ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸುತ್ತೋಲೆ ಹೊರಡಿಸಿದ್ದು, ಸ್ಥಳೀಯ ಸಂಸ್ಥೆಗಳು ಅನುಷ್ಠಾನ ಮಾಡಬೇಕಾಗುತ್ತದೆ. ಪ್ರಜ್ಞಾವಂತ ನಾಗರಿಕರು ದೀಪದಿಂದ ದೀಪ ಹಚ್ಚಿ ದೀಪಾವಳಿ ಆಚರಿಸಬೇಕು. ಪ್ರಕೃತಿ ಪರಿಸರ ಉಳಿಸಬೇಕು– ಈಶ್ವರ ಬಿ ಖಂಡ್ರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
ಬೆಂಗಳೂರು, ಅ.26: ಪಟಾಕಿ ಮೇಲಿನ ನಿರ್ಬಂಧ ಸುಪ್ರೀಂಕೋರ್ಟ್ ಆದೇಶದ ಪಾಲನೆಯೇ ಹೊರತು ರಾಜ್ಯ ಸರ್ಕಾರದ ಸ್ವಯಂ ನಿರ್ಧಾರವಲ್ಲ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಹಿಂದೂ ಹಬ್ಬಗಳಿಗೆ ಮಾತ್ರ ಇವರ ಪೌರುಷ, ಪಟಾಕಿ ಹೊಡೆಯೋರು ಹೊಡೀತಾರೆ, ಯಾರೂ ಏನೂ ಮಾಡಕ್ಕೆ ಆಗಲ್ಲ. ಈ ಆದೇಶ ಕಾಗದದ ಹುಲಿ ಎಂಬ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ತಿರುಗೇಟು ನೀಡಿರುವ ಅವರು, ಸುಪ್ರೀಂಕೋರ್ಟ್ ತೀರ್ಪನ್ನೇ ಕಾಗದದ ಹುಲಿ ಎನ್ನುವ ಜೋಶಿ ಅವರಿಗೆ ಸಚಿವರಾಗಿ ಮುಂದುವರಿಯಲು ಅರ್ಹತೆಯೇ ಇಲ್ಲ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ರಿಟ್ ಅರ್ಜಿ (ಸಿವಿಲ್) ಸಂಖ್ಯೆ 728 -2015ರಲ್ಲಿ ದೀಪಾವಳಿ ಹಬ್ಬದ ದಿನಗಳಲ್ಲಿ ಅಥವಾ ಗುರುಪೂರಬ್ ನಂತಹ ಬೇರೆ ಹಬ್ಬದ ದಿನಗಳಲ್ಲಿ ರಾತ್ರಿ 8ರಿಂದ ರಾತ್ರಿ 10ಗಂಟೆಯವರಗೆ ಮಾತ್ರವೇ ಪಟಾಕಿ ಸಿಡಿಸಬೇಕು ಎಂದು ತೀರ್ಪು ನೀಡಿದೆ. ಅದರ ಅನುಷ್ಠಾನ ಮಾಡಬೇಡಿ ಎಂದು ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಲಿ ಎಂದು ಸವಾಲು ಹಾಕಿದ್ದಾರೆ.
ಕೋರ್ಟ್ 125 ಡೆಸಿಬಲ್ ಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಸಿಡಿಸಬಾರದು ಎಂದೂ ತೀರ್ಪು ನೀಡಿದೆ. ಸರ್ವೋಚ್ಛ ನ್ಯಾಯಾಲಯ ಆದೇಶ ಪಾಲನೆ ರಾಜ್ಯ ಸರ್ಕಾರದ ಕರ್ತವ್ಯವಾಗಿದ್ದು ನಾವು ಅದನ್ನು ಅನುಷ್ಠಾನ ಮಾಡುತ್ತಿದ್ದೇವೆ. ಬಿಜೆಪಿಯವರಿಗೆ ನ್ಯಾಯಾಲಯದ ಮೇಲೆ ಗೌರವ ಇಲ್ಲ. ಹೀಗಾಗಿ ಇಂತಹ ಹೇಳಿಕೆ ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಾರೆ. ದ್ವೇಷ ಬಿತ್ತುತ್ತಾರೆ ಎಂದು ಹೇಳಿದ್ದಾರೆ.
ಅನಗತ್ಯವಾಗಿ ಪ್ರಾರ್ಥನಾ ಮಂದಿರಗಳ ಬಗ್ಗೆ ಮಾತನಾಡಿ ಎರಡು ಕೋಮಿನ ಜನರ ನಡುವೆ ದ್ವೇಷ ಹುಟ್ಟುಹಾಕುವ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು ಎಂದೂ ಈಶ್ವರ ಖಂಡ್ರೆ ಕಿಡಿ ಕಾರಿದ್ದಾರೆ.