ರೈತರ ಜಮೀನುಗಳ ಮೇಲೆ ಕಣ್ಣು ಹಾಕಿರುವ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜನಾಂದೋಲನ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಕೆ
ಕೋಲಾರ: ರಾಜ್ಯದಾದ್ಯಂತ ಮಳೆಯ ಕೊರತೆಯಿಂದ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಬಿತ್ತನೆ ಮಾಡಿದ್ದರೂ ಕೈಗೆ ಬೆಳೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಟೊಮ್ಯಾಟೊ, ಮಾವು ಸೇರಿದಂತೆ ವಿವಿಧ ಬೆಳೆಗಳ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಬೇಕಾದ ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಕೋಲಾರ ಹೊರವಲಯದ ರತ್ನ ಕನ್ವೆನ್ಷನ್ ಹಾಲ್ನಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರ ಚುನಾವಣಾ ಪೂರ್ವಭಾವಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಗೆ ಈಗಾಗಲೇ ಪ್ರವಾಸ ಕೈಗೊಂಡಿದ್ದು, ರೈತರ ವಾಸ್ತವ ಸ್ಥಿತಿಯನ್ನು ಸ್ವತಃ ಗಮನಿಸಿದ್ದೇನೆ ಎಂದರು.
ರೈತರ ಸಂಕಷ್ಟಕ್ಕೆ ತಕ್ಷಣ ಪರಿಹಾರ ನೀಡಲಿ
ರಾಜ್ಯದಲ್ಲಿ ಬರದ ಪರಿಸ್ಥಿತಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ತಕ್ಷಣ ಪರಿಹಾರ ಮತ್ತು ಅಗತ್ಯ ನೆರವು ನೀಡಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. ಕೇಂದ್ರ ಸರ್ಕಾರದ ನೆರವು ಕೇಳುವುದಕ್ಕೂ ಮುನ್ನ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.
ರೈತರು ಬೆಳೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಸಾಲದ ಹೊರೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ರೈತರ ಸಾಲಮನ್ನಾ ಸೇರಿದಂತೆ ಅಗತ್ಯ ಪರಿಹಾರ ಕ್ರಮಗಳ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಸಚಿವರು ಮತ್ತು ಶಾಸಕರು ದೆಹಲಿ ಪ್ರವಾಸ ಹಾಗೂ ರಾಜಕೀಯ ಚಟುವಟಿಕೆಗಳಿಗೆ ನೀಡುವ ಸಮಯವನ್ನು ರೈತರ ಸಂಕಷ್ಟ ಪರಿಹಾರಕ್ಕೆ ನೀಡಬೇಕಿತ್ತು ಎಂದು ಅವರು ಟೀಕಿಸಿದರು.
“ಕೇಂದ್ರ ಸರ್ಕಾರವನ್ನು ಕೇಳುವುದಕ್ಕೂ ಮುನ್ನ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ಘೋಷಿಸಲಿ. ಮೊದಲು ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಿ, ನಂತರ ಕೇಂದ್ರ ಸರ್ಕಾರದ ನೆರವು ಕೇಳಲಿ. ತಡ ಮಾಡದೆ ಮುಖ್ಯಮಂತ್ರಿ ಅವರು ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು,” ಎಂದು ವಿಜಯೇಂದ್ರ ಆಗ್ರಹಿಸಿದರು.
ಬಡವರ ಪಡಿತರಕ್ಕೂ ಕತ್ತರಿ; ರಾಜ್ಯಾದ್ಯಂತ ಜನಾಂದೋಲನ
ಕಾಂಗ್ರೆಸ್ ಸರ್ಕಾರದ ನೀತಿಗಳಿಂದ ಬಡವರ ಬದುಕಿನ ಮೇಲೆ ಮತ್ತಷ್ಟು ಹೊರೆ ಬೀಳುತ್ತಿದೆ. ಪಡಿತರ ಚೀಟಿಗಳಿಗೂ ಕತ್ತರಿ ಹಾಕುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ರೈತರು, ಬಡವರು, ಹೈನುಗಾರರು ಹಾಗೂ ಯುವಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಬಿಜೆಪಿ ರಾಜ್ಯಾದ್ಯಂತ ಜನಾಂದೋಲನ ನಡೆಸಲಿದೆ. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನರ ಧ್ವನಿಯಾಗಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಸಿದರು.
ರಿಯಲ್ ಎಸ್ಟೇಟ್ಗಿಂತ ರೈತರ ಬದುಕು ಮುಖ್ಯ
ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ಆದ್ಯತೆಗಳ ಕುರಿತು ವಾಗ್ದಾಳಿ ನಡೆಸಿದ ವಿಜಯೇಂದ್ರ, ರೈತರು ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಆದ್ಯತೆ ನೀಡುವ ಬದಲು ಸರ್ಕಾರ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಆರೋಪಿಸಿದರು.
“ಅಧಿಕಾರ ಶಾಶ್ವತವಲ್ಲ. ಅಧಿಕಾರ ಕಳೆದುಕೊಳ್ಳುವ ದಿನ ಬರುತ್ತದೆ. ಆದರೆ ರೈತರ ಜಮೀನು, ಬದುಕು ಮತ್ತು ಭವಿಷ್ಯ ಶಾಶ್ವತವಾಗಿ ಉಳಿಯಬೇಕು. ಮುಖ್ಯಮಂತ್ರಿ ಅವರು ರಿಯಲ್ ಎಸ್ಟೇಟ್ ಯೋಜನೆಗಳಿಗಿಂತ ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು,” ಎಂದು ಅವರು ಹೇಳಿದರು.
ಬಿಡದಿ ಟೌನ್ಶಿಪ್: ರೈತರ ಹೋರಾಟಕ್ಕೆ ಬಿಜೆಪಿ–ಜೆಡಿಎಸ್ ಬೆಂಬಲ
ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರ ಜಮೀನುಗಳನ್ನು ಬಲವಂತವಾಗಿ ಪಡೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ರೈತರನ್ನು ಹೆದರಿಸಿ ಹಾಗೂ ಒತ್ತಡ ಹೇರಿ ಜಮೀನುಗಳನ್ನು ಬಿಡಿಸುವ ಯಾವುದೇ ಪ್ರಯತ್ನವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಡಿಎಸ್ ನಡೆಸುತ್ತಿರುವ ಪಾದಯಾತ್ರಗೆ ನಮ್ಮ ವಿಪಕ್ಷ ನಾಯಕರಾದ ಆರ್. ಅಶೋಕ್ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭಾಗಿಯಾಗಿದ್ದಾರೆ ಈ ಹೋರಾಟವನ್ನು ಆರಂಭಿಸಿರುವುದು ರೈತರೇ. ರೈತರ ಪರವಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಬೆಂಬಲವಾಗಿ ನಿಲ್ಲಲಿವೆ ಎಂದು ಅವರು ತಿಳಿಸಿದರು.
“ರೈತರನ್ನು ಒತ್ತಾಯಪೂರ್ವಕವಾಗಿ ಒಕ್ಕಲೆಬ್ಬಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಬಾರದು. ರೈತರ ಪರವಾಗಿ ಸರ್ಕಾರ ನಿಲ್ಲಬೇಕು. ರೈತರ ಹೋರಾಟಕ್ಕೆ ಬಿಜೆಪಿ ಮತ್ತು ಜೆಡಿಎಸ್ ಬೆಂಬಲ ನೀಡಿವೆ. ಈ ವಿಚಾರವನ್ನು ವಿಧಾನಮಂಡಲದ ಅಧಿವೇಶನದಲ್ಲಿಯೂ ಪ್ರಸ್ತಾಪಿಸಿ ಸರ್ಕಾರವನ್ನು ಉತ್ತರದಾಯಿಯನ್ನಾಗಿ ಮಾಡುತ್ತೇವೆ,” ಎಂದರು.
ರೈತರ ಜಮೀನು ಕಬಳಿಸಲು ಮುಂದಾದರೆ ರಾಜ್ಯಾದ್ಯಂತ ಹೋರಾಟ
ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಬಾರದು ಎಂದು ಒಂದು ಕಡೆ ಸರ್ಕಾರ ಹೇಳುತ್ತದೆ. ಮತ್ತೊಂದೆಡೆ ರೈತರ ಜಮೀನುಗಳನ್ನೇ ಕಬಳಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ರೈತರ ಜಮೀನುಗಳ ಮೇಲೆ ಯಾವುದೇ ರೀತಿಯ ದಬ್ಬಾಳಿಕೆ ನಡೆದರೆ ಬಿಜೆಪಿ ಅದನ್ನು ಸಹಿಸುವುದಿಲ್ಲ ಎಂದು ವಿಜಯೇಂದ್ರ ಎಚ್ಚರಿಸಿದರು.
“ರೈತರ ಜಮೀನುಗಳನ್ನು ಕಬಳಿಸುವ ಪ್ರಯತ್ನ ಮುಂದುವರಿದರೆ ರೈತರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ. ರೈತರ ಹಕ್ಕು ಮತ್ತು ಜಮೀನಿನ ರಕ್ಷಣೆಗೆ ಬಿಜೆಪಿ ಸದಾ ರೈತರ ಜೊತೆ ನಿಲ್ಲಲಿದೆ,” ಎಂದು ಅವರು ಹೇಳಿದರು.
ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಬೇಕು
ಸಚಿವ ನಾಗೇಂದ್ರ ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು ಹಾಗೂ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ವಿಜಯೇಂದ್ರ ಹೇಳಿದರು.
“ಸಚಿವರಾಗಿದ್ದ ಸಂದರ್ಭದಲ್ಲಿ ವಾಲ್ಮೀಕಿ ನಿಗಮಕ್ಕೆ ಸಂಬಂಧಿಸಿದ ನೂರಾರು ಕೋಟಿ ರೂಪಾಯಿ ಅವ್ಯವಹಾರದ ಆರೋಪಗಳು ಕೇಳಿಬಂದಿವೆ. ತೆಲಂಗಾಣದಲ್ಲಿ ಖಾತೆಗಳನ್ನು ತೆರೆದು ಹಣದ ವಹಿವಾಟು ಹಾಗೂ ನಗದು ಹಣ ಹಿಂಪಡೆದಿರುವ ಆರೋಪಗಳಿವೆ. ಪರಿಶಿಷ್ಟ ಪಂಗಡದ ಮಕ್ಕಳ ಅಭಿವೃದ್ಧಿಗೆ ಮೀಸಲಿಟ್ಟ ಹಣ ದುರ್ಬಳಕೆಯಾಗಿದೆ ಎಂಬ ಗಂಭೀರ ಆರೋಪವೂ ಇದೆ. ಇಂತಹ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಮತ್ತೆ ಸಚಿವರನ್ನಾಗಿ ಮಾಡಿರುವುದು ಖಂಡನೀಯ,” ಎಂದರು.
ಮುಖ್ಯಮಂತ್ರಿ ಅವರು ಸಚಿವ ನಾಗೇಂದ್ರ ಅವರನ್ನು ತಕ್ಷಣ ಸಚಿವ ಸಂಪುಟದಿಂದ ಕೈಬಿಡಬೇಕು. ಈ ವಿಚಾರವನ್ನು ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದಿಂದ ಉತ್ತರ ಪಡೆಯುತ್ತೇವೆ ಎಂದು ವಿಜಯೇಂದ್ರ ತಿಳಿಸಿದರು.
ನಾಗೇಂದ್ರ ಅವರ ವಿರುದ್ಧದ ಜಾರಿ ನಿರ್ದೇಶನಾಲಯದ ತನಿಖೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ತಮ್ಮದೇ ಆದ ರೀತಿಯಲ್ಲಿ ನಡೆಯುತ್ತಿವೆ. ಜಾಮೀನು ಷರತ್ತು ಉಲ್ಲಂಘನೆಯಾಗಿದೆಯೇ ಎಂಬುದನ್ನು ನ್ಯಾಯಾಲಯವೇ ತೀರ್ಮಾನಿಸಲಿದೆ ಎಂದು ಅವರು ಹೇಳಿದರು.
ಸಚಿವ ಸಂಪುಟ ವಿಸ್ತರಣೆ: ‘ರೇಟ್’ ನಿಗದಿಯಾಗಿಲ್ಲವೇ?
ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ವಿಚಾರದಲ್ಲಿಯೂ ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದರು.
“ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆದರೂ ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ವಿಚಾರದಲ್ಲಿ ಗೊಂದಲ ಮುಂದುವರಿದಿದೆ. ಸಂಪುಟ ವಿಸ್ತರಣೆಗೆ ‘ರೇಟ್’ ನಿಗದಿಯಾಗದ ಕಾರಣ ಮುಖ್ಯಮಂತ್ರಿ ಮತ್ತೆ ದೆಹಲಿಗೆ ತೆರಳುತ್ತಿದ್ದಾರೆಯೇ ಎಂಬ ಅನುಮಾನ ಜನರಲ್ಲಿ ಮೂಡಿದೆ. ಹೈಕಮಾಂಡ್ನ ಒಪ್ಪಿಗೆಗಾಗಿ ಪದೇಪದೇ ದೆಹಲಿಗೆ ತೆರಳುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ,” ಎಂದು ಅವರು ವ್ಯಂಗ್ಯವಾಡಿದರು.
ಮೇಲ್ಮನೆ ಅಧ್ಯಕ್ಷ ಸ್ಥಾನವನ್ನು ದಬ್ಬಾಳಿಕೆ ಮೂಲಕ ಕಿತ್ತುಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಒಳಜಗಳದಿಂದಾಗಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಅವರು ಆರೋಪಿಸಿದರು.
ಆರ್ಎಸ್ಎಸ್ ವಿರುದ್ಧದ ಟೀಕೆ: ಪ್ರಿಯಾಂಕ್ ಖರ್ಗೆ ಅವರಿಗೆ ವಿಜಯೇಂದ್ರ ತಿರುಗೇಟು
ಆರ್ಎಸ್ಎಸ್ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಟೀಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಆರ್ಎಸ್ಎಸ್ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ಕೊರತೆಯಿದೆ ಎಂದು ಟೀಕಿಸಿದರು.
“ನೆಹರು ಅವರ ಕಾಲದಿಂದ ರಾಜೀವ್ ಗಾಂಧಿ ಅವರ ಕಾಲದವರೆಗೂ ಆರ್ಎಸ್ಎಸ್ ಅನ್ನು ನಿಷೇಧಿಸುತ್ತೇವೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಆರ್ಎಸ್ಎಸ್ ದೇಶದಲ್ಲಿ ರಾಷ್ಟ್ರಭಕ್ತರನ್ನು ನಿರ್ಮಾಣ ಮಾಡುವ ಪವಿತ್ರ ಕಾರ್ಯದಲ್ಲಿ ದಶಕಗಳಿಂದ ತೊಡಗಿಸಿಕೊಂಡಿದೆ. ಆರ್ಎಸ್ಎಸ್ ಅನ್ನು ನಿಷೇಧಿಸುವ ಭ್ರಮೆಯಿಂದ ಪ್ರಿಯಾಂಕ್ ಖರ್ಗೆ ಹೊರಬರಬೇಕು. ಗೃಹ ಸಚಿವರಾಗಿ ಮೊದಲು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲಿ,” ಎಂದು ವಿಜಯೇಂದ್ರ ಹೇಳಿದರು.
ಅಕ್ರಮ ವಲಸಿಗರ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುತ್ತೇವೆ
ರಾಜ್ಯದಲ್ಲಿ ಅಕ್ರಮ ವಲಸಿಗರ ಕುರಿತು ಬಿಜೆಪಿ ಗಂಭೀರವಾಗಿ ಧ್ವನಿ ಎತ್ತಲಿದೆ. ಅಕ್ರಮ ವಲಸಿಗರ ವಿರುದ್ಧ ದೂರು ನೀಡಿದವರ ಮೇಲೆಯೇ ಪ್ರಕರಣ ದಾಖಲಿಸಲಾಗುತ್ತಿದೆ ಎಂಬ ಆರೋಪಗಳಿವೆ. ಈ ವಿಚಾರವನ್ನು ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದಿಂದ ಉತ್ತರ ಪಡೆಯುತ್ತೇವೆ ಎಂದು ವಿಜಯೇಂದ್ರ ತಿಳಿಸಿದರು.
ರೈತರು, ಬಡವರು ಹಾಗೂ ಯುವಕರ ಪರ ಬಿಜೆಪಿ ಹೋರಾಟ ಮುಂದುವರಿಯಲಿದೆ
ರಾಜ್ಯದಲ್ಲಿ ರೈತರು, ಬಡವರು, ಹೈನುಗಾರರು ಹಾಗೂ ಯುವಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವವರೆಗೆ ಬಿಜೆಪಿ ಹೋರಾಟ ಮುಂದುವರಿಸಲಿದೆ. ಬರ ಪರಿಸ್ಥಿತಿ, ರೈತರ ಬೆಳೆ ನಷ್ಟ, ಸಾಲದ ಹೊರೆ, ಬಡವರ ಪಡಿತರ ಸಮಸ್ಯೆ, ರೈತರ ಜಮೀನುಗಳ ರಕ್ಷಣೆ ಹಾಗೂ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ರಾಜ್ಯಾದ್ಯಂತ ಜನಾಂದೋಲನ ರೂಪಿಸಲಾಗುವುದು ಎಂದು ಬಿ.ವೈ. ವಿಜಯೇಂದ್ರ ಎಚ್ಚರಿಸಿದರು.
“ರೈತರ ಬದುಕು, ಬಡವರ ಹಿತ ಹಾಗೂ ರಾಜ್ಯದ ಜನರ ಭವಿಷ್ಯ ಬಿಜೆಪಿಗೆ ಅತ್ಯಂತ ಮುಖ್ಯ. ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಸರಿಪಡಿಸಿ ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಬೇಕು. ಇಲ್ಲವಾದರೆ ಜನರ ಪರವಾಗಿ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ,” ಎಂದು ಅವರು ಹೇಳಿದರು.

