KRGRV
Thursday, October 8, 2026
Homeಜಿಲ್ಲಾ ಸುದ್ದಿಗಳುತಾರನಾಳ ಕೆರೆ ತುಂಬಿಸಿ ತೋರಿಸಿ: ನಾಡಗೌಡರಿಗೆ ನಡಹಳ್ಳಿ ಸವಾಲ್ ರೈತರಿಗೆ ಸಮರ್ಪಕ ನೀರು ಹರಿಸದಿದ್ದರೆ ಅ.11ರಂದು...

ತಾರನಾಳ ಕೆರೆ ತುಂಬಿಸಿ ತೋರಿಸಿ: ನಾಡಗೌಡರಿಗೆ ನಡಹಳ್ಳಿ ಸವಾಲ್ ರೈತರಿಗೆ ಸಮರ್ಪಕ ನೀರು ಹರಿಸದಿದ್ದರೆ ಅ.11ರಂದು ಬೃಹತ್ ಹೋರಾಟ; ವಿದ್ಯುತ್ ಕಡಿತ, ಕೆರೆಗಳಿಗೆ ನೀರು, ಕಾಲುವೆ ವಿಚಾರದಲ್ಲಿ ಆಕ್ರೋಶ

ಮುದ್ದೇಬಿಹಾಳ: ಸ್ಥಳೀಯ ಶಾಸಕ ಸಿ.ಎಸ್. ನಾಡಗೌಡ ಅವರು ರೈತರ ಪರವಾಗಿದ್ದರೆ ತಾಲೂಕಿನ ಎಲ್ಲ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಲಿ. ತಾಕತ್ತಿದ್ದರೆ ತಾರನಾಳ ಕೆರೆಯನ್ನು ತುಂಬಿಸಿ ತೋರಿಸಿ ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಸವಾಲ್ ಹಾಕಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಗೌಡ ಅವರು ನನ್ನನ್ನು ‘ಕುತಂತ್ರಿ’ ಎಂದು ಆರೋಪಿಸಿದ್ದಾರೆ. ಆದರೆ ಕಳೆದ 30 ವರ್ಷಗಳಲ್ಲಿ ರೈತರ ವಿಚಾರದಲ್ಲಿ ಅವರು ನಡೆದುಕೊಂಡ ರೀತಿಗೆ ಸಂಬಂಧಿಸಿದ ಸಾಕಷ್ಟು ದಾಖಲೆಗಳು ನನ್ನಲ್ಲಿವೆ. ಬಹಿರಂಗ ಚರ್ಚೆಗೆ ಬಂದರೆ ಎಲ್ಲ ಸಾಕ್ಷ್ಯಗಳನ್ನು ಒಂದೇ ವೇದಿಕೆಯಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ತಾವು ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರದ ಬಹುತೇಕ ಕೆರೆಗಳನ್ನು ತುಂಬಿಸಿ, ನಿರಂತರ ನೀರು ಹರಿಸುವ ವ್ಯವಸ್ಥೆ ಮಾಡಿದ್ದೆ. ಆದರೆ ಕಳೆದ ಒಂದು ವರ್ಷದಲ್ಲಿ ಒಂದೇ ಒಂದು ಕೆರೆಯನ್ನೂ ಸಮರ್ಪಕವಾಗಿ ತುಂಬಿಸಲು ಸಾಧ್ಯವಾಗಿಲ್ಲ. ರೈತರ ವಿಚಾರದಲ್ಲಿ ನಾಟಕವಾಡುವುದನ್ನು ಬಿಟ್ಟು ನೈಜವಾಗಿ ಕೆಲಸ ಮಾಡಬೇಕು ಎಂದು ಟೀಕಿಸಿದರು.

ನಾಗರಾಳ ಗ್ರಾಮದ ಸುಮಾರು 23 ರೈತರಿಗೆ ಆರ್.ಆರ್. ಸಂಖ್ಯೆ ಇದ್ದರೂ ನಿರಂತರ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳನ್ನು ವಿಚಾರಿಸಿದಾಗ ‘ಮೇಲಿನಿಂದ ಒತ್ತಡವಿದೆ’ ಎಂಬ ಉತ್ತರ ಬರುತ್ತಿದೆ. ವಿದ್ಯುತ್ ಪೂರೈಕೆಯಲ್ಲೂ ರಾಜಕೀಯ ಮಾಡುವುದು ಸರಿಯಲ್ಲ. ಆಲಮಟ್ಟಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶಾಸಕ ನಾಡಗೌಡ ಅವರು ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಕೆರೆಗಳನ್ನು ಸಮರ್ಪಕವಾಗಿ ತುಂಬಿಸಲು ಕನಿಷ್ಠ **2 ಟಿಎಂಸಿ ನೀರು ಅಗತ್ಯವಿದೆ ಎಂದು ಅಧಿಕಾರಿಗಳೇ ತಿಳಿಸಿದ್ದಾರೆ. ಆದರೆ ಕೇವಲ ಅರ್ಧ ಟಿಎಂಸಿ ನೀರು ಹರಿಸಿದರೆ ಕ್ಷೇತ್ರದ ಕಟ್ಟಕಡೆಯ ಗ್ರಾಮಗಳಿಗೆ ನೀರು ತಲುಪಲು ಸಾಧ್ಯವಿಲ್ಲ. ಜಾಕ್‌ವೆಲ್‌ಗಳ ಸಾಮರ್ಥ್ಯ ಹಾಗೂ ನೀರಿನ ಪ್ರಮಾಣದ ಬಗ್ಗೆ ಮೊದಲು ಮಾಹಿತಿ ಪಡೆದು ನೀರು ಹರಿಸಬೇಕು ಎಂದು ನಡಹಳ್ಳಿ ಹೇಳಿದರು.

ಕಾಲುವೆ ಸಮೀಪದ ರೈತರ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು ಯಾರಾದರೂ ಮುಂದಾದರೆ ಜೋಕೆ ಎಂದು ಎಚ್ಚರಿಸಿದ ಅವರು, ಕಬ್ಬು, ದ್ರಾಕ್ಷಿ ಸೇರಿದಂತೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರಿಗೆ ನೀರು ಅತ್ಯಗತ್ಯವಾಗಿದೆ ಎಂದರು.

ತಾರನಾಳ ಕೆರೆ ತುಂಬಿದರೆ ಸುತ್ತಮುತ್ತಲಿನ ಗ್ರಾಮಗಳ ಬಾವಿ, ಕೊಳವೆಬಾವಿಗಳಿಗೆ ಅನುಕೂಲವಾಗಲಿದೆ. ಹೀಗಾಗಿ ರೈತರ ನಿಜವಾದ ಕಾಳಜಿ ಇದ್ದರೆ ತಾರನಾಳ ಕೆರೆಯನ್ನು ತುಂಬಿಸಿ ತೋರಿಸಲಿ ಎಂದು ಸವಾಲ್ ಹಾಕಿದರು.

ರೈತರಿಗೆ ಅಗತ್ಯವಿರುವಷ್ಟು ನೀರು ಹರಿಸದಿದ್ದರೆ ಅ.11ರಂದು ರೈತರೊಂದಿಗೆ ದೊಡ್ಡ ಪ್ರಮಾಣದ ಹೋರಾಟ ನಡೆಸಲಾಗುವುದು. ತಾಲೂಕಿನ ಎಲ್ಲ ಕೆರೆಗಳಿಗೂ ನೀರು ಬರುವವರೆಗೆ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ನಡಹಳ್ಳಿ ಘೋಷಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮುನ್ನಾಧಣಿ ನಾಡಗೌಡ, ಕೆಂಚಪ್ಪ ಬಿರಾದಾರ, ಮಲಕೇಂದ್ರಗೌಡ ಪಾಟೀಲ, ಗುರುನಾಥಗೌಡ ಬಿರಾದಾರ, ಸಿದ್ದರಾಜ ಹೊಳಿ, ಶ್ರೀಶೈಲ ದೊಡಮನಿ, ಎಸ್.ಎಸ್. ಶಿವಣಗಿ, ಲಕ್ಷ್ಮಣ ಬಿಜ್ಜೂರ, ರಾಜು ಬೊಳ್ಳೊಳ್ಳಿ, ರಾಮನಗೌಡ ಬಿರಾದಾರ, ಗೌರಮ್ಮ ಹುನಗುಂದ, ಹಣಮಂತ ನಾಯಕಮಕ್ಕಳ, ಬಸಯ್ಯ ನಂದಿಕೇಶ್ವರಮಠ, ಪ್ರಭು ಕಡಿ, ಪುನೀತ ಹಿಪ್ಪರಗಿ ಮತ್ತಿತರರು ಉಪಸ್ಥಿತರಿದ್ದರು.

ಕೊಟ-1
“ನಾಡಗೌಡರೇ, ನಾಟಕವಾಡುವುದು ಬಿಡಿ. ರೈತರನ್ನು ವಿರೋಧಿಸುವುದು ಬಿಡಿ. ರೈತರ ನಿಜವಾದ ಕಾಳಜಿ ಇದ್ದರೆ ತಾರನಾಳ ಕೆರೆಯನ್ನು ತುಂಬಿಸಿ ತೋರಿಸಿ. ಅದನ್ನು ಮಾಡಲು ಸಾಧ್ಯವೇ ಎಂದು ನಾನು ಸವಾಲ್ ಹಾಕುತ್ತೇನೆ.”
—ಎ.ಎಸ್. ಪಾಟೀಲ ನಡಹಳ್ಳಿ, ಮಾಜಿ ಶಾಸಕ

ಹೆಚ್ಚಿನ ಸುದ್ದಿ