KRGRV
Thursday, July 9, 2026
Homeರಾಜಕೀಯಬಾಕಿ ಎಂಎಸ್‌ಪಿ ಅನುದಾನ ಬಿಡುಗಡೆಗೆ ಕೇಂದ್ರದ ಸಮ್ಮತಿ: ಸಚಿವ ಕೆ.ಹೆಚ್. ಮುನಿಯಪ್ಪ ಭೇಟಿ

ಬಾಕಿ ಎಂಎಸ್‌ಪಿ ಅನುದಾನ ಬಿಡುಗಡೆಗೆ ಕೇಂದ್ರದ ಸಮ್ಮತಿ: ಸಚಿವ ಕೆ.ಹೆಚ್. ಮುನಿಯಪ್ಪ ಭೇಟಿ

ನವದೆಹಲಿ:ರಾಜ್ಯದ ರೈತರಿಂದ ಖರೀದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ಬಾಕಿ ಇರುವ ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡುವಂತೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಅವರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಲ್ಲಿ ಬಲವಾಗಿ ಪ್ರತಿಪಾದಿಸಿದರು.

ನವದೆಹಲಿಯಲ್ಲಿ ಇಂದು ಕೇಂದ್ರ ಸಚಿವರನ್ನು ಭೇಟಿಯಾದ ಸಚಿವ ಮುನಿಯಪ್ಪ, ರಾಜ್ಯದ ರೈತರಿಗೆ ಸಕಾಲದಲ್ಲಿ ಹಣ ಪಾವತಿಸಲು ಅನುದಾನದ ಅವಶ್ಯಕತೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಸಚಿವರ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ, ಮೊದಲ ಹಂತವಾಗಿ ₹190.10 ಕೋಟಿ ಬಿಡುಗಡೆ ಮಾಡಿದೆ.

ಕೆಎಂಎಸ್ 2025-26: ಈ ಅವಧಿಯಲ್ಲಿ ರಾಜ್ಯ ಸರ್ಕಾರ ₹4,422.17 ಕೋಟಿ ಮೌಲ್ಯದ ರಾಗಿ, ಜೋಳ ಮತ್ತು ಭತ್ತವನ್ನು ಖರೀದಿಸಿದ್ದು, ಇದರಲ್ಲಿ ಬಾಕಿ ಉಳಿದಿರುವ ₹4,232.07 ಕೋಟಿಯನ್ನು ಶೀಘ್ರ ಬಿಡುಗಡೆ ಮಾಡುವಂತೆ ಕೋರಲಾಯಿತು.

ಹಳೆಯ ಬಾಕಿ:2009-10ರಿಂದ 2024-25ರ ಅವಧಿಯವರೆಗೆ ಬಾಕಿ ಇರುವ ₹1,902.58 ಕೋಟಿ ಎಂಎಸ್‌ಪಿ ಮರುಪಾವತಿಯನ್ನು ಬಿಡುಗಡೆ ಮಾಡಲು ಮನವಿ ಮಾಡಲಾಗಿದೆ.

ಸಬ್ಸಿಡಿ ಹಕ್ಕುಪತ್ರ: ಕೆಎಂಎಸ್ 2022-23ರ ₹375.99 ಕೋಟಿ ತಾತ್ಕಾಲಿಕ ಸಬ್ಸಿಡಿ ಹಕ್ಕುಪತ್ರವನ್ನು ಶೀಘ್ರ ಮಂಜೂರು ಮಾಡುವಂತೆ ಒತ್ತಾಯಿಸಲಾಗಿದೆ.

ಕೇಂದ್ರ ಸಚಿವರ ಭರವಸೆ:
ಸಚಿವರ ಮನವಿಯನ್ನು ಗಮನಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ₹1,902.58 ಕೋಟಿ ಬಾಕಿ ಮರುಪಾವತಿ ಪ್ರಕರಣವನ್ನು ಆದ್ಯತೆಯ ಮೇರೆಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, 2025-26ರ ಮರುಪಾವತಿ ಹಕ್ಕುಪತ್ರಗಳು ಸಲ್ಲಿಕೆಯಾದ ತಕ್ಷಣ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಹೆಚ್. ಮುನಿಯಪ್ಪ, ಕೇಂದ್ರ ಸರ್ಕಾರದ ಸಕಾರಾತ್ಮಕ ನಿರ್ಧಾರದಿಂದ ರಾಜ್ಯದಲ್ಲಿ ಎಂಎಸ್‌ಪಿ ಖರೀದಿ ಕಾರ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲಿವೆ ಮತ್ತು ರೈತರಿಗೆ ಹಣ ಪಾವತಿಸಲು ದಾರಿ ಸುಗಮವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹೆಚ್ಚಿನ ಸುದ್ದಿ