KRGRV
Saturday, October 3, 2026
Homeಬೆಂಗಳೂರುಪೊಲೀಸ್ ಸಿಬ್ಬಂದಿಯ ಕುಟುಂಬಗಳ ನೆಮ್ಮದಿಯ ಬದುಕಿಗೆ ಸುಸಜ್ಜಿತ ವಸತಿಗೃಹ: ಪ್ರಿಯಾಂಕ್ ಖರ್ಗೆ

ಪೊಲೀಸ್ ಸಿಬ್ಬಂದಿಯ ಕುಟುಂಬಗಳ ನೆಮ್ಮದಿಯ ಬದುಕಿಗೆ ಸುಸಜ್ಜಿತ ವಸತಿಗೃಹ: ಪ್ರಿಯಾಂಕ್ ಖರ್ಗೆ

ಆನಂದರಾವ್ ವೃತ್ತದ ಬಳಿ ₹41.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 128 ಪೊಲೀಸ್ ಕಾನ್‌ಸ್ಟೇಬಲ್ ವಸತಿಗೃಹಗಳ ಸಮುಚ್ಛಯ ಉದ್ಘಾಟನೆ

ಬೆಂಗಳೂರು, ಅಕ್ಟೋಬರ್ 1: ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಆನಂದರಾವ್ ವೃತ್ತದ ಬಳಿ ಪೊಲೀಸ್ ಇಲಾಖೆ ನಿರ್ಮಿಸಿರುವ 128 ಪೊಲೀಸ್ ಕಾನ್‌ಸ್ಟೇಬಲ್ ವಸತಿಗೃಹಗಳ ಸಮುಚ್ಛಯವನ್ನು ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಇಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ತಮ್ಮ ಜೀವವನ್ನೇ ಪಣಕ್ಕಿಟ್ಟು ಸಮಾಜದ ಸುರಕ್ಷತೆಗಾಗಿ ಸೇವೆ ಸಲ್ಲಿಸುವ ಪೊಲೀಸ್ ಸಿಬ್ಬಂದಿಯ ಕುಟುಂಬಗಳು ನೆಮ್ಮದಿಯಿಂದ ಬದುಕಲು ಪೂರಕ ವಾತಾವರಣ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯಗಳೊಂದಿಗೆ ಸುಸಜ್ಜಿತ ವಸತಿಗೃಹಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

‘ಪೊಲೀಸ್ ಗೃಹ 2025’ ಯೋಜನೆಯಡಿ ನಿರ್ಮಿಸಲಾಗಿರುವ ಈ ಸಮುಚ್ಛಯವು ತಲಾ 64 ವಸತಿ ಘಟಕಗಳನ್ನು ಹೊಂದಿರುವ ಎರಡು ವಸತಿ ಬ್ಲಾಕ್‌ಗಳನ್ನು ಒಳಗೊಂಡಿದೆ. ಪ್ರತಿ ಬ್ಲಾಕ್‌ ಸ್ಟಿಲ್ಟ್, ನೆಲಮಹಡಿ ಹಾಗೂ ಏಳು ಮಹಡಿಗಳನ್ನು ಹೊಂದಿದೆ. ಯೋಜನೆಯ ಅಂದಾಜು ವೆಚ್ಚ ₹41.50 ಕೋಟಿ ಆಗಿದ್ದು, ಒಟ್ಟು ನಿರ್ಮಿತ ವಿಸ್ತೀರ್ಣ 11,944.30 ಚದರ ಮೀಟರ್‌ ಇದೆ.

ಪ್ರತಿ ವಸತಿಗೃಹವು ಸುಮಾರು 620.31 ಚದರ ಅಡಿ ಕಾರ್ಪೆಟ್ ಪ್ರದೇಶ ಹೊಂದಿದ್ದು, ಲಿವಿಂಗ್ ರೂಂ, ಡೈನಿಂಗ್ ಹಾಲ್, ಎರಡು ಮಲಗುವ ಕೊಠಡಿಗಳು, ಅಡುಗೆಮನೆ, ಸ್ನಾನಗೃಹ-ಶೌಚಾಲಯ ಹಾಗೂ ಯುಟಿಲಿಟಿ ಪ್ರದೇಶಗಳನ್ನು ಒಳಗೊಂಡಿದೆ.

ಸಿಬ್ಬಂದಿಯ ಕುಟುಂಬಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಲಿಫ್ಟ್, ವಾಹನ ನಿಲುಗಡೆ, ನೀರು ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕ, ಮಳೆನೀರು ಕೊಯ್ಲು ಹಾಗೂ ಸೋಲಾರ್ ವಾಟರ್ ಹೀಟಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಆಂತರಿಕ ರಸ್ತೆಗಳು, ಮಳೆನೀರು ಚರಂಡಿ, ಲ್ಯಾಂಡ್‌ಸ್ಕೇಪಿಂಗ್, ನೀರು ಸರಬರಾಜು ಹಾಗೂ ಒಳಚರಂಡಿ ಜಾಲವನ್ನೂ ಅಭಿವೃದ್ಧಿಪಡಿಸಲಾಗಿದೆ.

ಸ್ಥಳೀಯ ಶಾಸಕರಾದ ಮಾಜಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ಹಾಗೂ ಪೊಲೀಸ್ ಮಹಾ ನಿರ್ದೇಶಕ ಡಾ. ಎಂ.ಎ. ಸಲೀಂ, ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪೊಲೀಸ್ ಸಿಬ್ಬಂದಿಯ ವಸತಿ ಹಾಗೂ ಕಲ್ಯಾಣಕ್ಕೆ ಅಗತ್ಯ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಹೆಚ್ಚಿನ ಸುದ್ದಿ