ವಿ.ಪಿ.ಸಿಂಗ್, ಕರ್ಪೂರಿ ಠಾಕೋರ್ ಪ್ರಶಸ್ತಿ ಪ್ರಧಾನ, ತೊಡರುಬಳ್ಳಿ ಕೃತಿ ಜನಾರ್ಪಣೆ.
ಬೆಂಗಳೂರು ಆಗಸ್ಟ್ 25; ಸಂವಿಧಾನವೆಂಬುದು ಕೇವಲ ಪುಸ್ತಕವಲ್ಲ; ಅದು ಸಮಾನತೆ, ಸ್ವಾತಂತ್ರ್ಯ, ಸಹಬಾಳ್ವೆ ಮತ್ತು ಸಾಮಾಜಿಕ ನ್ಯಾಯದ ಜೀವಂತ ಆಶಯ. ಜಾತ್ಯಾತೀತತೆ, ಬಹುತ್ವ ಮತ್ತು ಸಾಮಾಜಿಕ ನ್ಯಾಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ತಮಿಳುನಾಡು ವಿಸಿಕೆ ಪಕ್ಷದ ಮುಖಂಡ,ಸಂಸದ ತೊಲನ್ ತಿರುಮಾವಳವನ್ ಹೇಳಿದರು.
ಕರ್ನಾಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಹಾಗೂ ವಿ.ನಾಗರಾಜು ಪ್ರತಿಷ್ಠಾನ ವತಿಯಿಂದ ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಕರ್ಪೂರಿ ಠಾಕೋರ್ ಮತ್ತು ವಿ.ಪಿ.ಸಿಂಗ್ ಪ್ರಶಸ್ತಿ ಪ್ರಧಾನ ಹಾಗೂ ಡಾ.ಎಂ.ಎಸ್.ಮಣಿಯವರ ತೊಡರು ಬಳ್ಳಿ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡತ್ತಾ ಈ ವಿಷಯ ತಿಳಿಸಿದರು.
ತೊಡರುಬಳ್ಳಿ ಕೃತಿ ಜನಾರ್ಪಣೆ ಮಾಡಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್,
ಯಾವ ಸಮಾಜದಲ್ಲಿ ಪ್ರತಿಭೆಗಳಿಗೆ ಪುರಸ್ಕಾರ ಸಿಗುವುದಿಲ್ಲವೋ ಅಂತಹ ಸಮಾಜ ಆರ್ಥಿಕವಾಗಿ ಸಾಂಸ್ಕೃತಿಕವಾಗಿ ಪ್ರಗತಿ ಹೊಂದಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಹಾಗೂ ವಿ.ನಾಗರಾಜು ಪ್ರತಿಷ್ಠಾನ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ
ಜಗತ್ತಿನಲ್ಲಿ ಅನೇಕ ಕ್ರಾಂತಿಗಳು ನಡೆದುಹೋಗಿವೆ. ಸಮಾಜದಲ್ಲಿ ಒಂದಲ್ಲ ಒಂದು ಕ್ರಾಂತಿ ಬದಲಾವಣೆ ತಂದಿವೆ. ಆದರೆ ಯಾವ ಕ್ರಾಂತಿಯೂ ತರಲಾರದಷ್ಟು ಬದಲಾವಣೆಯನ್ನು ಪುಸ್ತಕಗಳು ತಂದಿವೆ ಎಂದು ಹೇಳಿದರು.
ಸಮಾಜದಲ್ಲಿ ಅಧ್ಯಯನ ಮಾಡಿ ಅಲ್ಲಿನ ಸಮಸ್ಯೆಗಳನ್ನು ಪುಸ್ತಕದಲ್ಲಿ ಬರೆದು ಜನರಲ್ಲಿ ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯವಾಗಬೇಕು. ಈ ಕೆಲಸಕ್ಕೆ ಡಾ.ಎಂ.ಎಸ್.ಮಣಿಯರು ಮಾದರಿಯಾಗಿ ನಿಲ್ಲುತ್ತಾರೆ. ಅದಕ್ಕಾಗಿ ಎಲ್ಲರೂ ಪುಸ್ತಕಗಳನ್ನು ಓದುವಂತಾಗಬೇಕು. ಇದು ಈಗಿನ ಅವಶ್ಯಕತೆ ಇದೆ.
ಮಾಧ್ಯಮಗಳು ಸಮಾಜವನ್ನು ಕಟ್ಟುವಲ್ಲಿ ಬಹುದೊಡ್ಡ ಪಾತ್ರವನ್ನು ನಿರ್ವಹಿಸುತ್ತಿವೆ. ಪ್ರಜಾಪ್ರಭುತ್ವ ಉಳಿಬೇಕಾದರೆ ಪತ್ರಕರ್ತರ ಅವಶ್ಯಕತೆ ಬಹಳಷ್ಟಿದೆ. ಬಹು ಮುಖ್ಯವಾಗಿ ಇವತ್ತು ಅನ್ಯಾಯ ಯಾವುದು ಅಂತ ಗೊತ್ತಾಗುತ್ತಿದೆ ಆದರೆ ನ್ಯಾಯ ಯಾವುದು ಗೊತ್ತಾಗುತ್ತಿಲ್ಲ, ಅಧರ್ಮ ಗೊತ್ತಾಗುತ್ತಿದೆ. ಆದರೆ ಧರ್ಮದ ದಾರಿ ಗೊತ್ತಾಗುತ್ತಿಲ್ಲ, ಸುಳ್ಳು ಗೊತ್ತಾಗುತ್ತಿದೆ ಆದರೆ ಸತ್ಯದ ದಾರಿ ತಿಳಿಯುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿನ ಲೋಪಗಳು ಮತ್ತು ಸಂವಿಧಾನ ಸರಿಯಿಲ್ಲ ಎಂದು ಹೇಳಲಾಗುತ್ತಿದೆ ಆದರೆ ಪರ್ಯಾಯ ಮಾರ್ಗ ಏನೆಂದು ಹೇಳುತ್ತಿಲ್ಲ. ಬಡವರಾಗಲಿ ಶ್ರೀಮಂತರಾಗಲಿ, ಹಿಂದುಳಿದವರಾಗಲಿ ಮುಂದುವರಿದವರಾಗಲಿ, ಗ್ರಾಮೀಣ ಪ್ರದೇಶದವರಾಗಲಿ ಅಥವಾ ನಗರ ಪ್ರದೇಶದವರಾಗಲಿ ಆದರೆ ಬಹುಪಾಲು ಜನ ಕತ್ತಲಲ್ಲಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಎಂ.ಎಸ್.ಮಣಿಯವರ ಸಮಾಜಿಕ ಪ್ರಜ್ಞೆಯುಳ್ಳ ಉತ್ತಮ ಚಿಂತಕರಾಗಿದ್ದು,ಇದರಿಂದ ಸಮಾಜಿಕ ಸಂದೇಶ ಸಾರುವ ಪುಸ್ತಕಗಳನ್ನು ಹೊರತರುತ್ತಿದ್ದಾರೆ.ಮಣಿಯವರಿಂದ ಪ್ರೇರಿತರಾಗಿ ನಾನು ಕೂಡ ಪುಸ್ತಕಗಳನ್ನು ಬರೆಯುವ ಆಸಕ್ತಿ ಹೊಂದಿರುವುದಾಗಿ ತಿಳಿಸಿದರು.
ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ದಿನೇಶ್ ಬಿ, ಸ್ಪರ್ಶ್ ಆಸ್ಪತ್ರೆ ಹೃದ್ರೋಗ ತಜ್ಞ ಡಾ.ನಾಗೇಶ್ ಬಸವರಾಜ ಹಿರಿಯ ಪತ್ರಕರ್ತರಾದ ಡಾ.ರಾಜು ಕಂಬಾರ್, ಸಮಾಜ ಸೇವಕ ರಾ.ಲಕ್ಷ್ಮೀನಾರಾಯಣ (ಚಿನ್ನಿ), ಕೆ.ಎಸ್.ಸೋಮಶೇಖರ್ (ಸೋಮಣ್ಣ) ಅವರಿಗೆ ವಿ.ಪಿ.ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ಪೂರಿ ಠಾಕೂರ್ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ.ಬಿ.ಕೆ.ರವಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಸಿದ್ದರಾಜು, ಹಿರಿಯ ಪತ್ರಕರ್ತರಾದ ಲಕ್ಷ್ಮಣ್ ಕೊಡಸೆ, ಗಂಗಾಧರ್ ಮೊದಲಿಯಾರ್, ಐ.ಎಚ್.ಸಂಗಮದೇವ, ರವಿ ಬಿದನೂರು (ರವೀಂದ್ರ.ಬಿ), ಮಿನಿತೇಜಸ್ವಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಕೃತಜ್ಞತೆ ಸಮರ್ಪಣೆ ಮಾಡಲಾಯಿತು.
ತೊಡರುಬಳ್ಳಿ ಕೃತಿಯ ಲೇಖಕ ಡಾ.ಎಂ.ಎಸ್.ಮಣಿ, ತಮಿಳುನಾಡಿನ ಚಿದಂಬರಂ ಲೋಕಸಭಾ ಕ್ಷೇತ್ರದ ಸಂಸದ ತೋಲ್ ತಿರುಮಾವಳವನ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಆದರಣೀಯ ಆಹ್ವಾನಿತರಾಗಿ ವಿ.ನಾಗರಾಜು ಪ್ರತಿಷ್ಠಾನದ ಅಧ್ಯಕ್ಷೆ ಪದ್ಮಾ ನಾಗರಾಜು, ಆರ್ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತ ಬಿ.ವೆಂಕಟಸಿಂಗ್ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಇಲಾಖೆಯ ವಿಶೇಷ ಕಾರ್ಯದರ್ಶಿ ಚಂದ್ರಶೇಖರ ಗಂಗಣ್ಣ ಮುದಗಲ್, ಸಿನಿಮಾ ನಿರ್ಮಾಪಕ ಪ್ರಕಾಶ್ ಪಳನಿ, ಸಂಘದ ಅಧ್ಯಕ್ಷ ಗಂಧರ್ವ ಸೇನಾ,ಪ್ರಧಾನ ಕಾರ್ಯದರ್ಶಿ ವಿರುಪಾಕ್ಷ ಹಾಲಗಳಲೆ.ಕಾರ್ಯದರ್ಶಿ ಶಿವರಾಜ್,ಅಮರೇಶಣ್ಣ ಕಾಮನಕೇರಿ ಭಾಗವಹಿಸಿದ್ದರು.

