KRGRV
Monday, September 21, 2026
Homeಬೆಂಗಳೂರುದಪ್ಪ ಚರ್ಮದ ಸರ್ಕಾರದ ಚಳಿಬಿಡಿಸುತ್ತೇವೆ: ಆರ್.ಆಶೋಕ್

ದಪ್ಪ ಚರ್ಮದ ಸರ್ಕಾರದ ಚಳಿಬಿಡಿಸುತ್ತೇವೆ: ಆರ್.ಆಶೋಕ್

ಬೆಂಗಳೂರು: ಇದು ದಪ್ಪ ಚರ್ಮದ ಸರ್ಕಾರ. ಈ ಸರ್ಕಾರಕ್ಕೆ ಚಳಿ ಬಿಡಿಸುವ ಮತ್ತು ಕಿವಿ ಹಿಂಡುವ ಕೆಲಸವನ್ನು ಸದನದಲ್ಲಿ ಮಾಡೇ ಮಾಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಇವರು, ಕಳೆದ ಬಾರಿ ನಾವು ವಿಧಾನಸಭೆ ಕಲಾಪದಲ್ಲಿ ಈ ಸರ್ಕಾರಕ್ಕೆ ಚಳಿ ಬಿಡಿಸಿದ್ದೆವು. ನಮ್ಮ ಹೋರಾಟದಿಂದ ಒಂದು ವಿಕೆಟ್ ಬಿದ್ದು ಹೋಯಿತು. ಈ ಬಾರಿಯೂ ವಿರೋಧ ಪಕ್ಷವಾಗಿ ನಮ್ಮ ಕೆಲಸವನ್ನು ಸಮರ್ಥವಾಗಿ ಮಾಡುತ್ತೇವೆ ಎಂದು ಹೇಳಿದರು .

ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು….

ಈ ಸರ್ಕಾರ ವಿಶೇಷ ಅಧಿವೇಶನವನ್ನು ಬೇಗ ಮುಗಿಸುವ ಸನ್ನಾಹದಲ್ಲಿದೆ. ರಾಜ್ಯದಲ್ಲಿನ ಬರಪರಿಸ್ಥಿತಿ ಬಗ್ಗೆ ಚರ್ಚೆಗೆ ಎರಡು ದಿನ ಹೆಚ್ಚುವರಿಯಾಗಿ ಮೀಡಲಿಡಿ ಎಂದು ಕೇಳಿದ್ದೇವೆ. ಸರ್ಕಾರ ಏನು ಮಾಡುವುದೋ ನೋಡಬೇಕು. ಬರಸಂಬಂಧ ಸರ್ಕಾರ ಈಗ ಎಚ್ಚೆತ್ತುಕೊಂಡಿದೆ. ನಾಲ್ಕು ತಿಂಗಳು ಮೊದಲೇ ಎಚ್ಚರವಾಗಬೇಕಿತ್ತು. ಇದು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿದೆ. ಸರ್ಕಾರ ಬರವನ್ನು ನಿರ್ಲಕ್ಷ್ಯ ಮಾಡಿದ್ದರಿಂದ ರಾಜ್ಯದಲ್ಲಿ̇ 2800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಬಾಧೆ ತಾಳದೆ ನಿನ್ನೆ ಚಾಮರಾಜ ನಗರದಲ್ಲಿ ರೈತರೊಬ್ಬರು ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲವನ್ನು ಸದನದಲ್ಲಿ ಪ್ರಮುಖವಾಗಿ ಚರ್ಚೆಗೆ ಎಳೆಯುತ್ತೇವೆ ಎಂದು ಹೇಳಿದರು.

ಕಸ್ತೂರಿರಂಗನ್ ವರದಿಗೆ ವಿರೋಧ…

ಬಿಜೆಪಿ, ಕಸ್ತೂರಿರಂಗನ್ ವರದಿಗೆ ವಿರೋಧ ಮಾಡಿದೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಇದ್ದಾಗಲೂ ವಿರೋಧ ಮಾಡಿದ್ದೆವು. ನಮಗೆ ಜನರ ಭಾವನೆ ಮುಖ್ಯ, ಬದುಕು ಮುಖ್ಯ. ಎನ್‍ಡಿಎ ಮೈತ್ರಿ ಪಕ್ಷವಾಗಿರುವ ಜೆಡಿಎಸ್‍ನ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸೇರಿ ನಾವು ಕಸ್ತೂರಿರಂಗನ್ ವರದಿ ವಿರೋಧಿಸಿದ್ದೇವೆ. ಬರ ಮತ್ತು ಕಸ್ತೂರಿರಂಗನ್ ವರದಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡ್ತೇವೆ. ಜನರ ಪರವಾಗಿ ನಾವು ಧ್ವನಿ ಎತ್ತುತ್ತೇವೆ ಎಂದು ತಿಳಿಸಿದರು .

ಮತ್ತೊಂದು ವಿಕೆಟ್ ಬೀಳುವ ಭಯ…

ನಿಯಮದ ಪ್ರಕಾರ ವಿಶೇಷ ಅಧಿವೇಶನಕ್ಕೆ ಅವಕಾಶ ಇಲ್ಲ. ಈ ಸರ್ಕಾರಕ್ಕೆ ಯಾರು ಸಲಹೆ ನೀಡುತ್ತಾರೋ ಗೊತ್ತಿಲ್ಲ. ಈ ಅಧಿವೇಶನದಲ್ಲಿ ಮಸೂದೆಗಳ ಮಂಡನೆಯೂ ಇದೆಯಂತೆ. ರೈತರ ವಿಚಾರ, ಕೆಪಿಎಸ್‍ಸಿ ಹಗರಣ, ಬಿಡದಿ ಟೌನ್‍ಶಿಪ್ ವಿಚಾರ ಬಾರದಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ. ಇವನ್ನೆಲ್ಲ ಮುಚ್ಚಿಹಾಕಲು ವಿಶೇಷ ಅಂತ ನೆಪಮಾಡಿ ಅಧಿವೇಶನ ಕರೆದಿದ್ದಾರೆ. ವಿಶೇಷ ಅಧಿವೇಶನ ಕರೆದಾಗ ಮಾನ್ಯ ರಾಜ್ಯಪಾಲರು ಅನುಮೋದಿಸಬೇಕು. ಇವೆಲ್ಲ ನಿಯಮಗಳನ್ನು ಡಿ.ಕೆ.ಶಿವಕುಮಾರ್ ಅವರೇ ತಮ್ಮ ಪುಸ್ತಕದಲ್ಲಿ ಸೃಷ್ಟಿಸಿಕೊಂಡಿದ್ದಾರೆ. ಬೇರೆ ವಿಚಾರವೆಲ್ಲಾದರೂ ಕಲಾಪದಲ್ಲಿ ಚರ್ಚೆಯಾದರೆ ಸರ್ಕಾರಕ್ಕೆ ಇರುಸುಮರಿಸು ಆಗಿ ಇನ್ನೊಂದು ವಿಕೆಟ್ ಬೀಳುತ್ತೆ ಅಂತ ಭಯ ಆಗಿದೆ. ನಾವೀಗ ಈಗಾಗಲೇ ನಿಲುವಳಿ ಸೂಚನೆ ಸಲ್ಲಿಸಿದ್ದೇವೆ ಎಂದು ವಿವರಿಸಿದರು.

ಹೆಚ್ಚಿನ ಸುದ್ದಿ