ಬೆಂಗಳೂರು : ಮಗನ ಭವಿಷ್ಯ ಉಜ್ವಲವಾಗಲಿ ಎಂದು ತಂದೆ ಸಾಲ ಮಾಡಿ, ಇದ್ದ ಭೂಮಿಯನ್ನೂ ಮಾರಿ 2024ರಲ್ಲಿ ಮಲೇಷ್ಯಾಕ್ಕೆ ಕಳುಹಿಸಿಕೊಟ್ಟಿದ್ದರು. ಆದರೆ, ಕೇವಲ ಎರಡುವರೆ ವರ್ಷಗಳಲ್ಲೇ ಆತ ಕಳ್ಳಭಟ್ಟಿ ಕಾರ್ಯಾಚರಣೆ, ಜೀವ ಬೆದರಿಕೆ ಹಾಗೂ ಬೃಹತ್ ಹಫ್ತಾ ವಸೂಲಿ ಜಾಲದ ಪ್ರಮುಖ ಸೂತ್ರಧಾರನಾಗಿ ಹೊರಹೊಮ್ಮಿ ಕೊನೆಗೆ ಗಡಿಪಾರಾಗಿ ಭಾರತಕ್ಕೆ ಮರಳಿದ್ದಾನೆ.
ಮಲೇಷ್ಯಾದಲ್ಲಿ ಕೆಲಸ ಮಾಡುತ್ತಲೇ ಭಾರತದ ನಾನಾ ರಾಜ್ಯಗಳ ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿದ್ದ ರವಿ ಉಚ್ಚಾನಿ ಎಂಬ ಆರೋಪಿಯನ್ನು ಹರಿಯಾಣ ಪೊಲೀಸರು ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗಿನ ಜಾವ ಬಂಧಿಸಿದ್ದಾರೆ. ಒಂದು ಸಣ್ಣ ‘ಹರಿಯಾಣಿ ಆಡುಭಾಷೆ’ (Accent) ಆಧಾರದ ಮೇಲೆ ಪೊಲೀಸರು ಈ ಅಂತಾರಾಷ್ಟ್ರೀಯ ಜಾಲವನ್ನು ಭೇದಿಸಿದ್ದು ವಿಶೇಷ.
ತನಿಖೆಗೆ ತಿರುವು ನೀಡಿದ ಹರಿಯಾಣಿ ಧ್ವನಿ
ಕಳೆದ ವರ್ಷದ ಡಿಸೆಂಬರ್ನಲ್ಲಿ ಜಾರ್ಖಂಡ್ನ ರಾಂಚಿಯ ಕಲ್ಲಿದ್ದಲು ಗಣಿ ಉದ್ಯಮಿಯೊಬ್ಬರಿಗೆ ಮಲೇಷ್ಯಾದ ನಂಬರ್ನಿಂದ ಜೀವ ಬೆದರಿಕೆ ಕರೆ ಬಂದಿತ್ತು. ಭಾರಿ ಮೊತ್ತದ ಹಣ ನೀಡದಿದ್ದರೆ ಕೊಲ್ಲುವುದಾಗಿ ದುಷ್ಕರ್ಮಿಗಳು ಬೆದರಿಸಿದ್ದರು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಹರಿಯಾಣ ಪೊಲೀಸ್ ವಿಶೇಷ ಕಾರ್ಯಪಡೆ (STF), ಎಸಿಪಿ ಅಮನ್ ಕುಮಾರ್ ನೇತೃತ್ವದಲ್ಲಿ ಆಡಿಯೋ ಕರೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಕರೆ ಮಲೇಷ್ಯಾದಿಂದ ಬಂದಿದ್ದರೂ ಮಾತನಾಡಿದ ವ್ಯಕ್ತಿಯ ಧ್ವನಿಯಲ್ಲಿ ಸ್ಪಷ್ಟವಾದ ‘ಹರಿಯಾಣಿ ಆಡುಭಾಷೆ’ ಇದ್ದುದನ್ನು ಪೊಲೀಸರು ಗುರುತಿಸಿದರು. ಇದರ ಸುಳಿವು ಹಿಡಿದು, ಇತ್ತೀಚಿನ ದಿನಗಳಲ್ಲಿ ಹರಿಯಾಣದಿಂದ ಮಲೇಷ್ಯಾಕ್ಕೆ ವಲಸೆ ಹೋದ ಯುವಕರ ಪಟ್ಟಿಯನ್ನು ಪೊಲೀಸರು ಜಾಲಾಡಿದರು.
ಕ್ಷೌರಿಕನಿಂದ ಗ್ಯಾಂಗ್ಸ್ಟರ್ವರೆಗೆ
ತನಿಖೆ ಮುಂದುವರಿದಂತೆ ಕರ್ನಾಲ್ ಜಿಲ್ಲೆಯ ರವಿ ಉಚ್ಚಾನಿ ಎಂಬಾತನ ಹೆಸರು ಮುನ್ನೆಲೆಗೆ ಬಂತು. 2024ರ ಮಾರ್ಚ್ನಲ್ಲಿ ಭಾರತ ತೊರೆದಿದ್ದ ಈತ ಮಲೇಷ್ಯಾದ ಸಲೂನ್ ಒಂದರಲ್ಲಿ ಕ್ಷೌರಿಕನಾಗಿ ಕೆಲಸ ಮಾಡುತ್ತಿದ್ದ. ಆತನ ಹಿನ್ನೆಲೆ ಕೆದಕಿದಾಗ ಆಘಾತಕಾರಿ ಸತ್ಯಗಳು ಹೊರಬಂದವು. ಆರಂಭದಲ್ಲಿ ಈತ ಗ್ಯಾಂಗ್ಸ್ಟರ್ಗಳಿಗಾಗಿ “ಡಬ್ಬಾ ಕಾಲಿಂಗ್” (Dabba Calling) ಕೆಲಸ ಮಾಡುತ್ತಿದ್ದ.
ಏನಿದು ಡಬ್ಬಾ ಕಾಲಿಂಗ್?: ವಿದೇಶದಲ್ಲಿರುವ ಆರೋಪಿ ಮೊದಲು ಸಂತ್ರಸ್ತರಿಗೆ ಆನ್ಲೈನ್ ಮೂಲಕ ಕರೆ ಮಾಡುತ್ತಾನೆ. ಅದೇ ಸಮಯದಲ್ಲಿ ಇನ್ನೊಂದು ಫೋನ್ನಿಂದ ಜೈಲಿನಲ್ಲಿರುವ ಅಥವಾ ಬೇರೆ ದೇಶದಲ್ಲಿರುವ ಮುಖ್ಯ ಗ್ಯಾಂಗ್ಸ್ಟರ್ಗೆ ಕರೆ ಮಾಡಿ, ಎರಡೂ ಫೋನ್ಗಳ ಸ್ಪೀಕರ್ಗಳನ್ನು ಅಕ್ಕಪಕ್ಕದಲ್ಲಿಡುತ್ತಾನೆ. ಇದರಿಂದ ಮುಖ್ಯ ಆರೋಪಿ ನೇರವಾಗಿ ಸಂತ್ರಸ್ತರಿಗೆ ಜೀವ ಬೆದರಿಕೆ ಹಾಕಲು ಸಾಧ್ಯವಾಗುತ್ತದೆ.
ಕೆಲ ದಿನಗಳ ನಂತರ ರವಿ ತಾನೇ ಸ್ವತಃ ಭಾರತೀಯ ಉದ್ಯಮಿಗಳಿಗೆ ನೇರವಾಗಿ ಕರೆ ಮಾಡಿ ಹಫ್ತಾ ವಸೂಲಿ ಮಾಡಲು ಆರಂಭಿಸಿದ್ದ. ರಾಜಸ್ಥಾನದ ಮಾಜಿ ಕೇಂದ್ರ ಸಚಿವರೊಬ್ಬರಿಗೂ ಈತ ಬೆದರಿಕೆ ಕರೆ ಮಾಡಿದ್ದ ಎನ್ನಲಾಗಿದೆ.
ಜೈಲಿನಿಂದ ಸಂಚು, ಕಣದಲ್ಲಿ ಶೂಟರ್ಗಳು
ಈ ಜಾಲ ಕೇವಲ ವಿದೇಶದಿಂದ ಕರೆ ಮಾಡುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಹಣ ನೀಡಲು ನಿರಾಕರಿಸಿದ ಉದ್ಯಮಿಗಳ ಮೇಲೆ ದಾಳಿ ನಡೆಸಲು ಹರಿಯಾಣದಲ್ಲಿ ಸ್ಥಳೀಯ ಶೂಟರ್ಗಳನ್ನು ಸಜ್ಜುಗೊಳಿಸಲಾಗಿತ್ತು. ಎಸ್ಟಿಎಫ್ ಈಗಾಗಲೇ ಎಂಟು ಮಂದಿ ಶೂಟರ್ಗಳನ್ನು ಹಾಗೂ ಜೈಲಿನಲ್ಲಿದ್ದುಕೊಂಡೇ ಈ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಈ ಗ್ಯಾಂಗ್ಗೆ ಕುಖ್ಯಾತ ‘ಲಾರೆನ್ಸ್ ಬಿಷ್ಣೋಯ್’ ಗ್ಯಾಂಗ್ ಜತೆ ಸಂಪರ್ಕವಿರುವ ಶಂಕೆಯೂ ವ್ಯಕ್ತವಾಗಿದೆ.
ಬ್ಯಾಂಕ್ ವಹಿವಾಟು ಹಾಗೂ ಕಾಲ್ ರೆಕಾರ್ಡ್ಗಳ ಆಧಾರದ ಮೇಲೆ ರವಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮಲೇಷ್ಯಾ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಭಾರತಕ್ಕೆ ಗಡಿಪಾರು ಮಾಡಿದ್ದಾರೆ. ಸುಮಾರು 9 ತಿಂಗಳ ಸುದೀರ್ಘ ಕಾರ್ಯಾಚರಣೆಯ ನಂತರ ಹರಿಯಾಣ ಪೊಲೀಸರು ಈ ಅಂತಾರಾಷ್ಟ್ರೀಯ ಹಫ್ತಾ ವಸೂಲಿ ಜಾಲದ ಹೆಡೆಮುರಿ ಕಟ್ಟಿದ್ದಾರೆ.

