KRGRV
Thursday, October 8, 2026
Homeಬೆಂಗಳೂರುಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ 75 ಅಮೃತ ಮಹೋತ್ಸವ: ಆತಿಥ್ಯ ವಲಯದಲ್ಲಿ ನಾವೀನ್ಯತೆ, ಶ್ರೇಷ್ಠತೆ...

ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ 75 ಅಮೃತ ಮಹೋತ್ಸವ: ಆತಿಥ್ಯ ವಲಯದಲ್ಲಿ ನಾವೀನ್ಯತೆ, ಶ್ರೇಷ್ಠತೆ ಅಳವಡಿಸಲು ನಿರ್ಧಾರ

ಬೆಂಗಳೂರು,ಅ.7: ದೇಶದ ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದಲ್ಲಿ ತನ್ನದೇ ಆದ ಹೆಗ್ಗುರುತುಗಳನ್ನು ಮೂಡಿಸಿರುವ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ 75 ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ “ಟ್ರಾವೆಲ್ ಏಜೆಂಟ್ ಗಳ ರಾಷ್ಟ್ರೀಯ ಸಮ್ಮೇಳನ ನಗರದಲ್ಲಿ ನಡೆಯಿತು.

ಗಾಂಧಿನಗರದ ಹಾಲಿಡೆ ಇನ್ ನಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ “ನಮ್ಮ ಪರಂಪರೆಯನ್ನು ಗೌರವಿಸುವ, ಭವಿಷ್ಯವನ್ನು ಪ್ರೇರೇಪಿಸುವ” ಧ್ಯೇಯ ವಾಕ್ಯದ ದೃಷ್ಟಿಕೋನವನ್ನು ಈ ಸಮ್ಮೇಳನ ಅನಾವರಣಗೊಳಿಸಿತು. ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮದ ಮಾನ್ಯತೆ ಪಡೆದ ಧ್ವನಿಯಾಗಿ 2,700 ಕ್ಕೂ ಅಧಿಕ ಸಂಸ್ಥೆಗಳ ಸಹಯೋಗದೊಂದಿಗೆ ಇದು ಕಾರ್ಯನಿರ್ವಹಿಸುತ್ತಿದೆ. ಭವಿಷ್ಯದ ಪಯಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಲು ಸಮ್ಮೇಳನದಲ್ಲಿ ನಿರ್ಧರಿಸಲಾಯಿತು.

ವಿಮಾನಯಾನ ಸಂಸ್ಥೆಗಳು, ಪ್ರವಾಸೋದ್ಯಮ ಮಂಡಳಿಗಳು ಮತ್ತು ಪ್ರಾಧಿಕಾರಗಳು, ವೀಸಾ, ವಿಮೆ ಮತ್ತು ತಂತ್ರಜ್ಞಾನ ಪರಿಣಿತರು ಮತ್ತು ಉದ್ಯಮ ಪಾಲುದಾರರೊಂದಿಗಿನ ಸಹಯೋಗವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಲಪಡಿಸುವ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಯಿತು. ಪ್ರವಾಸೋದ್ಯಮದ ಆತಿಥ್ಯದಲ್ಲಿ ನಾವೀನ್ಯತೆ, ಹೊಸ ದೃಷ್ಟಿ, ಸ್ಪಷ್ಟ ಉದ್ದೇಶ ಮತ್ತು ಶ್ರೇಷ್ಠತೆಯೊಂದಿಗೆ ಪ್ರತಿನಿಧಿಸುವ, ಸೇವೆ ಸಲ್ಲಿಸುವ ಮತ್ತು ಮುನ್ನಡೆಸುವ ಬದ್ಧತೆಯನ್ನು ಸಂಸ್ಥೆ ಪುನರುಚ್ಚರಿಸಿದೆ.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಟಾಯ್ ನ ರಾಷ್ಟ್ರೀಯ ಸಂಘದ ಅಧ್ಯಕ್ಷ ಸುನೀಲ್ ಕುಮಾರ್, 75 ವರ್ಷಗಳಲ್ಲಿ ಭವ್ಯ ಪರಂಪರೆ ಹೊಂದಿರುವ ಸಂಸ್ಥೆಯ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಇದೇ 26 ರಂದು ಕೊಲ್ಕತ್ತಾದಲ್ಲಿ ಆಯೋಜಿಸಲಾಗಿದೆ. ಟಾಯ್ ಸದಸ್ಯತ್ವ ಪಡೆಯಲು 600 ಕಂಪೆನಿಗಳು ಅರ್ಜಿ ಸಲ್ಲಿಸಿ ಕಾಯುತ್ತಿದ್ದು, ಇದು ಸಂಸ್ಥೆಯ ಮಹತ್ವನ್ನು ಅನಾವರಣಗೊಳಿಸುತ್ತದೆ ಎಂದರು.

ಟಾಯ್ ನ ಕರ್ನಾಟಕ ಚಾಪ್ಟರ್ ಅಧ್ಯಕ್ಷ ನಿರಂಜನ್ ಎಸ್ ಭಾರ್ಗವ ಮಾತನಾಡಿ, 75 ವರ್ಷಗಳ ಪ್ರಯಾಣವನ್ನು ನಾವು ಆಚರಿಸುತ್ತಿದ್ದು, ಇದು ನಾಯಕತ್ವ, ಸೇವೆ, ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ತನ್ಮೂಲಕ ಟಾಯ್ ಪ್ರಾವಾಸೋದ್ಯಮದಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ ಎಂದು ಹೇಳಿದರು.

ಟಾಯ್ ಉಪಾಧ್ಯಕ್ಷ ಲೋಕೇಶ್ ಬೆಟ್ಟಯ್ಯ ಮಾತನಾಡಿ, ದೇಶೀಯ ವಿಯಾನಯಾಕ್ಕೆ ಡಿಜಿಯಾತ್ರಾ ಅತ್ಯಂತ ಪರಿಣಾಮಕಾರಿಯಾಗಿದ್ದು, ಈ ವ್ಯವಸ್ಥೆ ಅಂತಾರಾಷ್ಟ್ರೀಯ ಪ್ರಯಾಣಕ್ಕೂ ಶೀಘ್ರದಲ್ಲೇ ಮುಕ್ತವಾಗಲಿದೆ. ಇದರಿಂದ ಪ್ರಯಾಣ ಮತ್ತಷ್ಟು ಸುಗಮ, ಸುಲಲಿತವಾಗಲಿದೆ. ಪ್ರಯಾಣಿಕರ ವಾಸ್ತವ್ಯವನ್ನು ತಾರಾ ಹೋಟೆಲ್ ಗಳಿಗೆ ಸೀಮಿತಗೊಳಿಸದೇ ಹೋಮ್ ಸ್ಟೇ ಮತ್ತಿತರ ಮಾರ್ಗಗಳ ಬಗ್ಗೆಯೂ ಗಮನಹರಿಸುವುದು ಸೂಕ್ತ ಎಂದು ಸಲಹೆ ಮಾಡಿದರು.

ಟಾಯ್ ನ ರಾಷ್ಟ್ರೀಯ ಸಂಘದ ಖಜಾಂಚಿ ಪರಸ್ ಲಾಖಿಯಾ, ಪ್ರಧಾನ ಕಾರ್ಯದರ್ಶಿ ಶ್ರೀರಾಮ್ ಪಟೇಲ್‌, ಕರ್ನಾಟಕ ಚಾಪ್ಟರ್‌ ಕಾರ್ಯದರ್ಶಿ ಜಿತೇಂದ್ರ ಶೆಟ್ಟಿ, ಖಜಾಂಚಿ ಕೆ.ಎಸ್.‌ ಬಾಲಾಜಿ ಮತ್ತಿತರರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ