KRGRV
Wednesday, September 23, 2026
Homeಬೆಂಗಳೂರುಪಶ್ಚಿಮಘಟ್ಟ ಸಂರಕ್ಷಣೆ: ಪರಿಸರ ರಕ್ಷಣೆ ಮತ್ತು ಜನರ ಬದುಕುಳಿಯುವಿಕೆ ನಡುವೆ ಸಮತೋಲನ ಅಗತ್ಯ – ಬಿ.ಕೆ....

ಪಶ್ಚಿಮಘಟ್ಟ ಸಂರಕ್ಷಣೆ: ಪರಿಸರ ರಕ್ಷಣೆ ಮತ್ತು ಜನರ ಬದುಕುಳಿಯುವಿಕೆ ನಡುವೆ ಸಮತೋಲನ ಅಗತ್ಯ – ಬಿ.ಕೆ. ಹರಿಪ್ರಸಾದ್

ಬೆಂಗಳೂರು, ಸೆ. 21: ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆ ಅತ್ಯಂತ ಅಗತ್ಯವಾದರೂ, ಅದನ್ನು ನೆಪವಾಗಿಸಿಕೊಂಡು ನೂರಾರು ವರ್ಷಗಳಿಂದ ಅಲ್ಲಿ ವಾಸಿಸುತ್ತಿರುವ ರೈತರು, ಅರಣ್ಯವಾಸಿಗಳು ಹಾಗೂ ಸ್ಥಳೀಯ ಸಮುದಾಯಗಳ ಬದುಕಿಗೆ ಧಕ್ಕೆ ಉಂಟಾಗಬಾರದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸರ್ಕಾರವನ್ನು ಒತ್ತಾಯಿಸಿದರು.

ವಿಧಾನಮಂಡಲ ಅಧಿವೇಶನದಲ್ಲಿ ಕಸ್ತೂರಿರಂಗನ್ ಹಾಗೂ ಗಾಡ್ಗಿಲ್ ವರದಿಗಳ ಪರಿಣಾಮಗಳ ಕುರಿತು ಮಾತನಾಡಿದ ಅವರು, ಪಶ್ಚಿಮಘಟ್ಟದ ಸಂಪೂರ್ಣ ಪ್ರದೇಶವನ್ನು ಒಂದೇ ರೀತಿಯ ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವ ಅವೈಜ್ಞಾನಿಕ ಕ್ರಮವನ್ನು ಕೈಬಿಡಬೇಕು ಎಂದು ಹೇಳಿದರು. ದಟ್ಟ ಅರಣ್ಯ ಪ್ರದೇಶಗಳಿಗೆ ಮಾತ್ರ ಕಟ್ಟುನಿಟ್ಟಿನ ಪರಿಸರ ಸಂರಕ್ಷಣಾ ಕ್ರಮಗಳನ್ನು ಜಾರಿಗೊಳಿಸಬೇಕು. ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರವೇ ತಜ್ಞರ ಸಮಿತಿಯನ್ನು ರಚಿಸಿ, ಕಂದಾಯ ದಾಖಲೆಗಳು, ಗ್ರಾಮ ಗಡಿಗಳು, ಭೂ ಬಳಕೆ ಹಾಗೂ ಸ್ಥಳೀಯ ವಾಸ್ತವಾಂಶಗಳ ಆಧಾರದ ಮೇಲೆ ಸಮಗ್ರ ಭೂಮಟ್ಟದ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಗುಜರಾತಿನಿಂದ ಕೇರಳದವರೆಗೆ ವ್ಯಾಪಿಸಿರುವ ಪಶ್ಚಿಮಘಟ್ಟ ಪ್ರದೇಶದ ಕುರಿತು ರೂಪಿಸಲಾದ ವರದಿಗಳು ಆರು ರಾಜ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಮಾತ್ರ 10 ಜಿಲ್ಲೆಗಳ 1,576 ಗ್ರಾಮಗಳು ಹಾಗೂ ಸುಮಾರು 20,668 ಚದರ ಕಿಲೋಮೀಟರ್ ಪ್ರದೇಶ ಈ ವ್ಯಾಪ್ತಿಗೆ ಬರುತ್ತಿದ್ದು, ಲಕ್ಷಾಂತರ ಜನರಲ್ಲಿ ಆತಂಕ ಉಂಟಾಗಿದೆ ಎಂದು ಅವರು ಹೇಳಿದರು.

ಉತ್ತರ ಕನ್ನಡದಲ್ಲಿ 566, ಶಿವಮೊಗ್ಗದಲ್ಲಿ 446, ಚಿಕ್ಕಮಗಳೂರಿನಲ್ಲಿ 137, ಬೆಳಗಾವಿಯಲ್ಲಿ 62, ಕೊಡಗಿನಲ್ಲಿ 53, ಮೈಸೂರಿನಲ್ಲಿ 48, ದಕ್ಷಿಣ ಕನ್ನಡದಲ್ಲಿ 43, ಉಡುಪಿಯಲ್ಲಿ 34, ಹಾಸನದಲ್ಲಿ 30 ಹಾಗೂ ಚಾಮರಾಜನಗರದಲ್ಲಿ 20 ಗ್ರಾಮಗಳು ಈ ವ್ಯಾಪ್ತಿಯಲ್ಲಿ ಸೇರಿವೆ ಎಂದು ಅವರು ವಿವರಿಸಿದರು.

ಉಪಗ್ರಹ ಚಿತ್ರಗಳಲ್ಲಿ ಹಸಿರು ಪ್ರದೇಶ ಕಂಡ ಮಾತ್ರಕ್ಕೆ ಅದನ್ನೆಲ್ಲ ದಟ್ಟ ಅರಣ್ಯವೆಂದು ಪರಿಗಣಿಸುವುದು ಸರಿಯಲ್ಲ. ಅನೇಕ ಕಡೆಗಳಲ್ಲಿ ವಸತಿ ಪ್ರದೇಶಗಳು, ಕೃಷಿ ಭೂಮಿ, ತೋಟಗಾರಿಕೆ ಪ್ರದೇಶಗಳು ಹಾಗೂ ಅರಣ್ಯವನ್ನು ಒಂದೇ ವರ್ಗಕ್ಕೆ ಸೇರಿಸಲಾಗಿದೆ. ಗ್ರಾಮಗಳ ಐತಿಹಾಸಿಕ ಗಡಿಗಳು, ಸರ್ವೇ ನಂಬರುಗಳು ಹಾಗೂ ಸ್ಥಳೀಯ ಭೂ ಬಳಕೆಯ ಮಾಹಿತಿಯನ್ನು ಪರಿಗಣಿಸದೆ ರೂಪಿಸಲಾದ ನಕ್ಷೆಗಳು ಜನರಲ್ಲಿ ಅನಗತ್ಯ ಆತಂಕ ಸೃಷ್ಟಿಸಿವೆ ಎಂದು ಹರಿಪ್ರಸಾದ್ ಹೇಳಿದರು.

ಈ ಅಧಿಸೂಚನೆಯ ಪರಿಣಾಮವಾಗಿ ಭೂಮಿಯ ಮೌಲ್ಯ ಕುಸಿಯುವುದು, ಬ್ಯಾಂಕ್ ಸಾಲ ಪಡೆಯಲು ತೊಂದರೆ ಉಂಟಾಗುವುದು, ರಸ್ತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಅಡ್ಡಿಯಾಗುವುದು ಹಾಗೂ ಶರಾವತಿ ಸಂತ್ರಸ್ತರು ಅನುಭವಿಸಿದಂತೆಯೇ ದಶಕಗಳ ಕಾಲ ಪುನರ್ವಸತಿ ಸಮಸ್ಯೆಗಳು ಮರುಕಳಿಸುವ ಭೀತಿ ಇದೆ ಎಂದು ಅವರು ಎಚ್ಚರಿಸಿದರು.

ಕೃಷಿ ಹಾಗೂ ತೋಟಗಾರಿಕೆಗೆ ಯಾವುದೇ ನಿಷೇಧ ಇಲ್ಲ ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ಘೋಷಿಸಬೇಕು. ರೈತರಲ್ಲಿ ಅನಗತ್ಯ ಆತಂಕ ನಿವಾರಣೆ ಮಾಡಬೇಕು ಹಾಗೂ ಸ್ಥಳೀಯರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಕೈಗಾ ಅಣು ವಿದ್ಯುತ್ ಸ್ಥಾವರದ ವಿಸ್ತರಣೆ ಅಥವಾ ಹೊಸ ಅಣು ಸ್ಥಾವರಗಳ ಸ್ಥಾಪನೆಗೆ ಅವಕಾಶ ನೀಡಬಾರದು. ಪರಿಸರ ಹಾಗೂ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

ಅರಣ್ಯ ಹಕ್ಕು ಕಾಯ್ದೆ-2011ರಡಿ ಅರಣ್ಯವಾಸಿಗಳ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸಬೇಕು. ಸ್ಥಳೀಯರನ್ನು ಒಕ್ಕಲೆಬ್ಬಿಸುವ ಯಾವುದೇ ಪ್ರಯತ್ನ ಜನಾಂದೋಲನಕ್ಕೆ ಕಾರಣವಾಗಬಹುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪಶ್ಚಿಮಘಟ್ಟದಲ್ಲಿ ಅನಿಯಂತ್ರಿತ ವಾಣಿಜ್ಯ ರೆಸಾರ್ಟ್‌ಗಳ ನಿರ್ಮಾಣಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕು. ಆದರೆ ಸ್ಥಳೀಯ ಕುಟುಂಬಗಳು ನಡೆಸುತ್ತಿರುವ ಹೋಂಸ್ಟೇಗಳು, ಸಣ್ಣ ಪ್ರವಾಸೋದ್ಯಮ ಚಟುವಟಿಕೆಗಳು ಹಾಗೂ ಉದ್ಯೋಗಾವಕಾಶಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಅರಣ್ಯವನ್ನು ಸರ್ಕಾರಕ್ಕಿಂತ ಹೆಚ್ಚಾಗಿ ಸ್ಥಳೀಯ ಅರಣ್ಯವಾಸಿಗಳು ಹಾಗೂ ಜಾಗೃತ ನಾಗರಿಕರೇ ಕಾಪಾಡಿಕೊಂಡಿದ್ದಾರೆ. ಅಕ್ರಮ ಮರ ಸಾಗಣೆ, ಕಲ್ಲುಗಣಿಗಾರಿಕೆ ಹಾಗೂ ಪರಿಸರಕ್ಕೆ ಹಾನಿಕಾರಕ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

“ಪಶ್ಚಿಮಘಟ್ಟದಿಂದ ಹುಟ್ಟುವ ನರ್ಮದಾ, ಕೃಷ್ಣಾ, ಕಾವೇರಿ, ಗೋದಾವರಿ ಸೇರಿದಂತೆ ಅನೇಕ ನದಿಗಳು ದೇಶದ ಜೀವನಾಡಿಗಳಾಗಿವೆ. ಪರಿಸರ ಸಂರಕ್ಷಣೆ ಅನಿವಾರ್ಯ. ಆದರೆ ಪರಿಸರ ರಕ್ಷಣೆಯ ಹೆಸರಿನಲ್ಲಿ ಶತಮಾನಗಳಿಂದ ಅಲ್ಲಿ ಬದುಕುತ್ತಿರುವ ಬಡವರು, ರೈತರು ಹಾಗೂ ಅರಣ್ಯವಾಸಿಗಳ ಬದುಕನ್ನು ಬಲಿಕೊಡಬಾರದು. ಪರಿಸರ ಮತ್ತು ಜನಜೀವನ ಎರಡನ್ನೂ ಸಮಾನವಾಗಿ ಕಾಪಾಡುವ ನೀತಿ ಸರ್ಕಾರ ಅನುಸರಿಸಬೇಕು,” ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುವ ಮೊದಲು ಕೇರಳ ಮಾದರಿಯಲ್ಲಿ ಕಂದಾಯ ಆಧಾರಿತ ಸಮಗ್ರ ಸಮೀಕ್ಷೆ ನಡೆಸಬೇಕು. ಪರಿಸರಘಾತುಕ ಕಲ್ಲುಗಣಿಗಾರಿಕೆ ಹಾಗೂ ಕೈಗಾರಿಕೆಗಳಿಗೆ ಸಂಪೂರ್ಣ ನಿರ್ಬಂಧ ಹೇರಬೇಕು. ಬಂಡೀಪುರದ ರಾತ್ರಿ ಸಂಚಾರ ನಿಷೇಧವನ್ನು ಮುಂದುವರಿಸುವುದರ ಜೊತೆಗೆ ಮರಳು ಗಣಿಗಾರಿಕೆ ಮತ್ತು ಅಭಿವೃದ್ಧಿ ಯೋಜನೆಗಳ ವಿಚಾರದಲ್ಲಿ ಸ್ಥಳೀಯ ಪರಿಸ್ಥಿತಿಯನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಶಿಫಾರಸು ಮಾಡಿದರು.

ಹೆಚ್ಚಿನ ಸುದ್ದಿ