KRGRV
Thursday, October 1, 2026
Homeಬೆಂಗಳೂರುಪ್ರಶಸ್ತಿ ಪುರಸ್ಕೃತ ಶಿಕ್ಷಕರ ಗೌರವಧನ ಹೆಚ್ಚಳಕ್ಕೆ ಆಗ್ರಹ; ಬೇಡಿಕೆ ಈಡೇರಿಸಲು ಸರ್ಕಾರದೊಂದಿಗೆ ಚರ್ಚಿಸುವ ಭರವಸೆ**

ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಗೌರವಧನ ಹೆಚ್ಚಳಕ್ಕೆ ಆಗ್ರಹ; ಬೇಡಿಕೆ ಈಡೇರಿಸಲು ಸರ್ಕಾರದೊಂದಿಗೆ ಚರ್ಚಿಸುವ ಭರವಸೆ**

ಬೆಂಗಳೂರು, ಸೆಪ್ಟೆಂಬರ್ 30: ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಅಮೂಲ್ಯ ಸೇವೆಗೆ ಗೌರವವಾಗಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ನೀಡಲಾಗುತ್ತಿರುವ ಗೌರವಧನವನ್ನು ಕಾಲಮಿತಿಗೆ ಅನುಗುಣವಾಗಿ ಹೆಚ್ಚಿಸಬೇಕು ಎಂದು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಕೇಂದ್ರ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯ ಅಂಗವಾಗಿ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಭವನದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕಚೇರಿ ಆವರಣದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಹಾಗೂ 75 ವಸಂತಗಳನ್ನು ಪೂರೈಸಿರುವ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಸದಸ್ಯರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ ಸಚಿವೆ ಪಿ.ಟಿ.ಆರ್. ಸಿಂಧ್ಯಾಅವರು ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು.

37 ವರ್ಷಗಳಿಂದ ಪರಿಷ್ಕರಣೆಯಾಗದ ಗೌರವಧನ

ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ಸಂಘದ ರಾಜ್ಯಾಧ್ಯಕ್ಷ ಕೆ. ಕೃಷ್ಣಪ್ಪ ಮಾತನಾಡಿ, 1985ರ ಸರ್ಕಾರದ ಆದೇಶದಂತೆ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಮಾಸಿಕ ₹150 ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ₹250 ಗೌರವಧನ ನೀಡಲಾಗುತ್ತಿದೆ. ಸುಮಾರು 37 ವರ್ಷಗಳ ಹಿಂದೆ ನಿಗದಿಪಡಿಸಲಾದ ಈ ಮೊತ್ತವನ್ನು ಇದುವರೆಗೆ ಪರಿಷ್ಕರಿಸದಿರುವುದು ವಿಷಾದನೀಯ. ಇಂದಿನ ಜೀವನ ವೆಚ್ಚ ಹಾಗೂ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಗೌರವಧನವನ್ನು ಮರುನಿಗದಿಪಡಿಸುವ ಅಗತ್ಯವಿದೆ ಎಂದು ಹೇಳಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಮಾಸಿಕ ₹5,000 ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಮಾಸಿಕ ₹3,000 ಗೌರವಧನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರೈಲು ಪ್ರಯಾಣದ ರಿಯಾಯಿತಿ ಮರುಜಾರಿಗೆ ಆಗ್ರಹ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಈ ಹಿಂದೆ ರೈಲು ಪ್ರಯಾಣದಲ್ಲಿ ನೀಡಲಾಗುತ್ತಿದ್ದ ಶೇ.50ರಷ್ಟು ಪ್ರಯಾಣ ದರದ ರಿಯಾಯಿತಿಯನ್ನು ಕೋವಿಡ್-19 ನಂತರ ಸ್ಥಗಿತಗೊಳಿಸಲಾಗಿದೆ. ಈ ಸೌಲಭ್ಯವನ್ನು ಮರುಜಾರಿಗೆ ತರಬೇಕು ಎಂದು ಸಂಘ ಒತ್ತಾಯಿಸಿತು.

ಬೇಡಿಕೆಗಳ ಕುರಿತು ಸರ್ಕಾರದೊಂದಿಗೆ ಚರ್ಚಿಸುವ ಭರವಸೆ

ಸಂಘದ ಮನವಿಯನ್ನು ಸ್ವೀಕರಿಸಿದ ಮಾಜಿ ಸಚಿವೆ ಪಿ.ಟಿ.ಆರ್. ಸಿಂಧ್ಯಾ ಅವರು, ಶಿಕ್ಷಕರು ಸಮಾಜ ನಿರ್ಮಾಣದಲ್ಲಿ ಸಲ್ಲಿಸಿರುವ ಸೇವೆ ಅಪಾರವಾಗಿದೆ. ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಈ ಕುರಿತು ಸರ್ಕಾರದೊಂದಿಗೆ ಚರ್ಚಿಸಿ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ, ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕಿ ಹೆಚ್.ಕೆ. ಪುಷ್ಪಲತಾ, ಸಾಹಿತಿ ಹಾಗೂ ಪತ್ರಕರ್ತ ಡಾ. ಎಂ.ಎಸ್. ಮಣಿ, ಡಾ. ಎಲ್. ಬೈರಪ್ಪ, ಸಂಘದ ರಾಜ್ಯಾಧ್ಯಕ್ಷ ಕೆ. ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಡಾ. ವಿ.ಪಿ. ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ