ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಹೊಸ ನಾಟಕಗಳು ಶುರುವಾಗುತ್ತವೆ. “ದೇಶವೇ ಮೊದಲು”, “ಪಕ್ಷವೇ ಉಸಿರು” ಎಂಬ ಭಾವನಾತ್ಮಕ ಘೋಷಣೆಗಳ ಹಿಂದೆ ಅಡಗಿರುವ ಅಸಲಿ ಸತ್ಯಗಳು ಈಗ ಜನಸಾಮಾನ್ಯರ ಚರ್ಚೆಗೆ ಗ್ರಾಸವಾಗಿವೆ.
ಶ್ರೀಮಂತ ನಾಯಕರು, ಶ್ರಮಿಕ ಕಾರ್ಯಕರ್ತರು:
ಒಂದೆಡೆ ಎಕರೆಗಟ್ಟಲೆ ತೋಟ, ನಗರಗಳಲ್ಲಿ ಐಷಾರಾಮಿ ಬಂಗಲೆಗಳು, ವಿದೇಶದಲ್ಲಿ ಓದುತ್ತಿರುವ ಮಕ್ಕಳು ಮತ್ತು ಕೋಟ್ಯಂತರ ರೂಪಾಯಿ ವಹಿವಾಟಿನ ಉದ್ಯಮಗಳನ್ನು ಹೊಂದಿರುವ ರಾಜಕಾರಣಿಗಳು; ಇನ್ನೊಂದೆಡೆ ಇವರ ಒಂದೇ ಒಂದು ಕರೆಗೆ ಓಗೊಟ್ಟು ಬೀದಿಗೆ ಇಳಿಯುವ ಸಾಮಾನ್ಯ ಯುವಜನತೆ. ನಾಯಕರ ಆಸ್ತಿ ಪ್ರತಿ ಚುನಾವಣೆಯಲ್ಲೂ ಏರುತ್ತಲೇ ಸಾಗುತ್ತದೆ, ಆದರೆ ಅವರ ಬೆನ್ನಿಗೆ ನಿಂತ ಕಾರ್ಯಕರ್ತನ ಬದುಕು ಮಾತ್ರ ಅಯೋಮಯವಾಗಿಯೇ ಉಳಿಯುತ್ತಿದೆ.
ಭಾವನಾತ್ಮಕ ಅಸ್ತ್ರಗಳ ಬಳಕೆ:
ಅಧಿಕಾರ ಹಿಡಿಯುವ ಏಕೈಕ ಉದ್ದೇಶದಿಂದ ಧರ್ಮ, ಹಿಂದುತ್ವ ಮತ್ತು ದೇಶಪ್ರೇಮದ ಹೆಸರಿನಲ್ಲಿ ಯುವಕರನ್ನು ಸೆಳೆಯುವ ತಂತ್ರಗಳು ಎಗ್ಗಿಲ್ಲದೆ ನಡೆಯುತ್ತಿವೆ. “ಕಾರ್ಯಕರ್ತರೇ ನನ್ನ ದೇವರು” ಎಂದು ವೇದಿಕೆಯ ಮೇಲೆ ಅಬ್ಬರಿಸುವ ನಾಯಕರು, ಅಧಿಕಾರ ಸಿಕ್ಕ ಮೇಲೆ ಅದೇ ಕಾರ್ಯಕರ್ತರನ್ನು ಗುರುತಿಸುವುದೂ ಇಲ್ಲ ಎಂಬುದು ಕಹಿ ಸತ್ಯ.
ಚುನಾವಣಾ ಗಿಮಿಕ್:
ಐದು ವರ್ಷಗಳ ಕಾಲ ಜನರ ಕಷ್ಟಕ್ಕೆ ಸಿಗದ ನಾಯಕರು, ಮತದಾನದ ದಿನಗಳು ಹತ್ತಿರ ಬರುತ್ತಿದ್ದಂತೆ ಜನರ ಮನೆ ಬಾಗಿಲಿಗೆ ಬರುತ್ತಾರೆ. ಕ್ಷೇತ್ರದ ಅಭಿವೃದ್ಧಿಗಿಂತ ಹೆಚ್ಚಾಗಿ ‘ಗಿಮಿಕ್’ಗಳ ಮೂಲಕವೇ ಮತ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ.
ಜಾಗೃತಿಯೇ ಪರಿಹಾರ:
ರಾಜಕಾರಣಿಗಳ ಐಷಾರಾಮಿ ಜೀವನ ಮತ್ತು ಅವರ ಮಾತಿನ ಮೋಡಿಗೆ ಮರುಳಾಗುವ ಮುನ್ನ ಯುವಜನತೆ ಯೋಚಿಸಬೇಕಿದೆ. ನಮ್ಮ ಕ್ಷೇತ್ರದ ಅಭಿವೃದ್ಧಿ ಮತ್ತು ನಮ್ಮ ಭವಿಷ್ಯ ಯಾರ ಕೈಯಲ್ಲಿದೆ ಎಂಬ ಪ್ರಜ್ಞೆ ಮತದಾರರಲ್ಲಿ ಮೂಡದಿದ್ದರೆ, ಇದು ‘ಕ್ಷೇತ್ರದ ದುರ್ದೈವ’ವಾಗಿ ಮುಂದುವರಿಯುವುದರಲ್ಲಿ ಸಂಶಯವಿಲ್ಲ

