ ಈ ಪ್ರಶಸ್ತಿಯನ್ನು ಘೋಷಿಸಲು ಹರ್ಷ ವ್ಯಕ್ತಪಡಿಸಿದೆ.
ಅಕ್ಟೋಬರ್ 2 ರಂದು ಬೆಳಿಗ್ಗೆ 11 ಗಂಟೆಗೆ ಗಾಂಧಿ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಶ್ರೀ ಎಂ.ಎನ್.ಅನುಚೇತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

