KRGRV
Friday, August 14, 2026
Homeರಾಜಕೀಯಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 400 ಹೊಸ ಬಸ್ ಕೊಳ್ಳಲು ಸಂಪುಟ ಒಪ್ಪಿಗೆ-ಸಚಿವ ಪ್ರಿಯಾಂಕ್‌ ಖರ್ಗೆರೂ.152...

ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 400 ಹೊಸ ಬಸ್ ಕೊಳ್ಳಲು ಸಂಪುಟ ಒಪ್ಪಿಗೆ-ಸಚಿವ ಪ್ರಿಯಾಂಕ್‌ ಖರ್ಗೆರೂ.152 ಕೋಟಿ ಅಂದಾಜು ವೆಚ್ಚ; ಹಳೆಯ ಬಸ್‌ಗಳ ಬದಲಾವಣೆ, ಹೊಸ ಮಾರ್ಗಗಳ ಆರಂಭಕ್ಕೆ ಆದ್ಯತೆ

ಬೆಂಗಳೂರು, ಆಗಸ್ಟ್‌ 13: ಕಲ್ಯಾಣ ಕರ್ನಾಟಕ ಪ್ರದೇಶದ ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ವಿಶ್ವಾಸಾರ್ಹ ಸಾರಿಗೆ ಸೇವೆ ಒದಗಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಕೆಕೆಆರ್‌ಟಿಸಿ) 400 ಹೊಸ ಬಸ್‌ಗಳನ್ನು ಖರೀದಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಗೃಹ, ಮಾಹಿತಿ ಜಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 469(iii)ರ ಘೋಷಣೆಯಂತೆ ಕೆಕೆಆರ್‌ಟಿಸಿಗೆ ಹಂಚಿಕೆಯಾಗಿರುವ 400 ಬಸ್‌ಗಳನ್ನು ಖರೀದಿಸಲು ಪ್ರತಿ ಬಸ್‌ಗೆ ಅಂದಾಜು ರೂ.38 ಲಕ್ಷ ರೂ.ಗಳಂತೆ ಅಂದಾಜು ರೂ.152 ಕೋಟಿ ವೆಚ್ಚವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆ
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ನಿಗಮದ ಮೇಲೆ ಸಾರಿಗೆ ಸೇವೆಯ ಒತ್ತಡವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಬಸ್‌ಗಳ ಸೇರ್ಪಡೆ ಅಗತ್ಯವಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದ್ದಾರೆ.

ಕೆಕೆಆರ್‌ಡಿಬಿ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ
400 ಬಸ್‌ಗಳ ಖರೀದಿಗೆ ಅಗತ್ಯವಿರುವ ರೂ.152 ಕೋಟಿ ವೆಚ್ಚದಲ್ಲಿ ಶೇ.50ರಷ್ಟು ಮೊತ್ತವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಾಗೂ ಉಳಿದ ಶೇ.50ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಭರಿಸುವ ಉದ್ದೇಶ ಹೊಂದಲಾಗಿದೆ, ಕೆಕೆಆರ್‌ಡಿಬಿಯಿಂದ ಲಭ್ಯವಾಗುವ ಅನುದಾನ ಹಾಗೂ ರಾಜ್ಯ ಸರ್ಕಾರದ ಅನುದಾನವನ್ನು ಬಳಸಿಕೊಂಡು ಹಂತ ಹಂತವಾಗಿ ಬಸ್‌ಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ ಎಂದೂ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ

ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ
ಹೊಸ ಬಸ್‌ಗಳ ಸೇರ್ಪಡೆಯಿಂದ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಸುಧಾರಿಸಲು ಸಾಧ್ಯವಾಗಲಿದೆ. ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಹೊಸ ಅನುಸೂಚಿಗಳನ್ನು ಕಾರ್ಯಾಚರಣೆಗೊಳಿಸಲು, ಹಳೆಯ ಬಸ್‌ಗಳನ್ನು ಬದಲಾಯಿಸಲು ಹಾಗೂ ಸಾರಿಗೆ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಒದಗಿಸಲು ಈ ಕ್ರಮ ನೆರವಾಗಲಿದೆ ಎಂದು ಹೇಳಿರುವ ಸಚಿವ ಪ್ರಿಯಾಂಕ್‌ ಖರ್ಗೆ ಕಲ್ಯಾಣ ಕರ್ನಾಟಕ ಭಾಗದ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಉತ್ತಮ ಗುಣಮಟ್ಟದ ಸಾರಿಗೆ ಸೇವೆ ಒದಗಿಸುವ ಸರ್ಕಾರದ ಉದ್ದೇಶಕ್ಕೆ ಈ ಹೊಸ ಬಸ್‌ಗಳ ಸೇರ್ಪಡೆ ಪೂರಕವಾಗಲಿದೆ ಎಂದಿದ್ದಾರೆ.

ಹೆಚ್ಚಿನ ಸುದ್ದಿ